ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ನನ್ನ ಜೀವನದಲ್ಲಿ ನಾನು ಎಂದಿಗೂ ಸ್ಫೋಟವಾಗುವುದಿಲ್ಲ. ಸತ್ಯ ಕಂಡಾಗ ಮುನ್ನುಗುತ್ತೇನೆ. ಯಾರ ಕತ್ತು ಕೊಯ್ದು ದಾರಿ ತಪ್ಪುವುದಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಯಾವುದೇ ಕಾರಣಕ್ಕೂ ರಾಜ್ಯಪಾಲರಿಗೆ ದೂರು ಕೊಟ್ಟಿಲ್ಲ. ಮುಂದೆಯೂ ಕೊಡುವುದಿಲ್ಲ. ರಾಜ್ಯಪಾಲ ವಿಆರ್ ವಾಲಾ ಅವರು ಗುಜರಾತ್ ರಾಜ್ಯದಲ್ಲಿ ಆರ್ಥಿಕ ಸಚಿವರಾಗಿದ್ದವರು. ಹೀಗಾಗಿ ಇಲಾಖೆಯ ಆರ್ಥಿಕತೆ ಅನುದಾನದ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಅವರ ಬಳಿ ಹೋಗಿದ್ದೆ ಹೊರತು ಯಡಿಯೂರಪ್ಪ ವಿರುದ್ಧ ದೂರು ಕೊಟ್ಟಿಲ್ಲ. ಮುಂದೆಯೂ ಕೊಡುವುದಿಲ್ಲ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ ರವಿ, ಪಕ್ಷದ ನಾಯಕರು. ಹೀಗಾಗಿ ಅವರ ಗಮನಕ್ಕೆ ಇಲಾಖೆಯ ವಿಚಾರವನ್ನು ತಂದಿದ್ದೆ. ಅಮಿತ್ ಶಾ, ಸಿ.ಟಿ ರವಿ, ಅರುಣ್ ಸಿಂಗ್ ಎಲ್ಲರೂ ಬಿಜೆಪಿ ಪಕ್ಷದ ಕುಟುಂಬ ಸದಸ್ಯರೇ. ಕುಟುಂಬ ಎಂದು ಪರಿಗಣಿಸಿದಾಗ ಸಹಜವಾಗಿಯೇ ಇಲಾಖೆಯಲ್ಲಿನ ಬೆಳವಣಿಗೆ ವಿಷಯದ ಬಗ್ಗೆ ಅವರುಗಳ ಗಮನಕ್ಕೆ ತಂದಿದ್ದೇನೆಯೇ ಹೊರತು ಯಾರಿಗೂ ಯಡಿಯೂರಪ್ಪ ವಿರುದ್ಧ ದೂರು ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಬೇರೆ ಇಲಾಖೆಯಲ್ಲಿ ನೇರವಾಗಿ ಸಿಎಂ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ಆದರೆ ಹಣ ಬಿಡುಗಡೆ ಮಾಡಬಹುದು ಎಂದು ಮತ್ತೆ ಸೂಚ್ಯವಾಗಿ ಹೇಳಿದ ಈಶ್ವರಪ್ಪ ಈ ಬಗ್ಗೆ ಹೆಚ್ಚು ಚರ್ಚೆಯ ಅವಶ್ಯಕತೆಯಾಗಲೀ ಮಾತಾಗಲೀ ಬೇಡ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post