ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಧರ್ಮ, ಜಾತಿ ಹೆಸರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜನರ ಮನಸ್ಸನ್ನು ಕೆಡಿಸುತ್ತವೆ. ಆ ಎರಡೂ ಪಕ್ಷಗಳಿಗೆ ಅಭಿವೃದ್ಧಿ ಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ H D Kumaraswamy ಅವರು ಟೀಕಾ ಪ್ರಹಾರ ನಡೆಸಿದರು.
ಬಸವನಗುಡಿಯಲ್ಲಿ ಜೆಡಿಎಸ್ ಕಚೇರಿಯನ್ನು ಉದ್ಘಾಟನೆ ಮಾಡುವ ಮುನ್ನ ನೆಟ್ಕಲ್ಲಪ್ಪ ವೃತ್ತದಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ಪೂಜೆ ನೆರವೇರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದರು.
ಹಿಂದೂ ಪದ ಅಶ್ಲೀಲ ಎಂದು ಶಾಸಕ ಸತೀಶ್ ಜಾರಕಿಹೊಳಿ ಅವರು ನೀಡಿರುವ ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಸೂಕ್ಷ್ಮ ವಿಚಾರ ಇಟ್ಟುಕೊಂಡು ಚುನಾವಣಾ ರಾಜಕೀಯ ಮಾಡುತ್ತಿವೆ. ಇದು ಸರಿಯಲ್ಲ ಎಂದರು.
ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಎಲ್ಲಾ ಅರಿವಿದ್ದರೂ ಜನರ ಸಮಸ್ಯೆ ಕೇಳಲು ಯಾರೂ ತಯಾರಿಲ್ಲ. ನಾನು ಹೊಡೆದಂಗೆ ಮಾಡ್ತೀನಿ, ನೀನು ಅತ್ತಂಗೆ ಮಾಡು ಎನ್ನುವಂಥ ನೀತಿ ಅನುಸರಿಸುತ್ತಿವೆ. ಇವರ ಯೋಗ್ಯತೆ ಏನು ಎನ್ನುವುದು ಜನರಿಗೆ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.
ಬಸವನಗುಡಿ ಕ್ಷೇತ್ರದಲ್ಲಿ ಹೆಚ್ಡಿಕೆ ಯಾತ್ರೆ:
ಇದಾದ ನಂತರ ಕ್ಷೇತ್ರದ ನೆಟ್ಕಲ್ಲಪ್ಪ ವೃತ್ತದಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ಪೂಜೆ ನೆರವೇರಿಸಿದ ನಂತರ ತೆರೆದ ವಾಹನದಲ್ಲಿ ಮಾಜಿ ಮುಖ್ಯಮಂತ್ರಿಗಳು ಮೆರವಣಿಗೆ ಸಾಗಿದರು. ಎನ್ ಆರ್ ಕಾಲೊನಿ, ಹನುಮಂತ ನಗರ, ಶ್ರೀನಗರ ಬಸ್ ನಿಲ್ದಾಣ, ಪಿಇ ಎಸ್ ಕಾಲೇಜು, ಹನುಮಂತನಗರ ಮುಖ್ಯರಸ್ತೆ, ಸೀತಾ ಸರ್ಕಲ್ ವರೆಗೆ ಸುಮಾರು 8 ಕಿಮೀ ದೂರ ಕ್ರಮಿಸಿದರು.
ಬಸವನಗುಡಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಇಂದಿನಿಂದ ಮನೆ ಮನೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಪಕ್ಷದ ಮುಖಂಡ ಬಾಗೇಗೌಡ ಹಾಗೂ ವಿಧಾನ ಪರಿಷತ್ ಸದಶ್ಯ ಟಿ.ಎ. ಶರವಣ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಮ್ಮ ಪಕ್ಷದ ಅಭ್ಯರ್ಥಿ ಅರಮನೆ ಶಂಕರ್ ಗೆಲುವಿಗೆ ಎಲ್ಲರೂ ಕೆಲಸ ಮಾಡುತ್ತಾರೆ ಎಂದರು ಮಾಜಿ ಮುಖ್ಯಮಂತ್ರಿ ಅವರು.
ಸೀತಾ ಸರ್ಕಲ್ ಬಳಿ ನೂತನವಾಗಿ ಸ್ಥಾಪಿಸಲಾಗಿರುವ ಜೆಡಿಎಸ್ ಕಚೇರಿಯನ್ನು ಮಾಜಿ ಮುಖ್ಯಮಂತ್ರಿಗಳು ಉದ್ಘಾಟಿಸಿದರು.
ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ, ಬಸವನಗುಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅರಮನೆ ಶಂಕರ್, ಪಕ್ಷದ ಹಿರಿಯ ಮುಖಂಡ ಬಾಗೇಗೌಡ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post