ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
‘ಗೃಹ ಜ್ಯೋತಿ’ ಯೋಜನೆ ಉಳ್ಳವರಿಗೆ ಸೀಮಿತವೇ? ಬಡವರು ಬಡವರಾಗಿಯೇ ಉಳಿಯಬೇಕೆ? ‘ಗ್ಯಾರೆಂಟಿ’ ಕೊಡುಗೆ ಮೂಲಕ ಮನೆ ಮಾಲಿಕರಿಗಷ್ಟೇ ಜೈ, ಬಾಡಿಗೆದಾರರಿಗೆ ‘ಕೈ’? ‘ಬಡವರು ಬಡವರಾಗಿಯೇ ಉಳಿಯಬೇಕೆ? ಎಂಬ ಸರಣಿ ಪ್ರಶ್ನೆಗಳನ್ನು ಮುಂದಿಟ್ಟು ಹೋರಾಟಗಾರರ ಅಭಿಪ್ರಾಯಗಳನ್ನಾಧರಿಸಿ ‘ಗ್ಯಾರೆಂಟಿ’ ಅವಾಂತರ ಬಗ್ಗೆ ಸಿಟಿಜನ್ಸ್ ರೈಟ್ಸ್ ಫೌಂಡೇಷನ್ ಮುಖ್ಯಸ್ಥ ಕೆ.ಎ. ಪಾಲ್ ಸರ್ಕಾರಕ್ಜೆ ದೂರು ಸಲ್ಲಿಸಿದ್ದಾರೆ.
ಗ್ಯಾರೆಂಟಿ ಅವಾಂತರದ ಬಗ್ಗೆ ಸರ್ಕಾರದ ಗಮನಸೆಳೆಯಲು ಮುಂದಾಗಿರುವ ‘ಸಿಟಿಜನ್ ರೈಟ್ಸ್ ಫೌಂಡೇಷನ್’, ಚುನಾವಣಾ ಪೂರ್ವದಲ್ಲಿ ನೀಡಿರುವಂತೆ ‘ಐದು ಗ್ಯಾರೆಂಟಿ’ ಜಾರಿಯಾಗಿಲ್ಲ, ಷರತ್ತುಗಳ ವಿಚಾರದಿಂದಾಗಿ ಗೊಂದಲ ಉಂಟಾಗಿದ್ದು, ಆದೇಶವು ‘ಬಡವರು ಬಡವರಾಗಿಯೇ ಉಳಿಯಬೇಕೇ’ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ ಎಂದು ಸಿಎಂ, ಡಿಸಿಎಂ ಹಾಗೂ ಮುಖ್ಯ ಕಾರ್ಯದರ್ಶಿಗೆ ಸಲ್ಲಿಕೆಯಾಗಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗ್ರಾಹಕರು 2022-23ರಲ್ಲಿ ಬಳಕೆ ಮಾಡಿರುವ ಮಾಸಿಕ ಸರಾಸರಿ ಯೂನಿಟ್’ಗಳ ಮೇಲೆ ಶೇಕಡಾ 10ರಷ್ಟು ಹೆಚ್ಚಿನ ವಿದ್ಯುತ್ ಬಳಕೆಯ ಮಿತಿ ನಿಗದಿಪಡಿಸಿದ್ದು, ಗರಿಷ್ಟ ಮಿತಿಯನ್ನು ಮೀರಿದರೆ ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಬೇಕು ಎಂಬ ಷರತ್ತು, ಹಾಗೂ ‘ಸರಾಸರಿ ಸೂತ್ರವನ್ನು ಸಿಟಿಜನ್ಸ್ ಆಕ್ಷೇಪಿಸಿದೆ. ಅನೇಕ ಸಂದರ್ಭಗಳಲ್ಲಿ ಈ ‘ಸರಾಸರಿ ಸೂತ್ರ’ವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಹಿಂದೆ ಜಿಂದಾಲ್ ಭೂಚಕ್ರ, ಬಿಟ್ ಕಾಯಿನ್ ಅಕ್ರಮ, ಬಿಬಿಎಂಪಿ ಕರ್ಮಕಾಂಡ, ಹೀಗೆ ಹತ್ತಾರು ವಿಚಾರಗಳಲ್ಲಿ ಪರಿಪೂರ್ಣ ಕಾನೂನು ಹೋರಾಟ ನಡೆಸಿರುವ ಪಾಲ್, ಷರತ್ತುಗಳು ಜನರ ಒಳಿತಿಗಾಗಿಯೇ ಅಥವಾ ಕೊಡುಗೆ ಜನಸಾಮಾನ್ಯರಿಗೆ ತಲುಪಬಾರದೆಂಬ ಉದ್ದೇಶಕ್ಕಾಗಿಯೇ? ಬಹುತೇಕ ಬಡ ಕುಟುಂಬಗಳು ಕರೆಂಟ್ ಹೊರೆಯಿಂದ ತಪ್ಪಿಸಿಕೊಳ್ಳಲು ರೆಫ್ರಿಜೆರೇಟರ್, ಫ್ಯಾನ್, ಟಿವಿ, ಗೀಸರ್ ಮೊದಲಾದ ಗೃಹೋಪಯೋಗಿ ವಸ್ತುಗಳನ್ನು ಹೊಂದಿಲ್ಲ. ಆ ಬಡ ಕುಟುಂಬಗಳಿಗೆ ಅಂತಹಾ ವಸ್ತುಗಳ ಬಳಕೆ ಮುಂದೆಯೂ ಗಗನ ಕುಸುಮವೇ? ಎಂದು ಪ್ರಶ್ನಿಸಿದ್ದಾರೆ.
ನಿವೃತ್ತ ನೌಕರರು, ವಯೋವೃದ್ಧರು ವರ್ಷದಲ್ಲಿ ಬಹುಪಾಲು ಸಮಯವನ್ನು ಮಕ್ಕಳ ಜೊತೆ ಪರ ಊರು ಅಥವಾ ವಿದೇಶಗಳಲ್ಲಿ ಕಳೆಯುವುದುಂಟು. ಚಿಕ್ಕ ಕುಟುಂಬದ ಸ್ತ್ರೀ ಹೆರಿಗೆ ಸಂದರ್ಭದಲ್ಲಿ ಐದಾರು ತಿಂಗಳು ತವರು ಮನೆಗೆ/ತವರೂರಿಗೆ ತೆರಳುವುದೂ ಉಂಟು. ಆ ವೇಳೆ, ಇಡೀ ಕುಟುಂಬ ತಾತ್ಕಾಲಿಕವಾಗಿ ತಮ್ಮ ಮನೆಯಿಂದ ದೂರ ಉಳಿಯುವ ಅನಿವಾರ್ಯತೆಯೂ ಸೃಷ್ಟಿಯಾಗುವುದುಂಟು. ಅಂಥವರಿಗೆ ಈ ‘ಸರಾಸರಿ ಸೂತ್ರ’ದಿಂದ ಅನ್ಯಾಯವಾಗುವುದಿಲ್ಲವೇ? ಬಾಡಿಗೆ ಮನೆಗಳಲ್ಲಿರುವವರು ಬಾಡಿಗೆ ಕರಾರು ಮುಗಿದ ಬಳಿಕ ಮನೆ ಬದಲಾವಣೆ ಮಾಡುವುದು ಅನಿವಾರ್ಯ. ಅಂತಹಾ ಸನ್ನಿವೇಶಗಳಲ್ಲಿ ಯಾವ ಮನೆಯ ವಿದ್ಯುತ್ ಬಳಕೆಯನ್ನು ಪರಿಗಣಿಸಲಾಗುತ್ತದೆ? ಎಂದು ಸಿದ್ದರಾಮಯ್ಯರಿಗೆ ‘ಸಿಟಿಜನ್’ ಹತ್ತಾರು ಪ್ರಶ್ನೆಗಳನ್ನು ಕೇಳಿದೆ.
Also read: ರಾಜ್ಯಪಾಲರಿಂದ ಕೊಪ್ಪಳ ವಿಶ್ವವಿದ್ಯಾಲಯದ ಲಾಂಛನ ಅನಾವರಣ
ಆಶ್ವಾಸನೆಯೇ ಬೇರೆ, ಆದೇಶವೇ ಬೇರೆ ಎಂದಿರುವ ‘ಸಿಟಿಜನ್ಸ್’, ಚುನಾವಣೆಗೆ ಮುನ್ನ ಕೈ ನಾಯಕರು ‘ಗೃಹ ಜ್ಯೋತಿ’ಯು ಎಲ್ಲರಿಗೂ ಉಚಿತ ಎಂದಿದ್ದರು. ಆದರೆ ಇದೀಗ ಫಲಾನುಭವಿಗಳಿಗೆ ಷರತ್ತುಗಳನ್ನು ವಿಧಿಸಲಾಗಿದೆ. ಈ ಯೋಜನೆ ‘ಉಳ್ಳವರಿಗೆ ವರದಾನವೇ ಹೊರತು, ಬಡವರಿಗಾಗಿ ಅಲ್ಲ’ ಎಂಬಂತಿದೆ, ಸರ್ಕಾರದ ನಡೆಗೆ ‘ಸಿಟಿಜನ್ಸ್’ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಸಕ್ತ ವ್ಯವಸ್ಥೆಯಲ್ಲಿ ವಿದ್ಯುತ್ ಮೀಟರ್’ಗಳು ಮನೆ ಮಾಲೀಕರ ಹೆಸರಿನಲ್ಲಿ ಇರುತ್ತದೆ. ಒಂದೇ ಕಟ್ಟಡದಲ್ಲಿ ಐದಾರು ಮನೆಗಳಿದ್ದರೆ ಅಷ್ಟೂ ಮನೆಗಳ ವಿದ್ಯುತ್ ಸಂಪರ್ಕ ಮಾಲೀಕರ ಹೆಸರಿನಲ್ಲೇ ಇರುತ್ತದೆ. ಸರ್ಕಾರದ ಷರತ್ತುಗಳು ಮೀಟರ್ ಮಾಲಿಕರಿಗೆ ಅನ್ವಯವಾಗುವುದೇ ಆದಲ್ಲಿ, ಒಂದು ಮನೆಗಷ್ಟೇ ‘ಗೃಹಜ್ಯೋತಿ’ಯೇ? ಬಾಡಿಗೆದಾರರಿಗೂ ಉಚಿತ ವಿದ್ಯುತ್ ಸಿಗುತ್ತದೆಯೇ? ಸರಾಸರಿ ಸೂತ್ರವು ‘ತಾರತಮ್ಯ’ ನೀತಿಗೆ ಸಾಕ್ಷಿಯಾದಂತಿದೆ ತಾರತಮ್ಯ ನೀತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಹಿಂದಿನ ವರ್ಷದಲ್ಲಿ ಬೇಕಾಬಿಟ್ಟಿ ವಿದ್ಯುತ್ ಬಳಕೆ ಮಾಡಿರುವ ಶ್ರೀಮಂತರು ಇದೀಗ ಈ ‘ಸರಾಸರಿ ಸೂತ್ರ’ದಿಂದಾಗಿ ಸದರಿ ಯೋಜನೆಯ ಪರಿಪೂರ್ಣ ಫಲಾನುಭವಿಗಳಾಗುತ್ತಾರೆ. ಈವರೆಗೂ ಅತೀ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿದ್ದ ಬಡವರು ಯೋಜನೆಯ ಪರಿಪೂರ್ಣ ಪ್ರಯೋಜನದಿಂದ ವಂಚಿತರಾಗುತ್ತಾರೆ. ‘ಆರ್ಥಿಕ ಸಬಲೀಕರಣ’ ಸೂತ್ರಕ್ಕೆ ವಿರುದ್ಧವಾಗಿರುತ್ತದೆ. ಎಲ್ಲರಿಗೂ ಸಮಾನ ಸೂತ್ರದಡಿ ‘ಗೃಹ ಜ್ಯೋತಿ’ ಅನುಷ್ಠಾನಗೊಳಿಸಿ, ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಟ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿ ನಿಗದಿಪಡಿಸಿ, ಹಿಂದೆ ನೀಡಿರುವ ಭರವಸೆಯಂತೆಯೇ ಬಡವರೆಲ್ಲರಿಗೂ ಉಚಿತ ವಿದ್ಯುತ್ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಸಿಟಿಜನ್ಸ್ ರೈಟ್ಸ್ ಫೌಂಡೇಷನ್ ಆಗ್ರಹಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post