ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಮ ನಾಮದ ಅರ್ಥಾನುಸಂಧಾನಗಳು ನಮ್ಮ ಮನಸ್ಸಿನಲ್ಲಿ ಮೂಡಬೇಕಾದರೆ ಮೊದಲು ನಮ್ಮ ಮನಸ್ಸು ಅಯೋಧ್ಯಾ ನಗರಿ ಆಗಬೇಕು ಎಂದು ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು.
ಅಯೋಧ್ಯೆಯಲ್ಲಿ Ayodhya Rama Mandira ನಡೆಯಲಿರುವ ಶ್ರೀ ರಾಮಚಂದ್ರನ ಮೂರ್ತಿ ಪ್ರತಿಷ್ಠಾಪನಾ ಕಾರ್ಯದ ಅಂಗವಾಗಿ ದೇಶದ ಎಲ್ಲ ಭಕ್ತರಿಂದ ರಾಮನಾಮ ಜಪ ನಡೆಯಬೇಕು ಎಂಬ ಉದ್ದೇಶದಿಂದ ಜ.22 ರ ವರೆಗೆ (ಅಯೋಧ್ಯೆಯ ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಆಗುವ ಶುಭ ಘಳಿಗೆ ವರೆಗೆ) ಶ್ರೀ ಮಠ ಆಯೋಜಿಸಿರುವ ನಿತ್ಯ 20 ನಿಮಿಷ ಸಾಮೂಹಿಕ ಶ್ರೀ ರಾಮನಾಮಜಪ’ ಯಜ್ಞ ಆನ್ಲೈನ್ ಆಂದೋಲನಕ್ಕೆ ವಿಧ್ಯುಕ್ತ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ನಮಗೆ ಎರಡು ವಿಧದ ಬಾಹ್ಯ ಮತ್ತು ಅಂತರ್ ಶತ್ರುಗಳು ಇದ್ದಾರೆ. ಅಂತರ್ ಶತ್ರುಗಳು ಎಂದರೆ ದುಷ್ಟವಾದ ಕಾಮ, ಕ್ರೋಧಾದಿದೋಷಗಳು. ರಾಮನಾಮ ಜಪದ ಮೂಲಕ ನಾವು ಇವುಗಳನ್ನು ದೂರ ಓಡಿಸಬೇಕು ಎಂದರು.
ಅಯೋಧ್ಯೆಯಲ್ಲಿ ಶ್ರೀ ರಾಮ ನೆಲೆಸುತ್ತಿರುವ ಈ ಸಂದರ್ಭದಲ್ಲಿ ರಾಮನಾಮ ಜಪ ಮಾಡಿ ನಮ್ಮ ಮನಸ್ಸನ್ನು ನಾವು ಅಯೋಧ್ಯಾ ನಗರಿಯನ್ನಾಗಿ ಮಾಡಿಕೊಂಡರೆ ಕಾಮ, ಕ್ರೋಧಾದಿಗಳು ನಮ್ಮ ಮೇಲೆ ಯುದ್ಧ ಮಾಡಲು ಬಂದರೂ ತಾವಾಗಿಯೇ ನಾಶ ಹೊಂದುತ್ತವೆ. ಯಾವುದೇ ದುಷ್ಟಶಕ್ತಿಗಳು ಬಾಹ್ಯವಾಗಿ ನಮ್ಮ ಮೇಲೆ ಆಕ್ರಮಣ ಮಾಡಲು ಬಂದರೂ ಅವಕ್ಕೆ ಸೋಲಾಗುತ್ತದೆ ಎಂದರು.
ನಮ್ಮ ಮನಸ್ಸು ರಾಮನ ಮಂದಿರವಾದರೆ ಭಗವಂತನ ಗುಣ ಚಿಂತನೆಗಳನ್ನು, ಶಾಸ್ತ್ರದ ವಿಚಾರಗಳನ್ನು ಯಾವಾಗಲೂ ಕೇಳಲು ಸನ್ನದ್ಧವಾಗುತ್ತದೆ. ಅಂತಹ ಅಯೋಧ್ಯಾವಾಗುವ ನಮ್ಮ ಮನಸ್ಸಿನಲ್ಲಿ ಶ್ರೀ ರಾಮಚಂದ್ರ ಯಾವಾಗಲೂ ನೆಲೆಸುತ್ತಾನೆ. ತನ್ನ ಗುಣ ಚಿಂತನೆಗಳನ್ನು ನಮಗೆ ದಯಪಾಲಿಸುತ್ತಾನೆ. ದೇಶದ ಮತ್ತು ವಿಶ್ವದ ಪ್ರತಿಯೊಬ್ಬರ ಮನವೂ ರಾಮನ ಆಲಯವಾದರೆ ಸುಖ, ಶಾಂತಿ ತಾನಾಗಿಯೇ ಲಭಿಸುತ್ತದೆ. ವಿಶ್ವವು ನೆಮ್ಮದಿಯ ಸುಂದರ ತೋಟವಾಗುತ್ತದೆ ಎಂದರು.
ಹಾಗಾಗಿ ನಾವೆಲ್ಲರೂ ಯಾವುದೇ ಅಂತರ, ತಾರತಮ್ಯ ಇಟ್ಟುಕೊಳ್ಳದೇ ನಿತ್ಯ ಶ್ರೀರಾಮ ಜಯರಾಮ ಜಯ ಜಯ ರಾಮ‘ ಎಂಬ ಸರಳ ಮಂತ್ರವನ್ನು ಪಠಿಸಿ ಧನ್ಯತೆ ಮೆರೆಯೋಣ ಎಂದು ಶ್ರೀಸತ್ಯಾತ್ಮ ತೀರ್ಥರು ಸಂದೇಶ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post