ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಅತ್ಯಂತ ಸಂಕೀರ್ಣ ಅಪರಾಧ ಪ್ರಕರಣಗಳ ತನಿಖೆ ಮಾಡುವ ಸಂದರ್ಭದಲ್ಲಿ ಹಲವರು ಅಡ್ಡಿಪಡಿಸುವ ಕೆಲಸ ಮಾಡುತ್ತಾರೆ. ಆದರೆ ಈ ಎಲ್ಲ ಅಡ್ಡಿ ಆತಂಕ, ಟೀಕೆ ಟಿಪ್ಪಣಿಗಳನ್ನು ಮೆಟ್ಟಿನಿಂತು ವಿಷಕಂಠನಂತೆ ನ್ಯಾಯ ಸಮ್ಮತವಾಗಿ ತನಿಖೆ ಮಾಡಿ ಟೀಕೆ ಟಿಪ್ಪಣಿ ಗಳಿಗೆ ಉತ್ತರ ನೀಡುವಂತೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಪೊಲೀಸ್ ಅಧಿಕಾರಿಗಳಿಗೆ ಕರೆ ನೀಡಿದರು.
ಇಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಮುಖ್ಯಮಂತ್ರಿ ಪದಕ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಪದಕ ವಿತರಿಸಿದ ನಂತರ ಅವರು ಮಾತನಾಡಿದರು.

ಮಹಿಳೆಯರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಸೆಲ್ಫ್ ಡಿಫೆನ್ಸ್ ತರಬೇತಿ ನೀಡಲಾಗುವುದು. ಇದಕ್ಕೆ ಕೆಎಸ್ ಆರ್ ಪಿ ಸಜ್ಜಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕಳೆದ ಕೆಲ ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಡ್ರಗ್ ಪತ್ತೆ ಹಚ್ಚಿ ಸೀಜ್ ಮಾಡಿದ್ದೇವೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಹೋಗಿ ಮಾದಕ ವಸ್ತುಗಳ ಮಾರಾಟ ಜಾಲಗಳನ್ನು ಪತ್ತೆ ಮಾಡಿ ಸೆದೆ ಬಡಿದಿದ್ದೇವೆ. ಡ್ರಗ್ ವಿರುದ್ಧ ಸಮರ ಸಾರಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯದ ಪ್ರತಿ ಜಿಲ್ಲೆಗಳಿಗೆ ಒಂದರಂತೆ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆಗೆ ಕ್ರಮ ಜರುಗಿಸಲಾಗುತ್ತಿದೆ. ಸೈಬರ್ ಅಪರಾಧಗಳನ್ನು ಪತ್ತೆ ಮಾಡಿದ್ದೇವೆ. ಬ್ಯಾಂಕುಗಳಲ್ಲಿ ನಡೆಯುವ ಫ್ರಾಡ್ ಗಳನ್ನು ಆರ್ ಬಿ ಐ ನೆರವಿನೊಂದಿಗೆ ಪತ್ತೆ ಮಾಡಿದ್ದೇವೆ. ಇದಕ್ಕೆ ಕಾರಣ ನಮ್ಮ ಪೊಲೀಸರು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮೆಚ್ವುಗೆ ವ್ಯಕ್ತಪಡಿಸಿದರು

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್ ಅವರು ಪೊಲೀಸ್ ಧ್ವಜ ದಿನಾಚರಣೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post