ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಟನ ತರಂಗಿಣಿ -ಸ್ಕೂಲ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ನ ಗುರು ವಿದುಷಿ ವೈ.ಜಿ. ಶ್ರೀಲತಾ ಅವರ ಶಿಷ್ಯೆ ಸ್ತುತಿಶ್ರೀ ತಿರುಮಲೈ ಭರತನಾಟ್ಯ ರಂಗಪ್ರವೇಶಕ್ಕೆ ಅಣಿಯಾಗಿದ್ದಾರೆ.
ರಾಜಧಾನಿಯ ಜಯನಗರ 8ನೇ ಬಡಾವಣೆಯ ಜೆಎಸ್‌ಎಸ್ ಸಭಾಂಗಣದಲ್ಲಿ ಆ. 6ರ ಸಂಜೆ 5.30ಕ್ಕೆ ಆಯೋಜನೆಗೊಂಡಿರುವ `ನೃತ್ಯ ಕುಸುಮಾಂಜಲಿ’ ಶೀರ್ಷಿಕೆಯಡಿ ಯುವ ಕಲಾವಿದೆ ಸ್ತುತಿಶ್ರೀ ಹೊಸ ಭರವಸೆಯನ್ನು ಮೂಡಿಸಲು ಅಡಿ ಇಡುತ್ತಿರುವುದು ಬಹು ವಿಶೇಷ. ಮೈಸೂರಿನ ನೃತ್ಯಗಿರಿ ಪರ್ಫಾಮಿಂಗ್ ಆಟ್ಸ್ ಸೆಂಟರ್ ನಿರ್ದೇಶಕಿ ವಿದುಷಿ ಕೃಪಾ ಫಡ್ಕೆ, ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ಪ್ರವಚನ ರತ್ನ ವಿದ್ವಾನ್ ಜಿ.ಎನ್. ರಾಮಪ್ರಸಾದ್, ಬೇಕಲ್‌ನ ಗೋಕುಲಂ ಗೋಶಾಲಾ ಆಚಾರ್ಯ ವಿದ್ಯಾಪೀಠದ ವಿದ್ವಾನ್ ವಿಷ್ಣು ಪ್ರಸಾದ್ ಹೆಬ್ಬಾರ್ ಈ ಸಂದರ್ಭಕ್ಕೆ ಸಾಕ್ಷಿಯಾಗಲಿದ್ದಾರೆ.
ಪ್ರತಿಭಾ ಪರಿಚಯ:
ಬೆಂಗಳೂರಿನ ಹಾರ್ಡ್ವೇರ್ ಇಂಜಿನಿಯರ್ ವೆಂಕಟೇಶ್ ಮತ್ತು ಮಾಧುರಿ ಮೈಸೂರು ಅವರ ಪುತ್ರಿ ಸ್ತುತಿಶ್ರೀಗೆ ಈಗ `ನೃತ್ಯ ಕುಸುಮಾಂಜಲಿ’ ಹೊಸ ಕನಸುಗಳ ಹೊಂಗಿರಣ ಮೂಡಿಸಿದೆ. ನಗರದ ಎ.ಎಸ್.ಸಿ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಸ್ತುತಿಶ್ರೀ ನೃತ್ಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದು ಶಿಶುವಿಹಾರದ ಹಂತದಲ್ಲಿ. ವಿದುಷಿ ರಂಜನಿ ಉಮೇಶ್ ಅವರಲ್ಲಿ ಪ್ರಾಥಮಿಕ ಅಭ್ಯಾಸಗಳನ್ನು ಮಾಡಿದ ಈಕೆ ನಾಟ್ಯ ನಿಕೇತನದ ಗುರು ವಿದುಷಿ ರೇವತಿ ನರಸಿಂಹನ್ ಅವರಲ್ಲಿ ಕೆಲವರ್ಷ ನೃತ್ಯದ ಪಟ್ಟುಗಳನ್ನು ಕಲಿತರು. ಸದ್ಯ ಬಹುಶ್ರುತ ವಿದುಷಿ ವೈ.ಜಿ. ಶ್ರೀಲತಾ ಅವರ ಕಲಾ ಶಾಲೆಯಲ್ಲಿ ನೃತ್ಯದ ತಾಲೀಮು ಮುಂದುವರಿಸಿದ್ದಾರೆ.
Also read: ಅಪರೂಪದ ಸಂಗತಿಗೆ ಸಾಕ್ಷಿಯಾದ ಬೀಳ್ಕೊಡುಗೆ ಕಾರ್ಯಕ್ರಮ
ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ಸ್ತುತಿಶ್ರೀ, ಈಗ ಸೀನಿಯರ್ ಪರೀಕ್ಷೆಗೆ ಅಭ್ಯಾಸ ನಡೆಸಿದ್ದಾರೆ. ಗುರು ಮೈಥಿಲಿ ಮತ್ತು ಹೇಮಾ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನವನ್ನೂ (ಜ್ಯೂನಿಯರ್ ಪಾಠ) ಕಲಿತ ಸ್ತುತಿಶ್ರೀ, ನರ್ತನ ಅಭ್ಯಾಸಕ್ಕೆ ಹೆಚ್ಚು ಸಮಯ ನೀಡುತ್ತಿರುವುದು ಗಮನಾರ್ಹ. ಪಠ್ಯ ವಿಷಯದಲ್ಲೂ ಚುರುಕಾಗಿರುವ ಈಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಅತ್ಯುನ್ನತ ಶ್ರೇಣಿ ತನ್ನದಾಗಿಸಿಕೊಂಡಿದ್ದು, ಮುಂದೆ ನೃತ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವ ಮತ್ತು ನ್ಯಾಯಶಾಸ್ತç (ಲಾ) ಓದುವ ಗುರಿ ಇಟ್ಟುಕೊಂಡಿದ್ದಾರೆ.
ಬಹುಮಾನ- ವೇದಿಕೆ
ಅರಳು ಪ್ರತಿಭೆ ಸ್ತುತಿಶ್ರೀ ನೃತ್ಯಾಸಕ್ತಿಗೆ ಹಲವು ವೇದಿಕೆಗಳು ಪ್ರೋತ್ಸಾಹ ನೀಡಿದವು. ಕೆಲವು ಬಹುಮಾನಗಳೂ ಪ್ರೇರಣೆ ತುಂಬಿದವು. ಬೆಂಗಳೂರು ಇಸ್ಕಾನ್ ಹೆರಿಟೇಜ್ ಫೆಸ್ಟಿವಲ್‌ನ ಶಾಸ್ತ್ರೀಯ ನೃತ್ಯದಲ್ಲಿ ವಿನ್ನರ್ ಆದ ಸ್ತುತಿಶ್ರೀಗೆ ರೋಟರಿ ಇಂದಿರಾನಗರ ಆಯೋಜಿಸಿದ್ದ ನೃತ್ಯ ಸ್ಪರ್ಧೆಯಲ್ಲೂ ಪದಕ ದೊರಕಿತು. ನೃತ್ಯ ಶಾಲೆ ವಾರ್ಷಿಕೋತ್ಸವಗಳು, ಜಯನಗರ ರಾಘವೇಂದ್ರ ಸ್ವಾಮಿಗಳ ಮಠ, ಕಟೀಲು ದುರ್ಗಾ ಪರಮೇಶ್ವರಿ ಸನ್ನಿಧಿ, ಸತ್ಯಗಾಲಂ ಕೋಟೆ ವೆಂಕಟರಮಣ ದೇಗುಲ, ಪುತ್ತೂರಿನ ಮಹಾಬಲ ಲಲಿತಕಲಾ ಸಭಾ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನಕ್ಕೆ ಅವಕಾಶ ದೊರೆತಿದ್ದು ದೈವಿಕ ಕೃಪೆಯೇ ಸರಿ ಎಂದು ಭಾವ ಭರಿತರಾಗಿ ಹೇಳುತ್ತಾರೆ ಆಕೆಯ ತಾಯಿ ಮಾಧುರಿ ಮೈಸೂರು.
ತುಂಬು ಕುಟುಂಬದ ಸಂಸ್ಕೃತಿ :
ಸಂಸ್ಕಾರವಂತ ವಂಶದಲ್ಲಿ, ಸಂಸ್ಕೃತಿ ಮತ್ತು ಸದ್ವಿಚಾರಗಳಿರುವ ಪರಿಸರದಲ್ಲಿ ಜನಿಸಿದ ಮಕ್ಕಳು ಯಾವತ್ತೂ ನಮ್ಮ ಪರಂಪರೆಯ ಪ್ರತೀಕಗಳೇ ಆಗಿರುತ್ತಾರೆ ಎಂಬುದಕ್ಕೆ ಸ್ತುತಿಶ್ರೀ ಒಂದು ಮಾದರಿ. ಮೈಸೂರಿನ ಶೆಲ್ವ ನಾರಾಯಣ ಮತ್ತು ಮೈಥಿಲಿ ಅವರಿಗೆ ಸಂಗೀತ, ವೇದ ರಂಗದಲ್ಲಿ ಇರುವ ಶ್ರದ್ಧಾ ಭಕ್ತಿಗಳು ಅವರ ಪುತ್ರಿ ಮಾಧುರಿ ಅವರಲ್ಲಿ ಮೇಳೈಸಿದವು. ಸಾಕಷ್ಟು ಸಂಗೀತ ಕಛೇರಿಗಳಿಗೆ ಹೋಗಿ ತನ್ಮಯತೆಯಿಂದ ಗಾಯನ ಮಾಧುರ್ಯ ಆಲಿಸುವುದು ಮಾಧುರಿಯ ಪರಮಾಪ್ತ ಹವ್ಯಾಸವಾಯಿತು. ಮಗಳು ಸ್ತುತಿಶ್ರೀಗೂ ಈ ಮೂಲಕ ತಾಳ- ಶೃತಿಗಳ ಪರಿಚಯವಾಯಿತು. ಸಂಗೀತ ಕೇಳ್ಮೆ ದಿನಚರಿಯೇ ಆಗಿಬಿಟ್ಟಿತು. ಇದರ ಫಲವೇ ಸ್ತುತಿ ಈಗ ನೃತ್ಯ ರಂಗದ ಯುವ ಪ್ರತಿಭೆ. ಅಜ್ಜ ರಂಗಸ್ವಾಮಿ (ವೆಂಕಟೇಶ್ ಅವರ ತಂದೆ) ಬಾಲ್ಯದಲ್ಲಿ ಹೇಳುತ್ತಿದ್ದ ಪೌರಾಣಿಕ ಕಥೆಗಳನ್ನು ಕೇಳುತ್ತಲೇ ತುಂಬು ಕುಟುಂಬದಲ್ಲಿ ಬೆಳೆದ ಸ್ತುತಿಶ್ರೀಗೆ ಸಹಜವಾಗಿಯೇ ರಾಮಾಯಣ, ಮಹಾಭಾರತ, ಭಾಗವತದ ಪಾತ್ರಗಳ ಬಗ್ಗೆ ಕುತೂಹಲಾಸಕ್ತಿ ಹೆಚ್ಚಾಯಿತು. ಇವೆಲ್ಲವುಗಳ ಫಲವೇ ಆಕೆಗೆ ಸಂಗೀತ ಮತ್ತು ನೃತ್ಯದ ಅಭಿರುಚಿ ಮೂಡಿಸಲು ಕಾರಣೀಭೂತವಾಗಿವೆ.
ಸ್ತುತಿಶ್ರೀ ತಂದೆ ವೆಂಕಟೇಶ್ ವೃತ್ತಿಯಲ್ಲಿ ಹಾರ್ಡ್’ವೇರ್ ಇಂಜಿನಿಯರ್ ಆಗಿದ್ದರೂ ಪ್ರವೃತ್ತಿಯಲ್ಲಿ ವೇದಾಧ್ಯಯನಕಾರರು. ಮಗಳ ಆಸಕ್ತಿಗಳಿಗೆ ಅವರು ಬೆನ್ನೆಲುಬಾಗಿದ್ದಾರೆ. ಒಟ್ಟಾರೆ ಸುಸಂಸ್ಕೃತ-ತುಂಬು ಕುಟುಂಬದ ಪ್ರತಿಭೆಯೊಂದು ಸಜ್ಜನ ಬಂಧುಗಳ, ವಿವಿಧ ರಂಗದ ವಿದ್ವಾಂಸರ ಸಮ್ಮುಖ ರಂಗಾರೋಹಣ ಮಾಡುತ್ತಿರುವುದು ಒಂದು ಸುಕೃತ- ಸಮ್ಮಿಲನ- ಸತ್ಸಂಗವೇ ಆಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post