ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆದಿರುವ ಭ್ರಷ್ಟಾಚಾರ, ಅವ್ಯವಸ್ಥೆ ಹಾಗೂ ಜನರ ಹಣ ದೋಚಾಟದ ಆಘಾತಕಾರಿ ಘಟನೆಯ ಬಗ್ಗೆ ಮಾನ್ಯ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್. ಅರುಣ್ #D S Arun ಸದನದಲ್ಲಿ ಪ್ರಸ್ತಾಪಿಸಿದರು.
ಬಾಗಲಕೋಟೆಯ ಪಾಟೀಲ್ ಮೆಡಿಕಲ್ ಕೆ.ಆರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ ಸೀತಾಬಾಯಿ ಶೇಖಪ್ಪ ರಾಥೋಡ್ ಅವರ ಹೆಸರಿನಲ್ಲಿ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯ ದಾಖಲೆಗಳಲ್ಲಿ ಸಾವಿನ ನಂತರವೂ ಹಲವಾರು ಬಾರಿ ಡಯಾಲಿಸಿಸ್ ಮಾಡಿದಂತೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಆಘಾತಕರ ವಿಷಯವೆಂದರೆ, ಈ ನಕಲಿ ದಾಖಲೆಗಳಿಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳೇ ಸಹಿ ಹಾಕಿದ್ದಾರೆ ಎಂದು ಮಾನ್ಯ ಶಾಸಕರು ಸದನಕ್ಕೆ ತಿಳಿಸಿದರು.
ಇದು ಕೇವಲ ಒಂದು ಪ್ರಕರಣವಲ್ಲ,ರಾಜ್ಯದ ಹಲವಾರು ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ನಕಲಿ ಬಿಲ್‍ಗಳು ತಯಾರಾಗುತ್ತಿರುವ ಬಗ್ಗೆ ದೂರಿಗಳು ಬರುತ್ತಿವೆ. ಡಯಾಲಿಸಿಸ್ ಯಂತ್ರಗಳ ಟೆಂಡರ್ ಪಡೆದಿರುವ ಏಜೆನ್ಸಿಗಳ ಮೇಲೆ ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಮೇಲ್ವಿಚಾರಣೆಯ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಮಾನ್ಯ ಶಾಸಕರು ಆರೋಪಿಸಿದರು.
ಡಿ.ಎಸ್. ಅರುಣ್‍ರವರು ಸರ್ಕಾರವನ್ನು ತೀವ್ರವಾಗಿ ಎಚ್ಚರಿಸುತ್ತಾ, ಈ ಘಟನೆಗೆ ಸಂಬಂಧಿಸಿದ ಎಲ್ಲಾ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತಕ್ಷಣ ಅಮಾನತು ಮಾಡಿ, ಜನರ ಹಣವನ್ನು ದೋಚಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಜೊತೆಗೆ, ಇಂತಹ ಘಟನೆಗಳನ್ನು ತಡೆಯಲು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಪ್ತವಿಚಾರಣಾ ದಳ ರಚಿಸಿ ಕಟ್ಟುನಿಟ್ಟಿನ ಮೇಲ್ವಿಚಾರಣೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
ಸತ್ತವರ ಹೆಸರಿನಲ್ಲಿ ಬಿಲ್ ತಯಾರಿಸುವುದು, ನಕಲಿ ದಾಖಲೆ ಸೃಷ್ಟಿಸುವುದು,ಇದು ವೈದ್ಯಕೀಯ ಕ್ಷೇತ್ರದ ಗೌರವಕ್ಕೆ ಕಲೆ ತರುತ್ತದೆ ಹಾಗೂ ಜನರ ನಂಬಿಕೆಯನ್ನು ಹಾಳುಮಾಡುತ್ತದೆ. ಸರ್ಕಾರ ತಕ್ಷಣವೇ ಕ್ರಮ ಕೈಗೊಂಡು ಆರೋಗ್ಯ ಕ್ಷೇತ್ರದಲ್ಲಿ ಶಿಸ್ತು ಪುನಃಸ್ಥಾಪಿಸಬೇಕು, ಎಂದು ಮಾನ್ಯ ಶಾಸಕರು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post