ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗಾಂಧೀಜಿ ಮನುಷ್ಯ ಲೋಕದ ಒಂದು ಅದ್ಭುತ ಶಕ್ತಿ, ಅವರ ಜೀವನವೇ ಒಂದು ಸಂದೇಶ. ದೇಶದ ಆರ್ಥಿಕತೆಗೆ ಸ್ವದೇಶಿ ಉದ್ಯಮದಿಂದಲೇ ಭವಿಷ್ಯವಿದೆ ಎಂದು ನಂಬಿದ್ದರು ಎಂದು ಹಿರಿಯ ವಿದ್ವಾಂಸರು ಹಾಗೂ ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ನಿಕಟಪೂರ್ವ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ ಹೇಳಿದರು.

ಗಾಂಧಿ ಶಾಂತಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜು ಸಹಯೋಗದಲ್ಲಿ ಬ್ರಹ್ಮ ಸಮಾಜದ ಮುಖಂಡ ಮತ್ತು ಹಿರಿಯ ಗಾಂಧಿವಾದಿ ಡಬ್ಲ್ಯೂ ಹೆಚ್. ಹನುಮಂತಪ್ಪ ಸ್ಮಾರಕ ದತ್ತಿ ವತಿಯಿಂದ ನಗರದ ಗಾಂಧಿಭವನದ ಬಾಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಗಾಂಧೀಜಿ ಮತ್ತು ಉದ್ಯಮಶೀಲತೆ’ ವಿಷಯದ ಕುರಿತು ದತ್ತಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಗಾಂಧೀಜಿಯವರು ಗುಡಿಕೈಗಾರಿಕೆಗೆ ಒತ್ತು ನೀಡಿ ಎಲ್ಲಾ ಜನರು ಯಂತ್ರಗಳ ಮೇಲೆ ಅವಲಂಬಿಸದೆ ಸ್ವತಃ ದುಡಿಮೆ ಮಾಡಿ ಜೀವನ ನಡೆಸಬೇಕೆಂದು ಆಶಿಸಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಇಂದು ಆಧುನಿಕ ಯಂತ್ರೋಪಕರಣಗಳು ಆಗಮಿಸಿ ಗಾಂಧಿ ಕಲ್ಪನೆಯ ಉದ್ಯಮಶೀಲತೆಗೆ ಹಿನ್ನಡೆ ಉಂಟಾಗಿದೆ ಎಂದು ಅಭಿಪ್ರಾಯ ಪಟ್ಟರು.

ಗಾಂಧೀ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಹಿರಿಯ ಶಿಕ್ಷಣ ತಜ್ಞ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಹಾಗೂ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌ. ಪ್ರಧಾನ ಕಾರ್ಯದರ್ಶಿ, ನಾಡೋಜ ಡಾ. ವೂಡೇ.ಪಿ. ಕೃಷ್ಣ, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಸತ್ಯಮಂಗಲ ಮಹಾದೇವ ಹಾಗೂ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್.ಎಸ್.ಸತೀಶ್, ವೂಡೇ ಪ್ರತಿಷ್ಠಾನದ ಪ್ರತಿನಿಧಿ ಡಬ್ಲ್ಯೂ.ಡಿ.ಅಶೋಕ್ ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















