ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದ ಬಸವನಗುಡಿಯಲ್ಲಿ ಪ್ರತಿ ವರ್ಷ ನಡೆಯುವ ಇತಿಹಾಸ ಪ್ರಸಿದ್ಧ, ಗ್ರಾಮೀಣ ಸೊಗಡಿನ ಕಡಲೆಕಾಯಿ ಪರಿಷೆ ನಡೆಸಲು ಈ ಬಾರಿ ಬಿಬಿಎಂಪಿ ಅನುಮತಿ ನೀಡಿದೆ.
ಕಾರ್ತಿಕ ಮಾಸದ ಕೊನೆಯ ಸೋಮವಾರದಿಂದ 3 ದಿನ ಕಡಲೆಕಾಯಿ ಪರಿಷೆ ನಡೆಯಲಿದ್ದು, 482 ವರ್ಷಗಳ ಇತಿಹಾಸವುಳ್ಳ ಈ ಸಂಭ್ರಮ, ಸಡಗರಕ್ಕೆ ಕಳೆದ ವರ್ಷ ಕೋವಿಡ್ ಅಡ್ಡಿಯಾಗಿತ್ತು. ಆದರೆ, ಈ ಬಾರಿ ಅನುಮತಿ ದೊರೆತಿರುವುದು ಸಾರ್ವಜನಿಕರ ಸಂತಸಕ್ಕೆ ಕಾರಣವಾಗಿದೆ.
ರಾಜ್ಯ ಹಾಗೂ ಹೊರ ರಾಜ್ಯದ ವ್ಯಾಪಾರಿಗಳು ಇಲ್ಲಿ ಬೀಡುಬಿಡಲಿದ್ದು, ಪರಿಷೆಯಲ್ಲಿ ವಿವಿಧ ತಳಿಯ ಕಡಲೆಕಾಯಿಗಳದ್ದೇ ಕಾರುಬಾರು. ಬೆಂಗಳೂರು ನಗರ ಸೇರಿದಂತೆ ವಿವಿಧ ಕಡೆಗಳಿಂದ ಲಕ್ಷಾಂತರ ಜನರು ಪರಿಷೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಕಳೆದ ಸಾಲಿನಲ್ಲಿ ಕೋವಿಡ್ ಕಾರಣದಿಂದಾಗಿ ಧಾರ್ಮಿಕ ದತ್ತಿ ಇಲಾಖೆ, ದೊಡ್ಡಬಸವಣ್ಣ ದೇವಸ್ಥಾನದ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬೀದಿ ಬದಿ ಅಂಗಡಿ ಮುಂಗಟ್ಟುಗಳನ್ನು ತೆರೆಯುವುದು ಹಾಗೂ ರಸ್ತೆ ಬದಿ ಕಡಲೆಕಾಯಿ ಮಾರಾಟಕ್ಕೂ ನಿರ್ಬಂಧ ವಿಧಿಸಿತ್ತು. ಇದೀಗ ಅನುಮತಿ ನೀಡಲಾಗಿದ್ದು, ಈ ಬಾರಿಯ ಪರಿಷೆ ನೋಡುಗರ ಗಮನ ಸೆಳೆಯಲಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಕಡಲೆಕಾಯಿ ಪರಿಷೆಗೆ ಬಿಬಿಎಂಪಿಯಿಂದ ಅನುಮತಿ ನೀಡಲಾಗಿದ್ದು, ಎಂದಿನಂತೆ ಪರಿಷೆ ನಡೆಸಲು ಬಿಬಿಎಂಪಿ ಹಸಿರು ನಿಶಾನೆ ತೋರಲಾಗಿದೆ. ಬೆಂಗಳೂರಿನ ಹಬ್ಬ ಎಂದು ಕರೆಯಲ್ಪಡುವ ಕಡಲೆಕಾಯಿ ಪರಿಷೆ ಕಾರ್ತಿಕ ಮಾಸದ ಕೊನೆಯ ಸೋಮವಾರ ನಡೆಯುವ ಜಾತ್ರೆಯಾಗಿದೆ. ಯಾವುದೇ ತೊಂದರೆ ಇಲ್ಲದಂತೆ ಈ ಬಾರಿ ಪರಿಷೆ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post