ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯಾದ್ಯಂತ ಜೂನ್ 30ರಿಂದ ಜುಲೈ 29ರವರೆಗೆ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಮನೆ-ಮನೆ ಸಮೀಕ್ಷೆ ನಡೆಯುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ಅರುಣ್ ಕರೆ ನೀಡಿದ್ದಾರೆ.
ಮಾಜಿ ಉನ್ನತ ಶಿಕ್ಷಣ ಸಚಿವರು ಹಾಗೂ ಮಾಜಿ ಸಭಾಪತಿಗಳಾದ ಡಿ.ಎಚ್. ಶಂಕರಮೂರ್ತಿ ಅವರ ‘ಸತ್ಯ ಶಂಕರ’ ನಿವಾಸದಲ್ಲಿ ಚುನಾವಣಾ ಆಯೋಗದಿಂದ ನಿಯೋಜಿಸಲ್ಪಟ್ಟ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಸಲ್ಲಿಸುವ ಮೂಲಕ ಡಿ.ಎಸ್. ಅರುಣ್ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನೆ-ಮನೆಗೆ ಭೇಟಿ ನೀಡುವ ಬಿಎಲ್‌ಒಗಳಿಗೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು. ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ತಮ್ಮ ಹೆಸರು ಹಾಗೂ ವೈಯಕ್ತಿಕ ವಿವರಗಳು ಮತದಾರರ ಪಟ್ಟಿಯಲ್ಲಿ ನಿಖರವಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
Also read: ಅರಳಗುಪ್ಪೆ ಹಾಲ್ಟ್, ಹಳ್ಳಿಗುಡಿ ನಿಲ್ದಾಣಗಳಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ಅವಧಿ ಮುಂದುವರಿಕೆ
ಪ್ರಜಾಪ್ರಭುತ್ವವನ್ನು ಬಲಪಡಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಮತದಾರರ ಮೇಲಿದೆ. ಮತದಾನದ ಹಕ್ಕು ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಅತ್ಯಗತ್ಯವಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಎಲ್ಲರೂ ತಪ್ಪದೇ ಪಾಲ್ಗೊಂಡು ಶ್ರೇಷ್ಠ ಪ್ರಜಾತಂತ್ರವನ್ನು ಇನ್ನಷ್ಟು ಸದೃಢಗೊಳಿಸಬೇಕು ಎಂದು ಅವರು ಕರೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









