ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ 14 ಜಿಲ್ಲೆಗಳ, 41 ತಾಲ್ಲೂಕುಗಳಲ್ಲಿನ 1199 ಗ್ರಾಮಪಂಚಾಯ್ತಿಗಳಲ್ಲಿ ಅಟಲ್ ಭೂಜಲ ಯೋಜನೆಯ ಅಡಿಯಲ್ಲಿ ಚೆಕ್ಡ್ಯಾಂ, ವಾಟರ್ ಶೆಡ್, ಡ್ರಿಪ್ ಇರಿಗೇಷನ್, ಪಾಲಿಪಾರ್ಮ್ಗಳ ನಿರ್ಮಾಣಕ್ಕೆ ಸಹಾಯಧನ ದೊರೆಯುತ್ತಿದೆ. ಇದರಿಂದ ಬಹಳಷ್ಟು ಅನುಕೂಲವಾಗಿದ್ದು, ಈ ಯೋಜನೆಯನ್ನು ಮುಂದುವರೆಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸುವಂತೆ ರೈತ ಮಹಿಳೆಯರ ಮನವಿಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು #Minister Boseraju ಸಕಾರಾತ್ಮಕವಾಗಿ ಸ್ಪಂದಿಸಿ ಕೇಂದ್ರಕ್ಕೆ ಮನವಿ ಸಲ್ಲಿಸುವ ಭರವಸೆ ನೀಡಿದರು.
ಇಂದು ಬೆಂಗಳೂರು ನಗರದ ದೂರ ಸಂವೇದಿ ಕೇಂದ್ರದಲ್ಲಿ ಆಯೋಜಿಸಿದ್ದ ಅಟಲ್ ಭೂ ಜಲ ರಥಕ್ಕೆ #Atal Bhoo Jala Ratha ಚಾಲನೆ ನೀಡಿ, ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂತರ್ಜಲ ಎನ್ನುವುದು ಅತಿ ಮುಖ್ಯವಾದ ಸಂಪನ್ಮೂಲವಾಗಿದೆ. ಈ ಸಂಪನ್ಮೂಲವನ್ನು ಜಾಗರೂಕವಾಗಿ ಬಳಸುವುದು ಹಾಗೂ ನಿರ್ವಹಣೆ ಮಾಡುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ. ಕರ್ನಾಟಕ ರಾಜ್ಯವೂ ಸೇರಿದಂತೆ ನಮ್ಮ ದೇಶದಲ್ಲಿ ಅಂತರ್ಜಲವನ್ನು ಅತಿಯಾಗಿ ಬಳಸಲಾಗುತ್ತಿದೆ. ಮನೆ ಬಳಕೆಗೆ ಶೇ.85 ರಷ್ಟು, ಕೃಷಿ ಬಳಕೆಗೆ ಶೇ.60 ರಷ್ಟು, ಹಾಗೂ ಕೈಗಾರಿಕೆಗಳಿಗೆ ಶೇ. 2 ರಷ್ಟು ಅಂತರ್ಜಲವನ್ನು ಹೊರತೆಗೆಯುತ್ತಿದ್ದೇವೆ. ಇದರಿಂದಾಗಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದೆ ಹಾಗೂ ಅತ್ಯಂತ ಅಪಾಯಕಾರಿ ಹಂತವನ್ನು ತಲುಪಿದೆ. ಇಂತಹ ಅಪಾಯಕಾರಿ ಪರಿಸ್ಥಿತಿಯನ್ನು ತಡೆಯಲು ಹಾಗೂ ಅಂತರ್ಜಲವನ್ನು ಸಮರ್ಪಕವಾಗಿ ನಿರ್ವಹಿಸಲು ಭಾರತ ಸರ್ಕಾರವು ವಿಶ್ವ ಬ್ಯಾಂಕ್ ನೆರವಿನೊಂದಿಗೆ ದಿನಾಂಕ: 25.12.2019 ರಂದು ಅಟಲ್ಭೂಜಲ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಯು ನಮ್ಮ ಕರ್ನಾಟಕ ರಾಜ್ಯದ 14 ಜಿಲ್ಲೆಗಳ, 41 ತಾಲೂಕುಗಳ 1199 ಗ್ರಾಮ ಪಂಚಾಯತಿಗಳಲ್ಲಿ ಅನುಷ್ಟಾನಗೊಳ್ಳುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಇದುವರೆಗೆ ಅಟಲ್ ಭೂಜಲ ಯೋಜನೆಯ ಅಡಿಯಲ್ಲಿ ವಿವಿಧ ಇಲಾಖೆಗಳಡಿ ರೂ. 643.44 ಕೋಟಿಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ಪೈಕಿ ಶೇಕಡಾ 97% ರಷ್ಟು ರೂ.623.93 ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ಕರ್ನಾಟಕ ರಾಜ್ಯವು ಅಟಲ್ ಭೂಜಲ ಯೋಜನೆಯ ಅನುಷ್ಟಾನದಲ್ಲಿ ಇಡೀ ದೇಶದಲ್ಲಿಯೆ ಪ್ರಥಮ ಸ್ಥಾನದಲ್ಲಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೇ ಅನುಷ್ಠಾನಗೊಳಿಸಿರುವ ಸುಮಾರು 259 ಗ್ರಾಮಪಂಚಾಯ್ತಿಗಳಲ್ಲಿ ಅಂತರ್ಜಲ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆಯಾಗಿರುವುದು ಬಹಳ ಸಂತಸದ ಸಂಗತಿಯಾಗಿದೆ ಎಂದು ಸಚಿವರು ತಿಳಿಸಿದರು.
Also read: ಮೈಸೂರು ಜಿಲ್ಲೆಗೆ ಸಾಲು ಸಾಲು ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರೈತ ಮಹಿಳೆ ಮಂಜುಳ ಅವರು ಈ ಯೋಜನೆಯಿಂದ ಆಗಿರುವ ಅನುಕೂಲತೆಗಳ ಬಗ್ಗೆ ಗಮನ ಸೆಳೆದರು. ಹಾಗೆಯೇ, ಈ ಯೋಜನೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಶೀಫಾರಸ್ಸು ಮಾಡುವಂತೆ ಮನವಿ ಸಲ್ಲಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಅಟಲ್ ಭೂಜಲ ಯೋಜನೆಯ ಅಡಿಯಲ್ಲಿ ಚೆಕ್ಡ್ಯಾಂ, ವಾಟರ್ ಶೆಡ್, ಡ್ರಿಪ್ ಇರಿಗೇಷನ್, ಪಾಲಿಪಾರ್ಮ್ಗಳನ್ನು ನಿರ್ಮಿಸಲಾಗುತ್ತದೆ. 7 ಇಲಾಖೆಗಳಿಂದ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾಗೊಳಿಸಲಾಗುತ್ತಿದ್ದು, ಇದರಿಂದ ರೈತರಿಗೆ ಅನುಕೂಲವಾಗುತ್ತಿದೆ. ಈ ಯೋಜನೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ವತಿಯಿಂದ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಗಳಾದ ರಾಘವನ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತಿತರಿದ್ದರು. ಕಾರ್ಯಕ್ರಮದಲ್ಲಿ 11 ಅಟಲ್ ಭೂಜಲ ರಥಕ್ಕೆ ಚಾಲನೆ ನೀಡಲಾಯಿತು. ಈ ವಾಹನಗಳು 28 ದಿನಗಳ ಕಾಲ 14 ಜಿಲ್ಲೆಗಳಲ್ಲಿ ಸಂಚರಿಸಲಿವೆ, ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post