ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ D K Shivkumar ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಬಿಜೆಪಿಯ ಆಂತರಿಕ ಸಮೀಕ್ಷೆಯಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂಬ ವರದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ ನಿಮಗೆ ತಪ್ಪು ಮಾಹಿತಿ ಬಂದಿದೆ. ನಮ್ಮ ವರದಿಯಲ್ಲಿ 10 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಬಂದಿದೆ. ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪುತ್ತೂರು ಪ್ರವಾಸ ಮಾಡಬೇಕಿತ್ತು. ಆದರೆ ಅಲ್ಲಿನ ರೋಡ್ ಶೋ ಅನ್ನು ಕಾನೂನು ಸುವ್ಯವಸ್ಥೆ ಕಾರಣದಿಂದ ರದ್ದು ಮಾಡಲಾಗಿದೆ ಎಂದು ಬಿಜೆಪಿ ಅಧ್ಯಕ್ಷರು ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಕೇಂದ್ರ ಗೃಹ ಸಚಿವರಿಗೆ ಕಾನೂನು ರಕ್ಷಣೆ ಇಲ್ಲ ಎಂದರೆ ಜನ ಸಾಮಾನ್ಯರ ಪರಿಸ್ಥಿತಿ ಏನಾಗಬೇಕು? ಎಂದು ರಾಜ್ಯದ ಜನರಿಗೆ ಕೇಳಬಯಸುತ್ತೇನೆ. ರಾಜ್ಯಕ್ಕೆ ಇದಕ್ಕಿಂತ ದೊಡ್ಡ ಅಪಮಾನ ಬೇರೆ ಏನು ಬೇಕು?

Also read: ವೈಭವಯುತ ಸಾಗರ ಶ್ರೀ ಮಾರಿಕಾಂಬ ಜಾತ್ರೆ: ಸಾವಿರಾರು ಜನರಿಗೆ ಅನ್ನಸಂತರ್ಪಣೆ
ಈ ಭಾಗದಲ್ಲಿ ಹತ್ಯೆ ನಡೆದಾಗ ಬಿಜೆಪಿ ಕಾರ್ಯಕರ್ತರು ಮಂತ್ರಿ ಹಾಗೂ ಬಿಜೆಪಿ ಅಧ್ಯಕ್ಷರ ವಿರುದ್ಧ ಹೇಗೆ ಪ್ರತಿಭಟನೆ ನಡೆಸಿದರು ಎಂದು ನಿಮಗೆ ಗೊತ್ತೇ ಇದೆ. ಹಿಂದುತ್ವದ ಹೆಸರಿನ ಹೋರಾಟದಲ್ಲಿ ಬಿಜೆಪಿ ನಾಯಕರ ಮಕ್ಕಳು ಬಲಿಯಾಗಿಲ್ಲ. ಬಡವರ ಮಕ್ಕಳನ್ನು ಬಲಿ ಪಡೆಯುತ್ತಿದ್ದಾರೆ. ಈ ಬಗ್ಗೆ ಜನರಿಗೆ ಉತ್ತರ ನೀಡುವ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳಿಗೆ ಬಿಡುತ್ತೇನೆ ‘ ಎಂದು ತಿಳಿಸಿದರು.

ಬಿಜೆಪಿ ಹಿಂದುತ್ವ ಈ ಬಾರಿ ಚುನಾವಣೆಯಲ್ಲಿ ವರ್ಕ್ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, ‘ ನಾನು ಶಿವಮೊಗ್ಗಕ್ಕೆ ಹೋಗಿದ್ದಾಗ ಆಯನೂರು ಮಂಜುನಾಥ್ ಅವರು ಮೋದಿ, ಅಮಿತ್ ಶಾ, ಕಟೀಲ್ ಅವರ ಫೋಟೋ ಹಾಕಿಕೊಂಡು ಗೂಂಡಾ, ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಿ, ಕೋಮುಗಲಭೆ, ದಂಗೆ, ರಕ್ತಪಾತ ರಹಿತ, ನಿಷೇದಾಜ್ಞೆ ಮುಕ್ತ ನೆಮ್ಮದಿಯ ಶಿವಮೊಗ್ಗಕ್ಕೆ ಬೆಂಬಲ ನೀಡುವಂತೆ ಬೋರ್ಡ್ ಹಾಕಿಕೊಂಡಿದ್ದಾರೆ. ಅಂದರೆ ಶಿವಮೊಗ್ಗದಲ್ಲಿ ನೆಮ್ಮದಿ, ಶಾಂತಿ ಇಲ್ಲವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಸಂಸದ, ಎಂ ಎಲ್ ಸಿ ಆಗಿದ್ದ ಆಯನೂರು ಮಂಜುನಾಥ ಅವರಿಗೆ ನಾವು ಹೇಳುತ್ತಿದ್ದ ಸತ್ಯ ಒಪ್ಪಿರುವುದಕ್ಕೆ ಸೆಲ್ಯೂಟ್ ಮಾಡುತ್ತೇನೆ. ಬಿಜೆಪಿ ಆಡಳಿತದಲ್ಲಿ ಸಾಮಾಜಿಕ ಸೌಹಾರ್ದತೆ ನಾಶವಾಗಿದ್ದು ಮಲೆನಾಡು ಹಾಗೂ ಕರಾವಳಿಯಲ್ಲಿ ಬಂಡವಾಳ ಹೂಡಿಕೆಗೆ ಯಾರೂ ಮುಂದೆ ಬರುತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡದ ಸರ್ಕಾರವನ್ನು ಕಿತ್ತುಹಾಕಬೇಕು. ಬಿಜೆಪಿಯವರು ಅಂಬೇಡ್ಕರ್ ಅವರ ಸಂವಿಧಾನದ ಹೆಸರಲ್ಲಿ ಪ್ರತಿಜ್ಞೆ ಮಾಡಿ ಅಧಿಕಾರ ಸ್ವೀಕರಿಸಿ ನಂತರ ಎಲ್ಲಾ ವರ್ಗದ ರಕ್ಷಣೆ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ಯಡಿಯೂರಪ್ಪ ಅವರ ಜಿಲ್ಲೆ, ಮಲೆನಾಡು, ಕರಾವಳಿ ಭಾಗದಲ್ಲಿ ಇದು ಸಾಧ್ಯವಾಗಿಲ್ಲ ಎಂದು ಅವರ ಪ್ರಣಾಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ. ಇದಕ್ಕಿಂತ ಮತ್ತೇನು ಬೇಕು? ಎಂದು ತಿಳಿಸಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post