ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗೋವು ಸಾಗಾಣಿಕೆ ವೇಳೆ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಸೇರಿದಂತೆ ಐವರನ್ನು ರಾಜಸ್ಥಾನದಲ್ಲಿ ಬಂಧಿಸುವಲ್ಲಿ ರಾಮನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಎಡಿಜಿಪಿ ಅಲೋಕ್ ಕುಮಾರ್, ಕೊನೆಗೆ ಬೆಕ್ಕು ಮತ್ತು ಇಲಿ ಆಟ ಮುಗಿಯಿತು. ಸಾತನೂರು ಘಟನೆಯಲ್ಲಿ ಭಾಗಿಯಾಗಿದ್ದ ಪುನೀತ್ ಕೆರೆಹಳ್ಳಿ ಮತ್ತು ತಂಡ, ಸುದೀರ್ಘ ಬೆನ್ನಟ್ಟಿದ ಬಳಿಕ ಕೊನೆಗೂ ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯಲ್ಲಿ ಸೆರೆ. ತಮ್ಮ ನಿರಂತರ ಪ್ರಯತ್ನಕ್ಕಾಗಿ ಎಸ್ಪಿ ರಾಮನಗರ ಮತ್ತು ತಂಡಕ್ಕೆ ಅಭಿನಂದನೆಗಳು. ಸೂಕ್ತ ತನಿಖೆಯಿಂದ ನ್ಯಾಯ ಸಿಗಲಿದೆ ಎಂದಿದ್ದಾರೆ.

ಕನಕಪುರ ತಾಲೂಕಿನ ಸಾತನೂರು ಬಳಿ ಮಾರ್ಚ್ 31ರ ರಾತ್ರಿ ಮಂಡ್ಯದಿಂದ ಗೋವುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹನವನ್ನು ಪುನೀತ್ ಕೆರೆಹಳ್ಳಿ ಹಾಗೂ ಸಂಗಡಿಗರು ತಡೆದು, ಜಾಲತಾಣಗಳಲ್ಲಿ ವೀಡಿಯೋ ಹಂಚಿಕೊಂಡಿದ್ದರು. ಈ ವೇಳೆ ಕ್ಯಾಂಟರ್’ನಲ್ಲಿನ ಚಾಲಕ ಹಾಗೂ ಮತ್ತೊಬ್ಬ ಪರಾರಿಯಾಗಿದ್ದರೆ, ವಾಹನದಲ್ಲಿದ್ದ ಇದ್ರೀಶ್ ಪಾಷ ಘಟನೆ ನಡೆದ 200 ಮೀಟರ್ ದೂರದಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದರು. ಈ ಪ್ರಕರಣ ಸಂಬಂಧ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ನೈತಿಕ ಪೊಲೀಸ್ ಗಿರಿ ಮಾಡಿದ್ದು ಇದ್ರಿಷ್ ಪಾಷಾ ಎಂಬ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಮೃತ ಇದ್ರಿಷ್ ಪಾಷಾ ಕುಟುಂಬಸ್ಥರು ಸೇರಿ ರಾಜ್ಯದ ಹಲವೆಡೆ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಿ ಪುನೀತ್ ಬಂಧನಕ್ಕೆ ಒತ್ತಾಯಿಸಿದ್ದರು. ಪ್ರಕರಣ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ 3 ಎಫ್’ಐಆರ್ ದಾಖಲಾಗಿದ್ದ ಹಿನ್ನೆಲೆ ಇಂದು ಸಾತನೂರು ಪೊಲೀಸರು ಪುನೀತ್ ಕೆರೆಹಳ್ಳಿ ಸೇರಿ ಐವರನ್ನು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ.

ಪುನೀತ್ ಕೆರೆಹಳ್ಳಿಯನ್ನು ಬಂಧಿಸಲು ಒಟ್ಟು 4 ತಂಡಗಳನ್ನು ರಚನೆ ಮಾಡಿದ್ದ ರಾಮನಗರ ಜಿಲ್ಲಾ ಪೊಲೀಸರು ಮೊದಲು ಹುಬ್ಬಳ್ಳಿ, ಮಹಾರಾಷ್ಟç, ಗುಜರಾತ್, ಸೂರತ್’ಗಳಲ್ಲಿ ಹುಡುಕಾಡಿದ್ದಾರೆ. ರಾಜಸ್ಥಾನದಲ್ಲಿ ಓಡಾಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಬಳಿಕ ರಾಜಸ್ಥಾನ ಪೊಲೀಸರ ಸಹಾಯದಿಂದ ರಾಜಸ್ಥಾನದ ಗಡಿ ಜಿಲ್ಲೆ ಬನಸ್ವಾರ ಎಂಬಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪುನೀತ್ ಕೆರೆಹಳ್ಳಿ ಸೇರಿ ರಾಮನಗರದ ಗೋಪಿ, ತೀರ್ಥಹಳ್ಳಿಯ ಪವನ್ ಕುಮಾರ್, ಬಸವನಗುಡಿಯ ಪಿಲ್ಲಿಂಗ್ ಅಂಬಿಗಾರ್, ರಾಯಚೂರಿನ ಸುರೇಶ್’ರನ್ನು ಬಂಧಿಸಲಾಗಿದೆ. ಅಲ್ಲಿನ ನ್ಯಾಯಾಲಯದ ಅನುಮತಿ ಬಳಿಕ ಆರೋಪಿಗಳನ್ನು ರಾಜ್ಯಕ್ಕೆ ಕರೆತರಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ವಿವಾದಕ್ಕೆ ಕಾರಣವಾಗಿದ್ದ ಇದ್ರಿಷ್ ಪಾಷಾ ಅನುಮಾನಸ್ಪದ ಸಾವಿನ ಬಗ್ಗೆ ಇನ್ನೂ ಕೂಡ ಸ್ಪಷ್ಟತೆ ದೊರಕಿಲ್ಲ. ಆತನ ಸಾವಿನ ನಿಖರ ಕಾರಣ ಏನು? ಯಾರು ಇದಕ್ಕೆ ಕಾರಣ ಎಂಬುದು ಎಫ್’ಎಸ್’ಎಲ್ ವರದಿ ಹಾಗೂ ತನಿಖೆಯಿಂದ ಬಳಿಕಷ್ಟೇ ಗೊತ್ತಾಗಲಿದೆ.










Discussion about this post