ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ವಿದ್ಯಾರ್ಥಿಗಳು ಆದ್ಯತೆಯಲ್ಲಿ ಬಂದು ಲಸಿಕೆ ಪಡೆದಾಗ ಬೇರೆ ಇಲಾಖೆಗಳ ಸಿಬ್ಬಂದಿಗೆ ಧೈರ್ಯ ಬರುತ್ತದೆ. ಲಸಿಕೆ ಪಡೆಯಲು ಕೆಲವರು ಪರೀಕ್ಷೆಯ ನೆಪ ಒಡ್ಡುತ್ತಿದ್ದಾರೆ. ಆದರೆ ಪರೀಕ್ಷೆಗೂ ಲಸಿಕೆಗೂ ಸಂಬಂಧವಿಲ್ಲ. ಲಸಿಕೆ ಪಡೆದವರಿಗೆ ಯಾವುದೇ ಅಡ್ಡ ಪರಿಣಾಮವಾಗಿಲ್ಲ. ಅನೇಕ ಅಧಿಕಾರಿಗಳು ಮುಂದೆ ಬಂದು ಲಸಿಕೆ ಪಡೆದು ಮಾದರಿಯಾಗಿದ್ದಾರೆ. ಈ ನೈತಿಕ ಸ್ಪೂರ್ತಿಯನ್ನು ಜನರಿಗೆ ನೀಡುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ವಹಿಸಿಕೊಂಡು ಲಸಿಕೆಯ ರಾಯಭಾರಿಗಳಾಗಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಕೋರಿದರು.
ಈ ಕುರಿತಂತೆ ಮಾತನಾಡಿರುವ ಅವರು, ಕೆಲ ರಾಜ್ಯಗಳಲ್ಲಿ ಲಸಿಕೆ ಪಡೆಯದಿದ್ದರೆ ಸಂಬಳ ನೀಡುವುದಿಲ್ಲ ಎಂದು ಕೂಡ ಹೇಳಲಾಗಿದೆ. ಆದರೆ ನಮ್ಮಲ್ಲಿ ಆ ರೀತಿಯ ನಿರ್ಬಂಧ ಹೇರಿಲ್ಲ. ಭಾರತದ ಲಸಿಕೆಗೆ 25 ದೇಶಗಳಲ್ಲಿ ಬೇಡಿಕೆ ಇದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಉಚಿತವಾಗಿ ಲಸಿಕೆ ನೀಡುವಾಗ ಲಸಿಕೆ ಪಡೆಯಲು ಮುಂದೆ ಬರಬೇಕು ಎಂದರು.
ಕೋವಿಡ್ ಬಂದ ಬಳಿಕ, ಆರೋಗ್ಯ ಇಲ್ಲದಿದ್ದರೆ ಏನೂ ಇಲ್ಲ ಎಂದು ಅರ್ಥವಾಗಿದೆ. ಆದ್ದರಿಂದ ಏಳೆಂಟು ತಿಂಗಳಲ್ಲಿ ರಾಜ್ಯ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಿದೆ. ಆರೋಗ್ಯ ಇಲಾಖೆಯಡಿ ಸುಮಾರು 3 ಸಾವಿರ ಆಕ್ಸಿಜನ್ ಸಹಿತ ಹಾಸಿಗೆಗಳು, ವೈದ್ಯಕೀಯ ಶಿಕ್ಷಣ ಇಲಾಖೆಯಡಿ, ನಾಲ್ಕೂವರೆ ಸಾವಿರ ಆಕ್ಸಿಜನ್ ಹಾಸಿಗೆ ಇತ್ತು. ಈಗ ಎರಡೂ ಇಲಾಖೆಗಳ ಆಸ್ಪತ್ರೆಗಳು ಸೇರಿ ಒಟ್ಟು 30 ಸಾವಿರ ಆಕ್ಸಿಜನ್ ಸಹಿತ ಹಾಸಿಗೆಗಳನ್ನು ಅಳವಡಿಸಲಾಗಿದೆ. ಈ ಸಾಲಿನ ಬಜೆಟ್‌ನಲ್ಲೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಆರಂಭದಲ್ಲಿ ವಿಕ್ಟೋರಿಯಾ ಆಸ್ಪತ್ರೆ ಗಣನೀಯ ಸೇವೆ ಸಲ್ಲಿಸಿದೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟಿವ್ ಆದ 200 ಕ್ಕೂ ಹೆಚ್ಚು ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ಇದಕ್ಕಾಗಿ ವಿಶೇಷ ಅಭಿನಂದನೆಗಳು ಎಂದು ಹೇಳಿದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post