ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಳೆದ ತಿಂಗಳು ಹೃದಯಾಘಾತದಿಂದ ಅಕಾಲಿಕ ನಿಧನ ಹೊಂದಿದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಗಂಧದಗುಡಿ ಟೀಸರ್ ಇಂದು ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಪಡೆದಿದೆ.
ಭಾರೀ ಕನಸಿನೊಂದಿಗೆ ಪುನೀತ್ ರಾಜ್‌ಕುಮಾರ್ ನಿರ್ಮಿಸಿರುವ ಈ ಗಂಧದಗುಡಿ ಟೀಸರ್ ನವೆಂಬರ್ 1ರಂದು ಬಿಡುಗಡೆಯಾಗಬೇಕಿತ್ತು. ಅವರ ಅಕಾಲಿಕ ನಿಧನದಿಂದ ಇದು ಮುಂದೂಡಲ್ಪಟ್ಟಿತ್ತು.
ನೋವಿನಲ್ಲೂ ಪತಿಯ ಕನಸನ್ನು ಈಡೇರಿಸಲು ಮುಂದಾಗಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು, ಪಾರ್ವತಮ್ಮನವರ ಜನ್ಮದಿನದಂದೇ ಪಿಆರ್‌ಕೆ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಟೀಸರನ್ನು ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾದ ಒಂದು ಗಂಟೆಯ ಅವಧಿಯಲ್ಲೇ ಲಕ್ಷಾಂತರ ಜನ ವೀಕ್ಷಿಸಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ.
ಲಾಕ್‌ಡೌನ್ ಅವಧಿಯಲ್ಲಿ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದ್ದ ಪುನೀತ್ ರಾಜ್‌ಕುಮಾರ್ ವಿಶೇಷ ಆಸಕ್ತಿ ವಹಿಸಿ ಗಂಧದ ಗುಡಿಯನ್ನು ನಿರ್ಮಿಸಿದ್ದಾರೆ. ವಿಶೇಷವೆಂದರೆ ಟೀಸರ್‌ನಲ್ಲಿ ಇರುವಂತೆ ಈ ಚಿತ್ರದಲ್ಲಿ ಪುನೀತ್ ಸ್ವತಃ ಕೂಬಾ ಡೈವಿಂಗ್ ಮಾಡಿದ್ದಾರೆ. ಒಂದು ನಿಮಿಷ ಇರುವ ಈ ಟೀಸರ್ ಅದ್ಭುತವಾಗಿ ಮೂಡಿಬಂದಿದ್ದು, ಒಟ್ಟಾರೆ ಈ ಚಿತ್ರ ಸತ್ಯ ಘಟನೆಗಳನ್ನು ಒಳಗೊಂಡಿದೆ. ಹಾಗೂ ಪಶ್ಚಿಮಘಟ್ಟ ಮತ್ತು ಕರಾವಳಿ ಪ್ರದೇಶಗಳನ್ನು ಇದರಲ್ಲಿ ವಿಭಿನ್ನವಾಗಿ ತೋರಿಸುವ ಮೂಲಕ ಈ ಭಾಗದ ಪ್ರಾಕೃತಿಕ ವೈಭವವನ್ನು ಸೆರೆಹಿಡಿಯಲಾಗಿದೆ.
ಈ ಚಿತ್ರ 2022ರಲ್ಲಿ ಬಿಡುಯಾಗಲಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಪಿಆರ್‌ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಿದ್ದು, ಅಮೋಘವರ್ಷ ಇದನ್ನು ನಿರ್ದೇಶಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post