ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಎರಡೂವರೆ ವರ್ಷದ ಗಂಡು ಮಗು ಕೊರೋನಾ ಸೋಂಕಿನಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಗುವನ್ನು ಜೂ.17 ರಂದು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ದೃಢಪಟ್ಟಿತ್ತು. ಆದರೆ ಭಾನುವಾರ ಮಗು ಮೃತಪಟ್ಟಿದೆ ಎಂದು ಡಿಎಚ್‌ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ಆಗಸ್ಟ್ ವೇಳೆಗೆ ಕೊರೋನ ಮೂರನೇ ಅಲೆ ಪ್ರಾರಂಭವಾಗಲಿದೆ ಎಂದು ತಜ್ಞರು ಮುನ್ನೆಚ್ಚರಿಕೆ ನೀಡುತ್ತಿರುವುದರ ನಡುವೆಯೇ ಮಗು ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
3ನೆಯ ಅಲೆ ಎದುರಿಸಲು ಸರಕಾರದ ಸಕಲ ಸಿದ್ಧತೆ:
ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ಎದುರಿಸಲು ಪ್ರತಿ ತಾಲೂಕಿನಲ್ಲಿಯೂ ಮಕ್ಕಳಿಗಾಗಿ ಪ್ರತ್ಯೇಕ ಕೊವಿಡ್ ಕೇರ್ ಸೆಂಟರ್ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ವಿಕಾಸಸೌಧದಲ್ಲಿ 3ನೇ ಅಲೆ ನಿಯಂತ್ರಣ ಕುರಿತು ಬೆಂಗಳೂರು ನಗರ ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯ ಜನ ಪ್ರತಿನಿಧಿಗಳು ಅಧಿಕಾರಿಗಳ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಎರಡನೆ ಅಲೆಯಲ್ಲಿ ಸುಮಾರು 50 ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡಿದ್ದಾರೆ. ಅವರಿಗೆ ಬಾಲ ಸೇವಾ ಯೋಜನೆಯ ಮೂಲಕ ಪ್ರತಿ ತಿಂಗಳು ಮಗುವಿಗೆ 3500 ರೂ. ನೀಡುವುದು, ಅಲ್ಲದೆ ಉಚಿತ ಶಿಕ್ಷಣ ನೀಡುವುದು, 21 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ 1ಲಕ್ಷ ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ತಂದೆ ತಾಯಿಗಳನ್ನು ಮಕ್ಕಳನ್ನು ನೋಡಿಕೊಳ್ಳಲು ಸಂಬಂಧಿಗಳು ಶಕ್ತರಿಲ್ಲದಿದ್ದರೆ ಇಲಾಖೆ ಮೂಲಕ ದತ್ತು ಸ್ವೀಕಾರ ಕ್ರಮ ಕೈಗೊಳ್ಳಲಾಗುವುದು. ಯಾರಾದರೂ ದಾನಿಗಳು ಅವರ ಜೀವನಕ್ಕೆ ಉಜ್ವಲ ಭವಿಷ್ಯ ರೂಪಿಸಲು ಮುಂದೆ ಬಂದರೆ ಅಂತ ಮಕ್ಕಳ ಭವಿಷ್ಯ ರೂಪಿಸಲು ಇಲಾಖೆ ಕೊಂಡಿಯಾಗಿ ಕೆಲಸ ಮಾಡಲಿದೆ.
ಮೂರನೆ ಅಲೆ ನಿಯಂತ್ರಿಸಲು ಮಹಿಳಾ ಮತ್ತು ಮಕ್ಕಳ ಇಲಾಖೆ, ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ದಿ ಮತ್ತು ಪೊಲೀಸ್ ಇಲಾಖೆ ಮಕ್ಕಳನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ. ಮಕ್ಕಳಿಗೆ ಸೋಂಕು ದೃಢ ಪಟ್ಟರೆ ಕೊವಿಡ್ ಕೇರ್ ಸೆಂಟರ್ ಗೆ ಮಗುವಿನೊಂದಿಗೆ ತಾಯಿಯೂ ಇರಲು ಅವಕಾಶ ಮಾಡಲಾಗಿದೆ. ಯುವತಿಯರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗುವುದು. ಅಂಗವಿಕಲರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರತ್ಯೇಕ ಮಕ್ಕಳ ಕೋವಿಡ್ ಆಸ್ಪತ್ರೆ:
ಬೆಂಗಳೂರು ನಗರ ಜಿಲ್ಲೆಯಲ್ಲಿ ಸಾಕಷ್ಟು ಆಸ್ಪತ್ರೆಗಳನ್ನು ಗುರುತಿಸಲಾಗಿದ್ದು, ಅದರ ಹೊರತಾಗಿ ಮಕ್ಕಳಿಗಾಗಿಯೇ ಪ್ರತ್ಯೇಕ ಕೋವಿಡ್ ಆಸ್ಪತ್ರೆ ತೆರೆಯಲು ಸಲಹೆ ಬಂದಿದೆ. ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು. ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ 1419 ಬೆಡ್ ಗಳನ್ನು ಗುರುತಿಸಲಾಗಿದೆ. 141 ವೆಂಟಿಲೇಟರ್ ಉಳ್ಳ ಐಸಿಯು ಬೆಡ್ ಗಳು, 116 ಐಸಿಯು ರಹಿತ ಬೆಡ್ ಗಳು, 430 ಹೆಚ್ ಡಿಯು ಬೆಡ್ ಗಳು, 712 ಸಾಮಾನ್ಯ ಬೆಡ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಬೆಡ್ ಬೇಡಿಕೆ ಇದೆ. ಮಕ್ಕಳಿಗೆ ಪ್ರತ್ಯೇಕವಾದ ಮಾಸ್ಕ್, ವೆಂಟಿಲೇಟರ್, ಬೆಡ್, ಔಷಧ, ಮಾತ್ರೆ ಬೇಕಾಗುತ್ತದೆ ಅದರ ಸಿದ್ದತೆಯೂ ನಡೆಯುತ್ತಿದೆ ಎಂದರು.
ಜಿಲ್ಲೆಯಲ್ಲಿ ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಮಕ್ಕಳ ತಜ್ಞರನ್ನು ಗುರುತಿಲಾಗಿದೆ. ಕಳೆದ ಒಂದು ವರ್ಷದಲ್ಲಿ ಕೊರೋನಾ ಸೋಂಕಿನಿಂದ ಜಿಲ್ಲೆಯಲ್ಲಿ 51 ಮಕ್ಕಳು ನಿಧನ ಹೊಂದಿದ್ದಾರೆ. ರಾಜ್ಯದಲ್ಲಿ ಇದುವರೆಗೂ 0-9 ವಯಸ್ಸಿನ 67687 ಮತ್ತು 9-18 ವಯಸ್ಸಿನ 170565 ಮಕ್ಕಳು ಒಟ್ಟು 0-18 ವಯಸ್ಸಿನ 2,38,252 ಮಕ್ಕಳು ಸೋಂಕಿಗೆ ತುತ್ತಾಗಿವೆ. ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ 2 ಮಕ್ಕಳು ತಂದೆ ತಾಯಿ ಕಳೆದುಕೊಂಡು ಅನಾಥರಾಗಿದ್ದಾರೆ. ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಮುಂಚೂಣಿ ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ನಿಂದ ನಿಧನ ಹೊಂದಿದರೆ ಅವರಿಗೆ 30 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಬೆಂಗಳೂರು ನಗರದಲ್ಲಿ 3 ಅಂಗನವಾಡಿ ಕಾರ್ಯಕರ್ತೆಯರು ನಿಧನ ಹೊಂದಿದ್ದಾರೆ. ಅಂಗನವಾಡಿ ಬಂದ್ ಇರುವುದರಿಂದ ಪ್ರತಿ 15 ದಿನಕ್ಕೊಮ್ಮೆ ಮಕ್ಕಳಿಗೆ ಆಹಾರ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಜೊತೆಗೆ ಅವರ ಆರೋಗ್ಯದ ಮಾಹಿತಿ ಪಡೆದು ಸೂಕ್ತ ಚಿಕಿತ್ಸೆ ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post