ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್ ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸಿಕೊಡುವ ಮಹತ್ತ್ವಾಕಾಂಕ್ಷೆಯುಳ್ಳ `ಫ್ಯೂಚರ್ ಡಿಜಿಟಲ್ ಜಾಬ್ಸ್’ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಗುರುವಾರ ಚಾಲನೆ ನೀಡಿದರು.
ಇದರ ಅಂಗವಾಗಿ ರಾಜ್ಯ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಂಸ್ಥೆಗಳು ಒಡಂಬಡಿಕೆಗೆ ಸಹಿ ಹಾಕಿದವು.
ವಿಧಾನಸೌಧದಲ್ಲಿ `ಫ್ಯೂಚರ್ ಡಿಜಿಟಲ್ ಜಾಬ್ಸ್’ ಉಪಕ್ರಮಕ್ಕೆ ಹಸಿರು ನಿಶಾನೆ ತೋರಿದ ಸಚಿವರು, ಈ ಕಾರ್ಯಕ್ರಮದಿಂದ ರಾಜ್ಯದ 92 ಸರಕಾರಿ ಪಾಲಿಟೆಕ್ನಿಕ್ ಮತ್ತು 14 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಅವರ ಕನಸಿನ ಉದ್ಯೋಗ ಸಿಗಲಿದೆ. ಇನ್ನೊಂದೆಡೆಯಲ್ಲಿ, ಉದ್ಯಮರಂಗಕ್ಕೆ ಬೇಕಾದ ಸ್ವರೂಪದಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುವುದು. ಇದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿದೆ ಎಂದರು.
ಈ ನೂತನ ಕಾರ್ಯಕ್ರಮದ ಅನ್ವಯ ಸರಕಾರಿ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ `ಫ್ಯೂಚರ್ ಡಿಜಿಟಲ್ ಜಾಬ್ಸ್’ ಯೋಜನೆಯನ್ನು ಒಂದು ವಿಶೇಷ ಆಂದೋಲನದಂತೆ ಹಮ್ಮಿಕೊಳ್ಳಲಾಗುವುದು. ಜೊತೆಗೆ ಅರ್ಥಪೂರ್ಣ ಇಂಟರ್ನ್ ಶಿಪ್, ಪ್ರಾಜೆಕ್ಟುಗಳು ಮತ್ತು ಉದ್ಯೋಗ ನೇಮಕಾತಿ ಕನಸು ನನಸಾಗುವಂತೆ ವೃತ್ತಿ ಸಮಾಲೋಚನೆ ಮತ್ತು ಮಾರ್ಗದರ್ಶನವನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಸರಕಾರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪರಿಪೋಷಣೆ ಮತ್ತು ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಉದ್ಯಮಗಳೊಂದಿಗೆ ಸೇರಿಕೊಂಡು ತಾಂತ್ರಿಕ ಶಿಕ್ಷಣದ ಪಠ್ಯಕ್ರಮವನ್ನು ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಅಭಿವೃದ್ಧಿ ಪಡಿಸಿ, ಬೋಧನಾ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗುವುದು ಎಂದರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಕೆಡಿಇಎಂ ನಡುವಿನ ಒಡಂಬಡಿಕೆಯು ಬೆಂಗಳೂರಿನಿಂದ ಹೊರಗಿರುವ ಕೈಗಾರಿಕೋದ್ಯಮಗಳಲ್ಲಿ ವಿದ್ಯಾರ್ಥಿಗಳು ಅಲ್ಲಿರುವ ಉದ್ಯೋಗಗಳನ್ನು ಕುರಿತು ಸಂಶೋಧನೆ ನಡೆಸಲು ಅನುವು ಮಾಡಿಕೊಡಲಿದೆ. ಜತೆಗೆ ಉದ್ಯಮಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ಒದಗಿಸಲಿದ್ದು, ನಿಯಮಿತವಾಗಿ ವಿಚಾರ ಸಂಕಿರಣಗಳನ್ನು ಕೂಡ ಆಯೋಜಿಸಲಾಗುವುದು. ಇದರಿಂದ ಮುಖ್ಯವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ ಎಂದು ಸಚಿವರು ನುಡಿದರು.
ಕೆಡಿಇಎಂ ಸಿಇಒ ಸಂಜೀವ್ ಗುಪ್ತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು.
ಟ್ಯಾಲೆನ್ಷಿಯಾ ಗ್ಲೋಬಲ್ ಕಂಪನಿಯ ಸಿಇಒ ಎಸ್.ಸುಬ್ರಹ್ಮಣಿಯನ್ ಮಾತನಾಡಿ, ಇದೊಂದು ಹೊಸ ಪ್ರಯತ್ನವಾಗಿದ್ದು ಇದರಿಂದ ಮಕ್ಕಳಿಗೆ ಅನುಕೂಲ ಆಗಲಿದೆ. ಸಾವಿರಕ್ಕೂ ಹೆಚ್ವು ಮಂದಿಗೆ ಈ ವರ್ಷ ಉದ್ಯೋಗ ಸಿಗುವ ಹಾಗೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸಿಗುವ ಹಾಗೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಮಂಜುನಾಥ್, ಉದ್ಯಮಿ ವಾದಿರಾಜ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post