ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭೂಗಳ್ಳರಿಗೆ ನನ್ನಿಂದ ಸಹಾಯವಾಗಿದೆ ಎಂದು ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ H.D. Kumaraswamy ಅವರು ಸಿಎಂ ಬಸವರಾಜ ಬೊಮ್ಮಾಯಿ CM Basavaraja Bommai ಅವರಿಗೆ ನೇರ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಯಾರು ಯಾರು ಕೆರೆ, ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಶ್ವೇತಪತ್ರ ಹೊರಡಿಸಿ ಎಂದು ಅವರು ಮುಖ್ಯಮಂತ್ರಿಗಳನ್ನು ಆಗ್ರಹಪಡಿಸಿದರು.

ಕಾಂಗ್ರೆಸ್ ಬಗ್ಗೆ ಸಿಎಂ ಏನು ಬೇಕಾದರೂ ಮಾತನಾಡಲಿ, ನನ್ನ ಬಗ್ಗೆ ಮಾತನಾಡುವಾಗ ನೋಡಿಕೊಂಡು ಮಾತನಾಡಲಿ. ಎಚ್ಚರಿಕೆಯಿಂದ ಮಾತನಾಡಿದರೆ ಉತ್ತಮ ಎಂದು ಅವರು ಗರಂ ಆದರು.

ರಾಜಕಾಲುವೆ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಬಿಡುಗಡೆ ಮಾಡಿದ್ದೇನೆಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಹಾಗಾದರೆ ಅ ಹಣ ಯಾರ ಮನೆಗೆ ಹೋಯಿತು? ಧೈರ್ಯ ಇದ್ದರೆ ಒತ್ತುವರಿ ಮಾಡಿಕೊಂಡವರ ಹೆಸರುಗಳನ್ನು ಬಹಿರಂಗ ಮಾಡಲಿ. ಬೆಂಗಳೂರಿನಲ್ಲಿ ಕೆರೆ, ರಾಜಕಾಲುವೆ ಒತ್ತುವರಿದಾರರು ಯಾರು ಎನ್ನುವುದು ಜನರಿಗೂ ಗೊತ್ತಾಗಲಿ ಎಂದು ಪ್ರಶ್ನಿಸಿದರು.

ಸರ್ಕಾರಿ ಜಮೀನು ಲೂಟಿ ಹೊಡೆಯುವ ಬಗ್ಗೆ ಸದನ ಸಮಿತಿ ಮಾಡಿದ್ದೆ. ಯಾರ ಕಾಲದಲ್ಲಿ ಏನಾಗಿದೆಯೆಂದು ಮುಖ್ಯಮಂತ್ರಿಗಳು ಶ್ವೇತ ಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು.

ಈಗೇನೋ ಕೆಂಪೇಗೌಡ ಏರ್ ಫೊರ್ಟ್ ನಲ್ಲಿ ಮಣ್ಣು ಸಂಗ್ರಹ ಮಾಡಿ ಥೀಮ್ ಪಾರ್ಕ್ ಮಾಡುತ್ತೇನೆ ಅಂತಿದ್ದಾರೆ. ಸೀಮಾಂಧ್ರದ ರಾಜಧಾನಿ ಅಮರಾವತಿ ಕಟ್ಟಲು ಮಣ್ಣು ತಂದಿದ್ದರು ಮೋದಿ. ಏನು ಆಯ್ತು ಆ ಮಣ್ಣು? ಈಗ ರಾಜ್ಯದಲ್ಲಿ ಮಣ್ಣಿನ ಸಂಗ್ರಹ ಮಾಡುತ್ತಾರಂತೆ. ಮೊದಲು ಮಳೆಯಿಂದ ಆಗಿರುವ ಸಮಸ್ಯೆಯ ಜನರಿಗೆ, ರೈತರಿಗೆ ಅನುಕೂಲ ಮಾಡಿಕೊಡ್ರಪ್ಪ ಎಂದು ವ್ಯಂಗ್ಯವಾಡಿದ ಹೆಚ್ ಡಿಕೆ, ಇವರದ್ದೆಲ್ಲ ಕೇವಲ ಪ್ರಚಾರ ಅಷ್ಟೆ. ಕಳೆದ ಬಾರಿ ಸಿಎಂ ಪ್ರದಕ್ಷಿಣೆ ಹಾಕಿದ್ದರು. ಸಮಸ್ಯೆ ಪರಿಹಾರ ಆಗಿಲ್ಲ. ಇದಕ್ಕಿಂತ ಉದಾಹರಣೆ ಬೇಕಾ? ಎಂದು ಸಿಎಂ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದರು.









Discussion about this post