ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಸರಕಾರವು ಮಹತ್ವದ ನಿರ್ಧಾರ ವೊಂದನ್ನು ತೆಗೆದುಕೊಂಡಿದ್ದು, ಈ ಸಂಬಂಧ ನಡೆಸಲಾಗಿದ್ದ ಪರೀಕ್ಷೆ ಯನ್ನು ರದ್ದುಗೊಳಿಸಿ, ಮರು ಪರೀಕ್ಷೆ ನಡೆಸಲಾಗುವುದು ಎಂದು ಗೃಹಸಚಿವ ಆರಗ ಜ್ಞಾನೇಂದ್ರ Home Minister Araga Gnanendra ತಿಳಿಸಿದರು.
ಇಂದು ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಪರೀಕ್ಷೆ ಬರೆದಿದ್ದ ಎಲ್ಲಾ 54289 ಪರೀಕ್ಷಾರ್ಥಿಗಳು ಮತ್ತೂಮ್ಮೆ ಪರೀಕ್ಷೆ ಬರೆಯಲು ಅವಕಾಶ ಪಡೆಯಲಿದ್ದಾರೆ. ಆದರೆ ಸಿಐಡಿ ಯಿಂದ ಬಂಧಿತರಾದ ಅಭ್ಯರ್ಥಿಗಳಿಗೆ ಮರು ಪರೀಕ್ಷೆಯಿಂದ ಹೊರಗಿಡಲಾಗುವುದು ಎಂದರು.
ಮರು ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ನಿಗದಿ:
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಮರು ಪರೀಕ್ಷೆ ನಿರ್ಧಾರದಿಂದ, ಅಕ್ರಮವಾಗಿ ನೇಮಕಾತಿ ಪಡೆದವರ ಜಾಗಕ್ಕೆ, ಪ್ರತಿಭಾವಂತ ಹಾಗೂ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅವಕಾಶ ದೊರಕಲಿದೆ, ಎಂದು ಉತ್ತರಿಸಿದರು.
Also read: ಪ್ರಸಕ್ತ ವರ್ಷದಲ್ಲೇ ಎಫ್ ಎಂಸಿಜಿ ಕ್ಲಸ್ಟರ್ ಯೋಜನೆ ಪ್ರಾರಂಭ: ಮುಖ್ಯಮಂತ್ರಿ
ಪರೀಕ್ಷಾ ಅಕ್ರಮಗಳು ಒಂದಕ್ಕಿಂತ ಹೆಚ್ಚು ಕೇಂದ್ರಗಳಲ್ಲಿ ನಡೆದಿದೆ ಎಂಬ ಬಗ್ಗೆಯೂ ಅನುಮಾನಗಳಿದ್ದು , ಮರು ಪರೀಕ್ಷೆ ನಡೆಸುವ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳಲಾಯಿತು, ಎಂದು ಸಚಿವರು ತಿಳಿಸಿದರು.
ಮುಂದಿನ ದಿನಗಳಲ್ಲಿ ಇಂಥಹ ಅಕ್ರಮಗಳು ನಡೆಯದಂತೆ ತಡೆಯಲು ಕಠಿಣ ಕಾನೂನುಗಳನ್ನು ಜಾರಿಗೆ ತರುವ ಬಗ್ಗೆಯೂ ಅಲೋಚಿಸಲಾಗುವುದು, ಎಂದು ಸಚಿವರು ನುಡಿದರು.
ತಮ್ಮ ಬಳಿ ಇರಬಹುದಾದ, PSI ಹುದ್ದೆಗಳ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು, ಹಾಗೂ ಮಾಹಿತಿಗಳನ್ನು, ಹಂಚಿಕೊಳ್ಳಬೇಕು ಎಂದು ಸಿಐಡಿ ಅಧಿಕಾರಿಗಳು, ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಯವರಿಗೆ ನೋಟಿಸ್ ನೀಡಿದ್ದರು. ಶಾಸಕರು, ತಮ್ಮ ಬಳಿ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಬಹಳಷ್ಟು ಸಾಕ್ಷ್ಯಾಧಾರಗಳೂ, ವ್ಯಕ್ತಿಗಳ ಹೆಸರುಗಳು ಗೊತ್ತು, ಎಂದು ಮಾಧ್ಯಮದವರ ಮುಂದೆ ಬಿಂಬಿಸಿಕೊಂಡಿದ್ದರು. ಈಗ ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಲು ಹಿಂಜರಿಯುತ್ತಿದ್ದಾರೆ.
ಹಾಗೂ ತಮ್ಮ ಹೊಣೆಗಾರಿಕೆಯನ್ನು ಮರೆತು, ತಮ್ಮಲ್ಲಿ ಯಾವುದೇ ಸಾಕ್ಷ್ಯಾಧಾರ ಗಳಿಲ್ಲ, ಕೇವಲ ಸಾಮಾಜಿಕ ಜಾಲತಾಣ ದಲ್ಲಿರುವ ಮಾಹಿತಿಯನ್ನು ಮಾತ್ರ ಪ್ರಕಟಿಸಿದ್ದೆ, ಎಂಬ ಬಾಲಿಶ ಹೇಳಿಕೆ ನೀಡಿದ್ದಾರೆ. ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ, ಖರ್ಗೆಯವರು ತನಿಖೆಗೆ ಸಹಕರಿಸುವುವದರ ಬದಲು, ಪಲಾಯನವಾದ ನೀತಿಯನ್ನು, ಅನುಸರಿಸಿದ್ದಾರೆ ಎಂದರು.
ಪ್ರಾಮಾಣಿಕವಾಗಿ ಪರೀಕ್ಷೆ ಬರೆದರೂ, ಹುದ್ದೆಯಿಂದ ವಂಚಿತರಾದ ಅಭ್ಯರ್ಥಿಗಳಿಗೆ, ನ್ಯಾಯ ಒದಗಿಸಲು, ಸಿಐಡಿ ತನಿಖೆಗೆ ನಾನೇ ಸ್ವತಃ ಆಸಕ್ತಿ ತೋರಿಸಿ, ಮುಖ್ಯಮಂತ್ರಿಗಳ ಜತೆ ಸಮಾಲೋಚಿಸಿ, ತನಿಖೆಗೆ ಆದೇಶ ನೀಡಿದ್ದೆ. ಬಡ ಕುಟುಂಬದಿಂದ ಬಂದಂಥ, ಸಾವಿರಾರು, ಪ್ರಾಮಾಣಿಕ ಹಾಗೂ ಪ್ರತಿಭಾವಂತ ಆಕಾಂಕ್ಷಿ ಗಳು, ಮೂಲೆ ಗುಂಪಾದರೆ, ಸಮಾಜಕ್ಕೆ ಆಗುವ ನಷ್ಟದ ಅಂದಾಜನ್ನು ಖರ್ಗೆಯವರು, ಅರಿಯಬೇಕಿತ್ತು. ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ ಸಾಕ್ಷ್ಯಾಧಾರಗಳನ್ನು ನೀಡದೆ ಇರುವ ನಿರ್ಧಾರದ ಹಿಂದೆ, ಬಂಧನಕ್ಕೆ ಒಳಗಾಗಿರುವ ತಮ್ಮ ಆಪ್ತರನ್ನು ರಕ್ಷಿಸುವ ಇರಾದೆ ಇದೆ ಎಂಬ ಸಂಶಯ ಮೂಡುತ್ತದೆ. ತನಿಖೆಯು ನಿಷ್ಪಕ್ಷಪಾತವಾಗಿ, ನಡೆಯುತ್ತಿದ್ದು, ಅಕ್ರಮದಲ್ಲಿ ಒಳಗಾಗಿದವರು, ಎಷ್ಟೇ ದೊಡ್ಡವರಾದರೂ ರಕ್ಷಿಸುವ ಪ್ರಶ್ನೆಯಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಇಲಾಖೆ ಮುಖ್ಯಸ್ಥ ಪ್ರವೀಣ್ ಸೂದ್ ಹಾಗೂ ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಉಪಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post