ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾನು ಮುಷ್ತಾಕ್ #Banu Mushtaq ಮಾನವೀಯತೆ ಮತ್ತು ಭಾರತೀಯತೆಯನ್ನು ಬೆಸೆಯುವ ನೇಕಾರರು. ಇವರಿಗೆ ಬಂದಿರುವ ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿ ನಾಗರಿಕತೆಯ ಬಯಕೆ ಆಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರು ನುಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬಹುರೂಪಿ ಮತ್ತು ಗಾಂಧಿ ಪ್ರತಿಷ್ಠಾನ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರನ್ನು ಅಭಿನಂದಿಸಿ ಮಾತನಾಡಿದರು.

ಸಾಹಿತ್ಯದ ಹೆಸರಿನಲ್ಲಿ ಕೊಡುತ್ತಿರುವ ಈ ಸಂದೇಶವು, ಎಲ್ಲ ಮೂಲಭೂತವಾದಿ ಶಕ್ತಿಗಳಿಗೆ ಕೊಟ್ಟಿರುವ ಕಪಾಳಮೋಕ್ಷ ಎಂದು ನಾನು ಭಾವಿಸುತ್ತೇನೆ. ಇದು ಎಲ್ಲಾ ರೀತಿಯ ಧಾರ್ಮಿಕ ದರ್ಪಗಳಿಗೆ ಕೊಟ್ಟಿರುವ ಏಟು ಮತ್ತು ಮಾನವೀಯ ಧರ್ಮಕ್ಕೆ, ಎಲ್ಲಾ ಧರ್ಮದಲ್ಲಿರುವ ಮಾನವೀಯ ವ್ಯಕ್ತಿತ್ವಗಳಿಗೆ ಸಿಕ್ಕಿರುವ ಮನ್ನಣೆ ಕೂಡ ಆಗಿದೆ.

ಆದರೆ ಬಾನು ಅವರಿಗೆ ಪ್ರಶಸ್ತಿ ಲಭಿಸಿರುವುದು ಹೆಚ್ಚಿನ ಸಂತೋಷವನ್ನು ನೀಡಿದೆ ಏಕೆಂದರೆ ಮೂಲಭೂತವಾದಿ ಶಕ್ತಿಗಳಿಗೆ ಎಲ್ಲರೂ ಶರಣಾಗುತ್ತಿರುವ ಅಸಹಾಯಕತೆಯ ಹೊತ್ತಿನಲ್ಲಿ ಬಾನು ಅವರು ರಾಜಿ ಮಾಡಿಕೊಳ್ಳದೆ ಹೇಳಬೇಕಾದ್ದನ್ನು ಮುಲಾಜಿಲ್ಲದೆ ತಮ್ಮ ಕತೆಗಳಲ್ಲಿ, ಭಾಷಣಗಳಲ್ಲಿ, ಲೇಖನಗಳಲ್ಲಿ ದಾಖಲಿಸಿದ್ದಾರೆ. ಈ ಕಾರಣಕ್ಕೆ ಬಾನು ಮುಷ್ತಾಕ್ ಅವರಿಗೆ ಸಿಕ್ಕಿರುವ ಮನ್ನಣೆ ಕನ್ನಡದ ಮೂಲಕ ಇಡೀ ನಾಗರಿಕತೆಯ ಆಶಯಕ್ಕೆ ಸಿಕ್ಕಿರುವ ಮನ್ನಣೆ ಅಂಥಲೇ ಭಾವಿಸುತ್ತೇನೆ. ಇದಕ್ಕಾಗಿ ಹೆಚ್ಚು ಸಂತೋಷ ಪಡುತ್ತೇನೆ.

ಬಂಡಾಯ ಸಾಹಿತ್ಯದ ಧಾರೆಯಲ್ಲಿ ಬಾನು ಅವರದ್ದು ವಿಶಿಷ್ಠವಾದ ಧ್ವನಿ. ತಮ್ಮ ಕಥೆಗಳಲ್ಲಿ ಮೆಲು ಧ್ವನಿಯಲ್ಲಿ ಇದು ಸಾಧ್ಯವಿದೆಯೇ, ಹೀಗಿರಬಹುದೇ, ಹೀಗಿರುವುದು ಸರಿಯೇ, ಇದಕ್ಕೆ ನಿಮ್ಮ ಅಂತ:ಸಾಕ್ಷಿ ಒಪ್ಪುತ್ತದೆಯೇ ? ಎಂಬ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳುತ್ತಾ ಇಡೀ ನಾಗರಿಕತೆಯನ್ನೇ ಪ್ರಶ್ನಿಸುತ್ತಾರೆ.
ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿ ಘೋಷಣೆಯಾದ ಬಳಿಕ ಬಾನು ಅವರ ‘ಒಮ್ಮೆ ಹೆಣ್ಣಾಗು ಪ್ರಭುವೆ’ ಕಥೆಯನ್ನು ನಾನು ಓದಿದೆ. ಇದರಲ್ಲಿ ಅಂತ:ಕರಣವಿರುವ ದೇವರೂ ಸಹ ಗಂಡಾಳಿಕೆಯನ್ನು ಎತ್ತಿಹಿಡಿಯುವುದಾದರೇ, ಅವನು ದೇವರು ಹೇಗಾಗಲು ಸಾಧ್ಯ? ಹೆಣ್ಣನ್ನು ಮನುಷ್ಯಳಾಗಿ ಒಪ್ಪಿಕೊಳ್ಳುವ ಶಕ್ತಿ ಇರುವ ದೇವರನ್ನು ಒಪ್ಪಿಕೊಳ್ಳಬಹುದು, ಇಂತಹ ಶಕ್ತಿಯನ್ನು ಅಂತಿಮ ಶಕ್ತಿಯೆಂದು ಒಪ್ಪಿಕೊಳ್ಳಬಹುದು, ಹೆಣ್ಣಿನ ಸಂವೇದನೆಯನ್ನು ಬೆಳೆಸಿಕೊಳ್ಳಲು ದೈವವಾದರೂ ಪ್ರೇರೇಪಿಸಲಿ ಎಂಬ ಭಾವವನ್ನು ವ್ಯಕ್ತಪಡಿಸಿದ್ದಾರೆ.

ಸಾವಿನ ಮನೆಯಲ್ಲಿ ತಾನು ಅನ್ನ ತಿನ್ನುವಾಗ ಮನೆಯಲ್ಲಿ ಹಸಿದ ಬಾಣಂತಿ ಮಗುವಿನ ಜ್ಞಾಪಕವಾಗಿ, ತಾನು ಆಹಾರ ಸೇವಿಸಲೋ ,ಬೇಡವೋ ಎಂಬ ಬಗ್ಗೆ ತಾಯಿಯಲ್ಲಿ ಗೊಂದಲ ಶುರುವಾಗುತ್ತದೆ. ‘ಕೊನೆಗೂ ಕರುಳಿನ ಕೂಗು ಗೆದ್ದವು’ ಎಂದು ಹಸಿವಿನ ಕೂಗು ಗೆದ್ದಿರುವ ಬಗ್ಗೆ ಲೇಖಕಿ ಪ್ರಸ್ತಾಪಿಸಿದ್ದಾರೆ. ಎಲ್ಲರ ಆಶ್ರಯದಾತ ಎಂದು ಕರೆಯಲ್ಪಡುವ ದೇವರು , ತಮಗೆ ಮಾತ್ರ ಅನ್ನವನ್ನು ನೀಡುತ್ತಿಲ್ಲವಲ್ಲ ಎಂಬ ಪ್ರಶ್ನೆಯನ್ನು ತಾಯಿ ಕೇಳುತ್ತಾಳೆ.

ಬಾನು ಅವರ ಕತೆಗಳು , ಲೋಕದ ಜೊತೆಗೆ ನಡೆಸುವ ಮಾತುಗಳು ಆಗಿವೆ. ಬಾನು ಅವರು ಇತರೆ ದೊಡ್ಡ ಲೇಖಕರಿಗಿಂತ ನಾಲ್ಕು ಹೆಜ್ಜೆ ಮುಂದೆ ಹೋಗಿದ್ದಾರೆಂದು ನನಗೆ ಅನ್ನಿಸುವುದು ಏಕೆ ಗೊತ್ತಾ? ಭಾನು ಅವರು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಮೈಗೆ ಎಣ್ಣೆ ಹಚ್ಚಿಕೊಂಡು ಸೇಫಾಗಿ ಬರವಣಿಗೆ ಮಾಡಿದವರಲ್ಲ.
ಜನಪರ ಚಳವಳಿಗಳೊಂದಿಗೆ ತಮ್ಮನ್ನು ತಾವು ಗುರುತಿಸಿಕೊಂಡಿದ್ದು, ಹಾಗೂ ಖಚಿತ ಜನಪರ ನಿಲುವನ್ನು ತೆಗೆದುಕೊಂಡು ಆ ನಿಲುವಿಗೆ ಬದ್ಧವಾಗಿ ನಿಲ್ಲುವ ಗಟ್ಟಿತನ ಅವರಲ್ಲಿದೆ.
ಲಂಕೇಶ್ ಅವರಿಗೇ ರಾಜಕೀಯ ಪಾಠ ಮಾಡಿದ್ದರು
ಬಾನು ಅವರು ಒಬ್ಬ ಅನುಭವಿ ರಾಜಕಾರಣಿ ಕೂಡ ಹೌದು. ಏಕೆಂದರೆ ಇವರು ಲಂಕೇಶ್ ಅವರಿಗೂ ರಾಜಕೀಯ ತಿಳಿವಳಿಕೆ ಹೇಳಿದ್ದರು.
ನಗರಸಭೆ ಚುನಾವಣೆಗೆ ಸ್ಫರ್ಧಿಸಿದ್ದ ಬಾನು ಅವರಿಗೆ ರಾಜಕೀಯ ರಣರಂಗದ ಪರಿಚಯವೂ ಇದೆ. ಲಂಕೇಶ್ ಪ್ರಗತಿ ರಂಗ ಮಾಡುವ ಹೊತ್ತಲ್ಲಿ, “ರಾಜಕೀಯ ಪಕ್ಷ ಮಾಡಬೇಡಿ. ಪ್ರಗತಿರಂಗವನ್ನು ಶುರು ಮಾಡಬೇಡಿ. ಅದು ವಿಫಲವಾಗಲಿದೆ, ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದಾಗ ಲಂಕೇಶ್ ಅದನ್ನು ಒಪ್ಪುವುದಿಲ್ಲ .

ಲಂಕೇಶ್ ಅವರಿಗೆ ಮುಖ್ಯಮಂತ್ರಿಗಳನ್ನು ಮಂಡಿಯೂರುವಂತೆ ಮಾಡುವ ಶಕ್ತಿ ಇದ್ದ ಹೊತ್ತಲ್ಲೇ ಬಾನು ಅವರು ಸ್ವತಃ ಲಂಕೇಶ್ ಅವರಿಗೇ ರಾಜಕೀಯ ತಿಳಿವಳಿಕೆ ಹೇಳಿದ್ದರು. ಇವರ ಈ ತಿಳಿವಳಿಕೆ ಸತ್ಯ ಕೂಡ ಆಯ್ತು. ಪ್ರಗತಿರಂಗ ಸಕ್ಸಸ್ ಆಗಲಿಲ್ಲ.
ಬಾಬಾ ಬುಡನ್ ಗಿರಿ ಘಟನೆಯಾಗಿರಲಿ, ಯಾವುದೇ ಹೋರಾಟವಾಗಿರಲಿ ಎಲ್ಲಾ ಹೊತ್ತಿನಲ್ಲಿಯೂ ಬಾನು ಅವರು ಸಾಮಾಜಿಕ, ರಾಜಕೀಯ ಕಾರ್ಯಕರ್ತೆಯಾಗಿ ಗಟ್ಟಿಯಾಗಿ ನಿಂತಿದ್ದಾರೆ. ಪತ್ರಕರ್ತೆಯಾಗಿ, ಬರಹಗಾರರಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ, ಮಹಿಳೆಯಾಗಿ, ಮುಸ್ಲಿಂ ಮಹಿಳೆಯಾಗಿ ಬಾನು ಅವರಿಗೆ ಬಹಳ ದೊಡ್ಡ ಸ್ಥಾನವಿದೆ ಎನ್ನುವುದನ್ನು ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿ ಇಡೀ ಜಗತ್ತಿಗೆ ಸಾರಿ ಹೇಳಿದೆ.
ಒಟ್ಟಿನಲ್ಲಿ ಬಾನು ಅವರಿಗೆ ಸಿಕ್ಕಿರುವ ವಿಶ್ವ ಮನ್ನಣೆ ಏಕ ಕಾಲಕ್ಕೆ ಕನ್ನಡಕ್ಕೆ, ಭಾರತೀಯ ಸಾಹಿತ್ಯ ಪರಂಪರೆಗೆ, ನಮ್ಮ ನಾಡಿನ ಸಾಂಸ್ಕೃತಿಕ ನಾಯಕರಾಗಿರುವ ನಿಜವಾದ ವಿಶ್ವಗುರು ಬಸವಣ್ಣನವರಾದಿಯಾಗಿ ಅಕ್ಕಮಹದೇವಿ ಮತ್ತು ಎಲ್ಲಾ ಶರಣ, ಸೂಫಿ ಪರಂಪರೆಗೆ, ಈ ಪರಂಪರೆಯ ಮೌಲ್ಯಗಳಿಗೆ ಸಿಕ್ಕಿರುವ ಮನ್ನಣೆ ಎಂದು ಭಾವಿಸುತ್ತೇನೆ.
ವಿಶ್ವ ಮಾನ್ಯತೆ ಗಳಿಸಿರುವ ಬಾನು ಮುಷ್ತಾಕ್ ಅವರಿಗೆ ಸ್ಥಳೀಯವಾಗಿ, ನಮ್ಮ ರಾಜ್ಯದಲ್ಲಿ ಸಿಗಬೇಕಾದ ಎಲ್ಲಾ ರೀತಿಯ ಅರ್ಹ ಗೌರವ ಮತ್ತು ಮನ್ನಣೆಗಳು ಸಿಗಲಿವೆ. ಜೂನ್ 2 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಮಸ್ತ ಕನ್ನಡ ಜಗತ್ತಿನ ಪರವಾಗಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ಬಹುರೂಪಿ ಜಿ.ಎನ್.ಮೋಹನ್, ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ವಿಜಯವಾಣಿ ಪತ್ರಿಕೆ ಸಂಪಾದಕರಾದ ಚನ್ನೇಗೌಡರು, ಗಾಂಧಿ ಭವನದ ಹೆಚ್.ಸಿ. ದಿನೇಶ್ ಅವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post