ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕೋವಿಡ್-19 Covid-19 ಸಂದರ್ಭವು ಜನರಿಗೆ ಸಾಮಾಜಿಕ ಬದುಕಿನಿಂದ ದೂರವುಳಿದು ಆನ್‌ಲೈನ್ ಜೀವನವನ್ನು ಕಲಿಸಿದ್ದರ ಫಲವಾಗಿ ಜಗತ್ತಿನಾದ್ಯಂತ ಕಾರ್ಪೋರೇಟ್‌ಗಳ ಆದಾಯವು ಅಪಾರವಾಗಿ ಹೆಚ್ಚಾಯಿತು. ಇದರಿಂದ ತಳವರ್ಗಗಳು ಅನುಭವಿಸಿದ ನಷ್ಟಗಳನ್ನು ಸಮಾಜಶಾಸ್ತ್ರರು ಸಂಶೋಧಿಸಿ ನ್ಯಾಯ ಒದಗಿಸಬೇಕು ಎಂದು ಪಾಂಡಿಚೆರಿ ವಿವಿಯ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ. ಮೊಹಾಂತಿ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯ, Kuvempu University ಕರ್ನಾಟಕ ಸಮಾಜಶಾಸ್ತ್ರ ಸಂಘ ಮತ್ತು ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘಗಳು ಒಟ್ಟಾಗಿ ವಿವಿಯ ಬಸವ ಸಭಾ ಭವನದಲ್ಲಿ ಬುಧವಾರದಿಂದ ಎರಡು ದಿನಗಳ ಕಾಲ ಕೋವಿಡ್-19ನಂತರದ ಭಾರತೀಯ ಸಮಾಜದ ಪುನರ್‌ರಚನೆ: ಸಮಾಜಶಾಸ್ತ್ರಕ್ಕಿರುವ ಸವಾಲುಗಳು ಮತ್ತು ಅವಕಾಶಗಳು ವಿಷಯ ಕುರಿತು ಆಯೋಜಿಸಿರುವ 14ನೇ ಆವೃತ್ತಿಯ ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡಿ ಮಾತನಾಡಿದರು.
ಕೋವಿಡ್-19 ಸಾಮಾಜಿಕ ಬದುಕಿನ ಚಹರೆಗಳನ್ನು ಪ್ರತಿ ಹಂತದಲ್ಲಿಯೂ ಬದಲಿಸಿರುವುದನ್ನು ಸಮಾಜಶಾಸ್ತ್ರ ಸಂಶೋಧಕರು ಸೂಕ್ಷ್ಮವಾಗಿ ಗಮನಿಸಬೇಕು. ಕೊರೊನಾ ಲಾಕ್‌ಡೌನ್‌ಗಳಿಂದಾಗಿ ಆನ್‌ಲೈನ್ ಶಿಕ್ಷಣ ಸಾಮಾನ್ಯವಾಗಿದೆ, ಗೂಗಲ್ ಗುರುವಾಗಿದೆ, ಮೊಬೈಲ್ ಎಲ್ಲರ ಗೆಳೆಯನಾಗಿದೆ, ಸ್ವಿಗ್ಗಿ ಅಹಾರ ನೀಡುವ ಅಮ್ಮನಾದ ವಿಲಕ್ಷಣ ಸಂದರ್ಭಗಳು ಸೃಷ್ಟಿಯಾದವು. ಮಧ್ಯಮ ವರ್ಗ ಮತ್ತು ಉಳ್ಳವರ ಬದುಕು ಪ್ರತೀ ಹಂತಗಳಲ್ಲಿಯೂ ಆನ್‌ಲೈನ್ ಮೇಲೆ ಅವಲಂಬಿತವಾದ ಕಾರಣ ಬೃಹತ್ ಕಾರ್ಪೋರೇಟ್ ಸಂಸ್ಥೆಗಳ ಅದಾಯ ಮತ್ತು ಲಾಭಗಳ ದ್ವಿಗುಣಗೊಂಡವು. ಜಗತ್ತಿನಾದ್ಯಂತ ಮಿಲಿಯನೇರ್‌ಗಳ ಸಂಖ್ಯೆ ಹೆಚ್ಚಾದರೆ, ೯೭ಮಿಲಿಯನ್ ಜನರು ಬಡತನ ರೇಖೆಗೆ ಜಾರಿದ ವಿಷಾದನೀಯ ವರದಿಗಳು ಪ್ರಕಟವಾದವು ಎಂದರು.
ಸಮಾಜದ ಕಡುಬಡವರಾದ ವಲಸೆ ಕಾರ್ಮಿಕರು, ದಿನಗೂಲಿ ಕಾರ್ಮಿಕರು, ಅಸಂಘಟಿತ ವರ್ಗವು ಆರ್ಥಿಕವಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ಅಪಾರವಾದ ಬಿಕ್ಕಟ್ಟುಗಳನ್ನು ಎದುರಿಸಿದ್ದಲ್ಲದೇ, ಸಾವಿರಾರು ಸಂಖ್ಯೆಯಲ್ಲಿ ಜೀವಗಳನ್ನು ಕಳೆದುಕೊಂಡಿವೆ. ಭಾರತದಲ್ಲಿ ಕೋವಿಡ್೧೯ ಪರಿಣಾಮದ ಕುರಿತಾದ ದತ್ತಾಂಶಗಳು, ಮಾಹಿತಿಗಳು ಸಮರ್ಥವಾಗಿ ಲಭ್ಯವಿಲ್ಲ. ಮುಂದಿನ ಸೆನ್ಸಸ್, ಎನ್‌ಎಸ್‌ಎಸ್‌ಓ ವರದಿಗಳ ಅಗತ್ಯವಿದೆ. ಕೋವಿಡ್ ತೆರೆದಿಟ್ಟಿರುವ ಸಮಕಾಲೀನ ಸಾಮಾಜಿಕ ಬಿಕ್ಕಟ್ಟುಗಳು ಸಹಜವಾಗಿಯೇ ಸಮಾಜಶಾಸ್ತ್ರ ಸಂಶೋಧಕರಿಗೆ ಅಪಾರವಾದ ಸಂಶೋಧನಾ ಅವಕಾಶಗಳನ್ನು ತೆರೆದಿಟ್ಟಿದೆ. ಇದನ್ನು ಬಳಸಿಕೊಂಡು ಸಂಶೋಧನೆ ನಡೆಸಿ ಸಾಮಾಜಿಕ ಸುಧಾರಣೆಗಳನ್ನು ತರಲು ಸಹಕಾರಿಯಾಗಬೇಕು ಎಂದು ಕರೆ ಕೊಟ್ಟರು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅಮೇರಿಕಾದ ಹೂಸ್ಟನ್ ವಿವಿಯ ಸಂದರ್ಶಕ ಪ್ರಾಧ್ಯಾಪಕರಾದ ಕೋವಿಡ್‌ಪ್ರೊ. ವಿಘ್ನೇಶ್ ಎನ್ ಭಟ್, ಕೋವಿಡ್ ಸಂಕಷ್ಟವು ಜಾಗತಿಕ ಪಿಡುಗು ಎಂಬುದನ್ನ ವಿಶ್ವ ಆರೋಗ್ಯ ಸಂಸ್ಥೆಯೇ ಘೋಷಿಸಿತು. ಕೋವಿಡ್ ಜನರಿಗೆ ಡಿಜಿಟಲ್ ಜಗತ್ತನ್ನು ತೆರೆದಿಟ್ಟರೂ ಸಹ, ಡಿಜಿಟಲ್ ರಿಸ್ಕ್ ಎಂಬ ಸಮಸ್ಯೆಯನ್ನು ಮುಂದಿಟ್ಟಿತು. ಸಾಮಾಜಿಕ ಬದುಕು ದೂರವಾದದ್ದರಿಂದ ಭಯ, ಆರೋಪಗಳ ಕಾಣದ ಉದ್ವೇಗಗಳು ಹೆಚ್ಚಾದವು. ಕೊರಾನಾವನ್ನು ಚೀನಾ ವೈರಸ್ ಎನ್ನಲಾಯಿತು, ಧರ್ಮವೊಂದನ್ನು ಕೋವಿಡ್ ಹರಡುವಿಕೆಗೆ ಕಾರಣವೆಂದು ಆರೋಪಿಸಲಾಯಿತು. ಕ್ರೂಢಿಕೃತವಾಗಿ ಬದುಕುವ ಮಾದರಿಗಳು ದೂರವಾದದ್ದು, ಡಿಜಿಟಲ್ ಜಗತ್ತಿನ ಕೆಡುಕುಗಳಾದ ಸುಳ್ಳುಸುದ್ದಿ, ಕಳಂಕ- ಆರೋಪಣೆ, ಡಿಜಿಟಲ್ ಅಪಸವ್ಯಗಳು ಬೆಳೆಯಲು ಕಾರಣವಾಯಿತು. ಸಮಾಜಶಾಸ್ತ್ರಜ್ಞರು ಜನರೊಂದಿಗೆ ನೇರವಾಗಿ ಬೆರೆತು ನೋಡಿದಲ್ಲಿ ಸಂಶೋಧನಾತ್ಮಕ ಒಳನೋಟಗಳು ಅಪಾರವಾಗಿ ದೊರೆಯಬಲ್ಲವು ಎಂದು ತಿಳಿಸಿದರು.
ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದು, ಕೋವಿಡ್‌ನಿಂದಾಗಿ ಆನ್‌ಲೈನ್ ಶಿಕ್ಷಣವು ಅಪಾರವಾಗಿ ಹೆಚ್ಚಾಯಿತು. ಶೈಕ್ಷಣಿಕ ಮತ್ತು ಸಂಶೋಧನಾ ಪರಿಭಾಷೆಗಳು ಹಲವು ಹಂತಗಳಲ್ಲಿ ಬದಲಾಗಿದ್ದು, ಹೊಸ ಆನ್‌ಲೈನ್ ಜಗತ್ತಿನ ಸವಾಲುಗಳಿಗೆ ಸ್ಪಂದಿಸುವಂತಹ ಶಿಕ್ಷಣ ವ್ಯವಸ್ಥೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ ನಿರ್ಮಿಸುವಲ್ಲಿ ಶ್ರಮಿಸುತ್ತಿದೆ. ಇದರ ಭಾಗವಾಗಿ ಕರ್ನಾಟಕದಲ್ಲಿಯೇ ವರ್ಚುಯಲ್ ವಿವಿಗಳನ್ನು ಆರಂಭಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ವಿವಿ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ. ಇಂದಿರಾ, ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎ. ರಾಮೇಗೌಡ, ಡಾ. ಶೇಖರ್ ಹಾಜರಿದ್ದರು.
ಕರ್ನಾಟಕ ಸಮಾಜಶಾಸ್ತ್ರ ಸಂಘದ ಅಧ್ಯಕ್ಷರಾದ ಪ್ರೊ. ಗುರುಲಿಂಗಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು ಮತ್ತು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊ. ಈ. ಚಂದ್ರಶೇಖರ್ ಎಲ್ಲರನ್ನು ಸ್ವಾಗತಿಸಿದರು. ಸಮ್ಮೇಳನದಲ್ಲಿ 15 ಉಪವಿಷಯಗಳನ್ನು ರಚಿಸಿದ್ದು, ರಾಜ್ಯ ಮತ್ತು ಹೊರರಾಜ್ಯದ ವಿವಿಧ ವಿವಿಗಳಿಂದ ಆಗಮಿಸಿರುವ ೪೦೦ಕ್ಕೂ ಅಧಿಕ ಅಧ್ಯಾಪಕರು, ಸಂಶೋಧಕರು ತಮ್ಮ ಲೇಖನಗಳನ್ನು ಮಂಡಿಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post