ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಂಪೂರ್ಣ ಹಾಗೂ ಕನಿಷ್ಟ ದಾಖಲೆ ಹೊಂದಿರುವ ರೈತರಿಗೆ ಮುಂದಿನ ಎರಡು-ಮೂರು ವರ್ಷದಲ್ಲಿ ಖಚಿತವಾಗಿ ದರ್ಖಾಸ್ತು ಪೋಡಿ ಮಾಡಿಕೊಡಲಾಗುವುದು. ರೈತರ ಈ ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಕಂದಾಯ ಇಲಾಖೆ ದೃಢವಾದ ಹೆಜ್ಜೆ ಇಟ್ಟಿದೆ ಎಂದು ಸಚಿವ ಕೃಷ್ಣ ಬೈರೇಗೌಡ #Krishna Byregowda ಅವರು ಭರವಸೆ ನೀಡಿದರು.
ಶುಕ್ರವಾರ ವಿಕಾಸಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳ ಮಾಸಿಕ ಸಭೆಯಲ್ಲಿ ಕಳೆದ ಒಂದು ವರ್ಷದಿಂದ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿ ಅಧಿಕಾರಿಗಳನ್ನು ಗುರುತಿಸಿ “ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ-2024” ಪ್ರಶಸ್ತಿ ಹಾಗೂ ಅಭಿನಂದನಾ ಪತ್ರ ನೀಡಲಾಯಿತು. ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, “
“ವಾಸ್ತವದಲ್ಲಿ ರಾಜ್ಯಾದ್ಯಂತ ಎಷ್ಟು ಜನ ರೈತರ ಪೋಡಿ ಕೆಲಸ ಬಾಕಿ ಇದೆ ಎಂಬ ಮಾಹಿತಿಯಾಗಲಿ, ಅಂಕಿಸಂಖ್ಯೆಯಾಗಲಿ ಸರ್ಕಾರದ ಬಳಿ ಇಲ್ಲ. ಹಾಗಾಗಿ ಈ ವಿಚಾರದಲ್ಲಿ ಪ್ರಗತಿ ಕೆಲಸವೊಂದೇ ಬಾಕಿ ಇದ್ದು, ಸೆಪ್ಟೆಂಬರ್.2 ರಿಂದಲೇ ದರ್ಖಾಸ್ತು ಪೋಡಿ ಬಾಕಿ ಕೆಲಸ ಅಭಿಯಾನ ಮಾದರಿಯಲ್ಲಿ ಆರಂಭಿಸಲಾಗಿದೆ. ರೈತರ ನಮೂನೆ 1-5 ದಾಖಲೆಗಳನ್ನು ಪರಿಶೀಲಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ” ಎಂದು ಮಾಹಿತಿ ನೀಡಿದರು.
Also read: ಮಾತೃಭಾಷೆಯಿಂದ ಬಹುಭಾಷಾ ಪ್ರಾವೀಣ್ಯತೆ ಸಾಧ್ಯ: ಕೆ.ವಿ. ಜಯಕುಮಾರ್ ಅಭಿಪ್ರಾಯ
“ರಾಜ್ಯಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳ ಮಟ್ಟದಲ್ಲಿ ಕನಿಷ್ಟ 4 ಲಕ್ಷ ರೈತರಿಗೆ ಸಂಬಂಧಿಸಿದ 69,437 ಸರ್ವೇ ನಂಬರ್ಗಳಲ್ಲಿ ನಮೂನೆ 1-5 ದಾಖಲೆಗಳನ್ನು ಪರಿಶೀಲಿಸಲಾಗಿದೆ. ಅಂದರೆ ಸಂಬಂಧ ಪಟ್ಟ ರೈತರ ಕಡತಗಳನ್ನು ತಯಾರು ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಈ ದಾಖಲೆಗಳನ್ನು ಒಂದುಗೂಡಿಸಿ ರೈತರು ಪೋಡಿಗೆ ಅರ್ಹರೇ ಎಂದು ಗುರುತಿಸಲಾಗುವುದು. ಆರ್ಐ, ಶಿರಸ್ತೇದಾರ್ ಹಾಗೂ ತಹಶೀಲ್ದಾರ್ ಈ ಬಗ್ಗೆ ಪರಿಗಣಿಸಿ ನಂತರ ನಮೂನೆ 6-10 ರ ಪ್ರಕ್ರಿಯೆಗೆ ಸರ್ವೇ ಇಲಾಖೆಗೆ ಪೋಡಿಗೆ ಶೀಫಾರಸು ಮಾಡುತ್ತಾರೆ. ತದನಂತರ ರೈತರಿಗೆ ಪೋಡಿ ಲಭ್ಯವಾಗುತ್ತದೆ” ಎಂದರು.
ರಾಜ್ಯಾದ್ಯಂತ ಪೋಡಿ ಅಭಿಯಾನ ಜಾರಿಗೊಳಿಸುವ ನಿಟ್ಟಿನಲ್ಲಿ ಹಾಸನ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯಲ್ಲಿ ಈ ಹಿಂದೆ ಒಟ್ಟು 8279 ಸರ್ಕಾರಿ ಸರ್ವೇ ನಂಬರ್ಗಳಲ್ಲಿ 80,000 ರೈತರಿಗೆ ಜಮೀನು ಮಂಜೂರು ಮಾಡಲಾಗಿದೆ. ಪರಿಣಾಮ ದುರಸ್ಥಿ ಕೆಲಸ ಸವಾಲಾಗಿದ್ದು, ಇದೀಗ ಅಕ್ಟೋಬರ್ನಿಂದ ಭೂಮಿ ಸರ್ವೇ ಕೆಲಸಗಳನ್ನು ಆರಂಭಿಸಲಾಗುವುದು. ಅಕ್ಟೋಬರ್ ಅಂತ್ಯದೊಳಗೆ ಕೆಲವರಿಗೆ ಪೋಡಿ ಮಾಡಿಕೊಡಲಾಗುವುದು. ಹಾಸನದಲ್ಲಿ 35,000 ರೈತರ ಬಳಿ ಸಂಪೂರ್ಣ ದಾಖಲೆ ಇದೆ. ಹೀಗಾಗಿ ಈ ವರ್ಷದಲ್ಲಿ ಕನಿಷ್ಟ 30,000 ರೈತರಿಗೆ ಪೋಡಿ ಮಾಡಿಕೊಡಲಾಗುವುದು. ಇದೇ ಮಾದರಿಯನ್ನು ರಾಜ್ಯಾದ್ಯಂತ ಜಾರಿಗೊಳಿಸಲಾಗುವುದು” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು.
ಖಾಸಗಿ ಸರ್ವೇ ನಂಬರ್ ಪೋಡಿಗೂ ಅಭಿಯಾನ
ರಾಜ್ಯಾದ್ಯಂತ 22 ಲಕ್ಷ ಖಾಸಗಿ ಸರ್ವೇ ನಂಬರ್ಗಳಲ್ಲಿ ಒಬ್ಬರಿಗಿಂತ ಹೆಚ್ಚು ಮಾಲೀಕರಿದ್ದಾರೆ. ಪ್ರತಿಯೊಬ್ಬರ ಹಿಸ್ಸಾಗೆ ತಕ್ಕಂತೆ ಪ್ರತ್ಯೇಕ ಪಹಣಿ ಮಾಡಿಕೊಡಬೇಕಾದ್ದು ಕಂದಾಯ ಇಲಾಖೆಯ ಮೂಲಕ ಕರ್ತವ್ಯ. ಆದರೆ, ಈವರೆಗೆ ಆ ಕೆಲಸ ಆಗಿಲ್ಲ. ನಾವು ಹೀಗೆ ಪಹಣಿ ಮಾಡಿಕೊಡಲು ಮುಂದಾದರೆ ಕನಿಷ್ಟ 60 ಲಕ್ಷ ಜನರಿಗೆ ಮಾಡಿಕೊಡಬೇಕಾಗುತ್ತದೆ. ನಾವೂ ದರ್ಖಾಸ್ತು ಪೋಡಿ ಕೆಲಸದ ಜೊತೆಗೆ ಅದನ್ನೂ ಮಾಡಿಕೊಡಲು ತೀರ್ಮಾನಿಸಿದ್ದೇವೆ. ಅದೇ ಕಾರಣಕ್ಕೆ ಹಿಂದೆ ಪೋಡಿ ಮುಕ್ತ ಅಭಿಯಾನ ಆರಂಭಿಸಲಾಗಿತ್ತು. ಆದರೆ, ನಮ್ಮನ್ನು ಹುಡುಕಿ ಬಂದವರಿಗೆ ಪಹಣಿ ಮಾಡಿಕೊಡಲಾಯಿತೇ ವಿನಃ ಎಲ್ಲರಿಗೂ ಮಾಡಿಕೊಡಲಾಗಿಲ್ಲ. ಆದರೆ, ಈ ಬಾರಿ ಒಟ್ಟು ಎಷ್ಟು ಬಾಕಿ ಇದೆ ಅದನ್ನೆಲ್ಲ ಟಾರ್ಗೆಟ್ ಆಗಿ ತಗೊಂಡು ಎಲ್ಲರಿಗೂ ಕೆಲಸ ಮಾಡಿಕೊಡಲಾಗುವುದು ಎಂದರು
ಬಗರ್ ಹುಕುಂ ವಿಲೇ ಪ್ರಕ್ರಿಯೆ ಆರಂಭ
ಬಗರ್ ಹುಕುಂ ನಮೂನೆ 57ರ ಅಡಿಯಲ್ಲಿ ಒಟ್ಟಾರೆ 9.80ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಅನರ್ಹ ಅರ್ಜಿಗಳೇ ಅಧಿಕ. ಈ ಅರ್ಜಿಗಳ ವಿಲೇವಾರಿಗೆ ಈಗಾಗಲೇ ರಾಜ್ಯಾದ್ಯಂತ 160 ಬಗರ್ ಹುಕುಂ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ತಿಂಗಳೂ ಕನಿಷ್ಟ ಮಟ್ಟದ ಅರ್ಜಿ ವಿಲೇ ಆಗಬೇಕು, ಮುಂದಿನ ಎಂಟು ತಿಂಗಳಲ್ಲಿ ಎಲ್ಲಾ ಅರ್ಜಿಗಳನ್ನೂ ವಿಲೇಗೊಳಿಸಬೇಕು. ಅಲ್ಲದೆ, ಅರ್ಹರಿಗೆ ಭೂ ಮಂಜೂರು ಮಾಡಬೇಕು ಎಂದು ಈಗಾಗಲೇ ತಹಶೀಲ್ದಾರ್ ಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ರಾಜ್ಯಾದ್ಯಂತ ಶೇ. 81.74 ರಷ್ಟು ಆಧಾರ್ ಸೀಡಿಂಗ್
ರಾಜ್ಯಾದ್ಯಂತ ಈವರೆಗೆ ಶೇ. 81.74 ರಷ್ಟು ಆಧಾರ್ ಸೀಡಿಂಗ್ ಕೆಲಸವನ್ನು ಪೂರ್ಣಗೊಳಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, “ರಾಜ್ಯಾದ್ಯಂತ 4,09,87,831 ರಷ್ಟು ಜಮೀನುಗಳ ಆಧಾರ್ ಸೀಡಿಂಗ್ ಮಾಡುವುದು ಇಲಾಖೆಯ ಗುರಿ. ಈ ಪೈಕಿ ಸುಮಾರು 61 ಲಕ್ಷ ಜಮೀನುಗಳು ಕೃಷಿಯೇತರ ಚಟುವಟಿಕೆಗೆ ಉಪಯೋಗವಾಗುತ್ತಿದೆ. ಇದನ್ನು ಆಧಾರ್ ಸೀಡಿಂಗ್ ಮಾಡುವುದು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ನಿವೇಶನಗಳು ಇರುತ್ತದೆ. ನಾವು ಕೃಷಿ ಭೂಮಿಯಲ್ಲಿ ಮಾತ್ರ ಸೀಡಿಂಗ್ ಮಾಡಲು ಸಾಧ್ಯ. ಈವರೆಗೆ 2.15 ಕೋಟಿ ಜಮೀನುಗಳಿಗೆ ಆಧಾರ್ ಅಥೆಂಟಿಫಿಕೇಷನ್ ಕೆಲಸ ಮುಗಿಸಲಾಗಿದ್ದು, ಆಧಾರ್ ಸೀಡಿಂಗ್ ವಿಚಾರದಲ್ಲಿ ಶೇ. 81.74 ರಷ್ಟು ಪ್ರಗತಿ ಸಾಧಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಮುಂದುವರೆದು, “ರಾಜ್ಯಾದ್ಯಂತ 48,16,813 ಜಮೀನುಗಳ ಮಾಲೀಕರು ನಿಧನರಾಗಿದ್ದಾರೆ. ಆದರೆ, ಅವರ ಹೆಸರಲ್ಲೇ ಪಹಣಿ ಮುಂದುವರೆಯುತ್ತಿದೆ. ಈ ಎಲ್ಲರಿಗೂ ಶೀಘ್ರದಲ್ಲಿ ಫವತಿ ಖಾತೆ ಆಂದೋಲನದ ಅಡಿಯಲ್ಲಿ ಖಾತೆ ಬದಲಿಸಿಕೊಡಲಾಗುವುದು” ಎಂದು ಅವರು ತಿಳಿಸಿದರು.
ಸಂಪುಟ ನಿರ್ಧಾರಕ್ಕೂ ಮೂಡಾ ಕೇಸ್ಗೂ ಸಂಬಂಧ ಇಲ್ಲ!
ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆಗಳ ಸಿಬ್ಬಂದಿಗಳ ಮೇಲಿನ ಪ್ರಕರಣಗಳನ್ನು ಸಿಬಿಐ ತನಿಖೆಗೆ ತೆಗೆದುಕೊಳ್ಳುವ ಬಗ್ಗೆ ಗುರುವಾರದ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದಕ್ಕೆ ಬೇರೆ ಅರ್ಥ ನೀಡುವ ಅಗತ್ಯ ಇಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯ ಪಟ್ಟಿದ್ದಾರೆ
ಈ ಬಗ್ಗೆ ಮಾತನಾಡಿರುವ ಅವರು, “ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಯಾವುದೇ ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡುವ ಬಗ್ಗೆ ತಪ್ಪು ಗ್ರಹಿಕೆ ಆಗಿದೆ. ಅಸಲಿಗೆ ಯಾರೇ ಶಾಸಕ ಸಚಿವ ಅಥವಾ ಖಾಸಗಿ ವ್ಯಕ್ತಿಗಳ ವಿರುದ್ಧ ಸಿಬಿಐ ವಿಚಾರಣೆ ಗೈಗೆತ್ತಿಕೊಳ್ಳಬೇಕು ಎಂದರೆ ಸರ್ಕಾರದ ಅನುಮತಿ ಕಡ್ಡಾಯ ಎಂಬ ನಿಯಮ ಈಗಾಗಲೇ ಇದೆ. ರಾಜ್ಯ ಸರ್ಕಾರದ ಅನುಮತಿ ತೆಗೆದುಕೊಂಡೇ ಸಿಬಿಐ ಅಧಿಕಾರಿಗಳು ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಬೇಕು. ಈ ಸಂಬಂಧ ಸರ್ಕಾರ ಯಾವ ಬದಲಾವಣೆಯನ್ನೂ ಮಾಡಿಲ್ಲ. ಇದೇ ಕಾರಣಕ್ಕೆ ಇಂದು ಸಿಬಿಐ ಯಾವುದೇ ಪ್ರಕರಣ ತನಿಖೆಗೆ ತೆಗೆದುಕೊಳ್ಳಬೇಕು ಎಂದರೆ ಒಂದೋ ರಾಜ್ಯ ಸರ್ಕಾರ ಅನುಮತಿ ನೀಡಬೇಕು. ಇಲ್ಲವೇ ನ್ಯಾಯಾಲಯ ನಿರ್ದೇಶಿಸಬೇಕು ಎಂಬುದು ನಿಯಮ.
ಆದರೆ, 2005 ರಲ್ಲಿ ನಾವು ಒಂದು ವಿನಾಯಿತಿ ನೀಡಿದ್ದೆವು. ಕೆಲವು ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆಗಳ ಸಿಬ್ಬಂದಿಗಳ ಮೇಲೆ ಕೇಸ್ ತಗೆದುಕೊಳ್ಳಲು ರಾಜ್ಯ ಸರ್ಕಾರ ಸಿಬಿಐ ಗೆ ವಿನಾಯಿತಿ ನೀಡಿತ್ತು. ಈಗ ಆ ವಿನಾಯಿತಿಯನ್ನು ನಮ್ಮ ಸರ್ಕಾರ ಹಿಂಪಡೆದಿದೆ ಅಷ್ಟೆ. ಏಕೆಂದರೆ ಕಾನೂನು ಪ್ರಕಾರ ಆ ಹಕ್ಕು ಇರುವುದು ರಾಜ್ಯ ಪೊಲೀಸರಿಗೆ ಮಾತ್ರ. ಹೀಗಾಗಿ ಈ ನಿರ್ಧಾರ ಯಾವುದೇ ಮಂತ್ರಿ ಅಥವಾ ಮುಖ್ಯಮಂತ್ರಿಗಳಿಗೆ ಸಂಬಂಧಪಟ್ಟ ವಿಚಾರ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮುನಿರತ್ನ ಅಪರಾಧದಲ್ಲಿ ಬಿಜೆಪಿಗರೂ ಭಾಗಿ..?
ಶಾಸಕ ಮುನಿರತ್ನ ಅವರ ಎಲ್ಲಾ ಅಪರಾಧ ಪ್ರಕರಣಗಳನ್ನೂ ಬಿಜೆಪಿಯ ಇತರೆ ನಾಯಕರೂ ಭಾಗಿಯಾಗಿದ್ದಾರ? ಇದೇ ಕಾರಣಕ್ಕೆ ಎಲ್ಲರೂ ಒಟ್ಟಾಗಿ ಮುನಿರತ್ನನನ್ನು ಉಳಿಸುವ ಕೆಲಸಕ್ಕೆ ಮುಂದಾಗಿದ್ದಾರ? ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅನುಮಾನ ವ್ಯಕ್ತಪಡಿಸಿದರು.
ವಿಕಾಸಸೌಧದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಮುನಿರತ್ನ ತನ್ನನ್ನು ವಿಕಾಸಸೌಧ ಕಚೇರಿಯಲ್ಲೇ ಅತ್ಯಾಚಾರ ಮಾಡಿದ್ದಾರೆ. ಕೆಲವು ಅತ್ಯಾಚಾರ ಪ್ರಕರಣಗಳಿಗೆ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ ಎಂದು ಮಹಿಳೆಯೊಬ್ಬರು ನ್ಯಾಯಾಧೀಶರ ಎದುರು ಸೆಕ್ಷನ್ 164 ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಇದಲ್ಲದೆ, ರಾಜಕೀಯ ಹೊಂದಾಣಿಕೆ ಇಲ್ಲದ ಕಾರಣ ಅವರದ್ದೇ ಪಕ್ಷದಲ್ಲಿರುವ ಎದುರಾಳಿ ಕಾರ್ಪೊರೇಟರ್ ಪತಿಗೆ ಏಡ್ಸ್ ಸೋಂಕಿತ ಮಹಿಳೆಯ ಮೂಲಕ ಹನಿಟ್ರ್ಯಾಪ್ ಮಾಡಿಸಿ ಆತನಿಗೂ ಮಾರಕ ರೋಗ ಹರಡಿಸುವ ಯೋಜನೆ ರೂಪಿಸಿದ್ದಾರೆ. ಓರ್ವ ಐಎಎಸ್ ಅಧಿಕಾರಿ ಕೂಡ ಇವರ ಸಹಾಯ ತಗೊಂಡು ಮತ್ತೊಬ್ಬರನ್ನು ಹನಿಟ್ರ್ಯಾಪ್ ಮಾಡಲು ಮುಂದಾಗಿರುವ ಬಗ್ಗೆ ತನಿಖೆಯಿಂದ ಮಾಹಿತಿ ಹೊರಬಿದ್ದಿದೆ.
ಈತ ಎಷ್ಟು ಜನಕ್ಕೆ ಏಡ್ಸ್ ಹಬ್ಬಿಸಿದ್ದಾರೆ. ಎಷ್ಟು ಜನರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿದ್ದಾರೆ ಗೊತ್ತಿಲ್ಲ. ವಿಕಾಸಸೌಧದಲ್ಲೂ ಅತ್ಯಾಚಾರದಂತಹ ಗಂಭೀರ ಅಪರಾಧ ಎಸಗಿದ್ದಾರೆ. ಈ ಬಗ್ಗೆ ಸ್ವತಃ ಸಂತ್ರಸ್ಥೆ ನ್ಯಾಯಾಲಯದ ಎದುರು ಹೇಳಿಕೆ ದಾಖಲಿಸಿದ್ದಾರೆ. ಇವೆಲ್ಲಾ ಗಾಳಿಯಲ್ಲಿ ಗುಂಡು ಹಾರಿಸುವ ಹಿಟ್ ಅಂಡ್ ರನ್ ಹೇಳಿಕೆಗಳಲ್ಲ. ಇವೆಲ್ಲವೂ ಸಂತ್ರಸ್ತೆ ನ್ಯಾಯಾಲಯದ ಎದುರು ನೀಡಿರುವ ಹೇಳಿಕೆ. ಆದರೆ, ಇಷ್ಟೆಲ್ಲಾ ಆಗಿದ್ರೂ ಮುನಿರತ್ನ ಅವರನ್ನು ಬಿಜೆಪಿ ಅಮಾನತು ಮಾಡಿದೆಯಾ? ಇದು ಅವರಿಗೆ ರಕ್ಷಣೆ ಹೌದ ಅಲ್ವ? ಸಂತ್ರಸ್ತೆ ನ್ಯಾಯಾಧೀಶರ ಎದುರು ನೀಡಿದ ಹೇಳಿಕೆಯೂ ಲೆಕ್ಕಕ್ಕೆ ಇಲ್ವ. ಮುನಿರತ್ನ ಅವರ ಎಲ್ಲಾ ಅಪರಾಧ ಕೆಲಸದಲ್ಲೂ ಬಿಜೆಪಿಯೂ ಭಾಗವಾಗಿರುವುದರಿಂದ ಬಿಜೆಪಿ ನಾಯಕರು ಅವರ ರಕ್ಷಣೆಗೆ ನಿಂತಿದ್ದಾರ? ಎಂದು ಅವರು ಪ್ರಶ್ನಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post