ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿವಿಧ ಕ್ಷೇತ್ರಗಳಲ್ಲಿ ಇಂಧನ ದಕ್ಷತೆ ಸುಧಾರಣೆಗೆ ಮಾರ್ಗಸೂಚಿಯನ್ನು ಒದಗಿಸಲು ಮುಂದಾಗಿರುವ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮವು ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ) ಸಹಯೋಗದಲ್ಲಿ ‘ಕರ್ನಾಟಕ ರಾಜ್ಯ ಇಂಧನ ದಕ್ಷತೆಯ ಕ್ರಿಯಾ ಯೋಜನೆ’ (ಕೆ-ಸೀಪ್)ಯನ್ನು Karnataka State Energy Efficiency Action Plan ಬಿಡುಗಡೆ ಮಾಡಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ರಾಜ್ಯ ಇಂಧನ ದಕ್ಷತೆಯ ಕ್ರಿಯಾ ಯೋಜನೆಯ ವರದಿ ಬಿಡುಗಡೆ ಮಾಡಿದ ಬಳಿಕ ಮಾತನಾಡಿದರು.
“ಹಸಿರುಮನೆ ಅನಿಲ ಹೊರಸೂಸುವಿಕೆ ಮತ್ತು ವಾಯುಮಾಲಿನ್ಯದಿಂದ ಹೆಚ್ಚಿರುವ ಜಾಗತಿಕ ತಾಪಮಾನ ತಗ್ಗಿಸುವಲ್ಲಿ ಇಂಧನ ದಕ್ಷತೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸಂಪನ್ಮೂಲ ಸಂರಕ್ಷಣೆ, ಆರ್ಥಿಕ ಪ್ರಯೋಜನ, ಪರಿಸರ ಸಂರಕ್ಷಣೆ, ತಾಪಮಾನ ತಗ್ಗಿಸುವಿಕೆ, ಉದ್ಯೋಗ ಸೃಷ್ಟಿ ಮತ್ತು ಇಂಧನ ಭದ್ರತೆಯಂತಹ ಹಲವಾರು ಪ್ರಯೋಜನಗಳಿರುವುದರಿಂದ ರಾಜ್ಯಕ್ಕೆ ಇಂಧನ ದಕ್ಷತೆಯ ಕ್ರಿಯಾ ಯೋಜನೆ ಅತ್ಯಗತ್ಯ,” ಎಂದು ಗೌರವ್ ಗುಪ್ತ ತಿಳಿಸಿದರು.
“ನವೀಕರಿಸಬಹುದಾದ ಇಂಧನ ಮೂಲಗಳಿಗೆ ಪರಿವರ್ತನೆ, ಇಂಧನ ದಕ್ಷತೆಯನ್ನು ಸುಧಾರಿಸುವುದು ಮತ್ತು ಕೈಗಾರಿಕೆಗಳಲ್ಲಿ ಸುಸ್ಥಿರ ಅಭ್ಯಾಸಗಳನ್ನು ಅನುಷ್ಠಾನಗೊಳಿಸುವುದರಿಂದ ಇಂಗಾಲದ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ನಿಗ್ರಹಿಸಬಹುದು. ಅಲ್ಲದೇ, ಅಂತಾರಾಷ್ಟ್ರೀಯ ಸಹಯೋಗ, ಸರ್ಕಾರ, ಉದ್ದಿಮೆಗಳು ಮತ್ತು ಜನರು ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ತಾಪಮಾನ ತಗ್ಗಿಸಲು ನವೀನ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುವುದು ಬಹಳ ಮುಖ್ಯವಾಗುತ್ತದೆ,” ಎಂದು ಗೌರವ್ ಗುಪ್ತ ಹೇಳಿದರು.
“ಕರ್ನಾಟಕ ರಾಜ್ಯ ಇಂಧನ ದಕ್ಷತೆಯ ಕ್ರಿಯಾ ಯೋಜನೆ (ಕೆ-ಸೀಪ್) ವರದಿಯು ಸುಸ್ಥಿರ ಇಂಧನ ಅಭ್ಯಾಸಗಳ ಕಡೆಗೆ ನಾವು ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ. ಈ ಉಪಕ್ರಮವು ನವೀಕರಿಸಬಹುದಾದ ಇಂಧನ ಮತ್ತು ಇಂಧನ ಸಂರಕ್ಷಣೆಯಲ್ಲಿ ಕರ್ನಾಟಕದ ಸಾಮರ್ಥ್ಯವನ್ನು ಹೆಚ್ಚಿಸುವ ಸಮಗ್ರ ಮಾರ್ಗಸೂಚಿಯನ್ನು ಒದಗಿಸುತ್ತದೆ,” ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ ಪಿ ರುದ್ರಪ್ಪಯ್ಯ ಹೇಳಿದರು.
Also read: Let MLA Yatnal submit the documents of BJP scam before the enquiry commission: CM
“ರಾಜ್ಯ ಇಂಧನ ದಕ್ಷತೆಯ ಕ್ರಿಯಾ ಯೋಜನೆ” ವರದಿಯು ಇಂಧನ ದಕ್ಷತೆಯ ಗುರಿಗಳನ್ನು ಸಾಧಿಸಲು ಮಾರ್ಗಸೂಚಿಯನ್ನು ಒದಗಿಸುತ್ತದೆ. ಕೈಗಾರಿಕೆ, ಕಟ್ಟಡ, ಸಾರಿಗೆ ಮತ್ತು ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಇಂಧನ ಉಳಿತಾಯ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿತದ ಅವಕಾಶಗಳ ಬಗ್ಗೆ ವರದಿ ಬೆಳಕು ಚೆಲ್ಲುತ್ತದೆ,” ಎಂದು ರುದ್ರಪ್ಪಯ್ಯ ವಿವರಿಸಿದರು.
ಕಾರ್ಯಪಡೆ ರಚನೆ
ಪ್ರಸ್ತಾವಿತ ಕಾರ್ಯತಂತ್ರಗಳು, ಎನ್‌ಡಿಸಿಗಳಿಗೆ ಅನುಗುಣವಾಗಿ ಗುರಿ ಸಾಧಿಸಲು ಸಂಪನ್ಮೂಲಗಳ ನಿಯೋಜನೆಗೆ ನೆರವಾಗಲಿದೆ. ಅದೇ ರೀತಿ ಕ್ರಿಯಾ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಸರ್ಕಾರ, ಉದ್ಯಮ, ಎನ್‌ಜಿಒಗಳು, ಇಂಧನ ತಜ್ಞರು ಮತ್ತು ವಿಷಯಕ್ಕೆ ಸಂಬಂಧಿಸಿದ ಪ್ರತಿನಿಧಿಗಳನ್ನು ಒಳಗೊಂಡ ಕಾರ್ಯಪಡೆಯನ್ನು ರಚಿಸುವುದು ಅತ್ಯಗತ್ಯ. ಈ ಕಾರ್ಯಪಡೆಯು ಆದ್ಯತೆ ಮೇರೆಗೆ ಕಾರ್ಯ ಪ್ರಗತಿಯ ಮೇಲ್ವಿಚಾರಣೆಯನ್ನೂ ಮಾಡಬೇಕಿದೆ.
ಅನುದಾನ, ಸಾಲ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ಒಳಗೊಂಡಂತೆ ಯೋಜನೆಗೆ ಆರ್ಥಿಕ ಬೆಂಬಲ ಅಗತ್ಯವಿದೆ. ಹಾಗಾಗಿ, ಇಂಧನ ದಕ್ಷತೆಯ ಬಾಂಡ್‌ಗಳಂತಹ ನವೀನ ಹಣಕಾಸು ಕಾರ್ಯವಿಧಾನಗಳು ಇಂಧನ ದಕ್ಷತೆ ಯೋಜನೆಯಲ್ಲಿ ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ನೆರವಾಗಬಲ್ಲದು ಎಂದು ವರದಿ ತಿಳಿಸಿದೆ.
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮವು ಕೇಂದ್ರ ಇಂಧನ ಸಚಿವಾಲಯದ ಪ್ರತಿಷ್ಠಿತ ‘ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ 2023’ಕ್ಕೆ ಪಾತ್ರವಾಗಿದೆ. ಕರ್ನಾಟಕವು ಸತತ ಮೂರು ವರ್ಷಗಳಿಂದ, ಅಂದರೆ ಎಸ್.ಇ.ಇ.ಐ 2020 ಮತ್ತು ಎಸ್.ಇ.ಇ.ಐ 2021-2022, 2023ರ ಅವಧಿಯಲ್ಲಿ “ಫ್ರಂಟ್ ರನ್ನರ್” ಎಂಬ ಮನ್ನಣೆಗೆ ಪಾತ್ರವಾಗಿರುವ ಅಂಶವನ್ನು ಸ್ಮರಿಸಬಹುದು.
ಕಾರ್ಯಕ್ರಮದಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ, ಸಿಐಐನ ಪ್ರಧಾನ ಸಲಹೆಗಾರರಾದ ನಿಶಾ ಜಯರಾಮ್ ಮತ್ತು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
(ವರದಿ: ಡಿ.ಎಲ್. ಹರೀಶ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post