ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಕೃತಿ, ಪರಿಸರವೂ ಉಳಿಯಬೇಕು, ಅಭಿವೃದ್ಧಿಯೂ ಆಗಬೇಕು. ಅದುವೇ ಸುಸ್ಥಿರ ಅಭಿವೃದ್ಧಿ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶ್ರಮಿಸುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ #Minister Eshwar Khandre ಪ್ರತಿಪಾದಿಸಿದ್ದಾರೆ.
ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಶೃಂಗಸಭೆಯ 27ನೇ ಆವೃತ್ತಿಯಲ್ಲಿ ಪ್ರದರ್ಶಕರಿಗೆ ಸುಸ್ಥಿರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, 1987 ರಲ್ಲಿ, ‘ವಿಶ್ವಸಂಸ್ಥೆಯ ಬ್ರೂಂಟ್ ಲ್ಯಾಂಡ್ ಕಮಿಷನ್’ ಸುಸ್ಥಿರತೆ ಎಂದರೆ “ಭವಿಷ್ಯದ ಪೀಳಿಗೆಯ ಸ್ವಂತ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯದೊಂದಿಗೆ ರಾಜಿ ಮಾಡಿಕೊಳ್ಳದೆ ಪ್ರಸ್ತುತ ಪೀಳಿಗೆಯ ಅಗತ್ಯಗಳನ್ನು ಪೂರೈಸುವುದೇ ಸುಸ್ಥಿರತೆ” ಎಂದು ವ್ಯಾಖ್ಯಾನಿಸಿದೆ, ಇಂದು ನಾವು ಅನುಭವಿಸುತ್ತಿರುವ ಪ್ರಕೃತಿ ದತ್ತ ಜಲ, ನೆಲ, ಅರಣ್ಯ, ಎಲ್ಲವೂ ಮುಂದಿನ ಪೀಳಿಗೆಯಿಂದ ನಾವು ಪಡೆದಿರುವ ಸಾಲವಾಗಿದೆ ಎಂದರು.
ಇಂದು ನಾವು ‘ಪರಿಸರ ಸಂರಕ್ಷಣೆ, ಸಂಪನ್ಮೂಲ ಸಂರಕ್ಷಣೆ, ಇಂಧನ ಸಂರಕ್ಷಣೆ, ಉತ್ತಮ ರೂಢಿಗಳು, ಸಂಪನ್ಮೂಲಗಳ ಹಿತ-ಮಿತ ಬಳಕೆ, ಮರುಬಳಕೆಗೆ ಒತ್ತು ನೀಡಬೇಕು. ಉತ್ತಮ ಸುಸ್ಥಿರತೆಯ ಮಾದರಿಯು ಜಾಗತಿಕ ಮಟ್ಟದಲ್ಲಿ ಬಡತನವನ್ನು ನಿರ್ಮೂಲನೆ ಮಾಡುತ್ತದೆ, ಜಾಗತಿಕ ಆಹಾರ ಭದ್ರತೆಯನ್ನು ಖಚಿತಪಡಿಸುತ್ತದೆ, ಪ್ರಪಂಚದಾದ್ಯಂತ ಎಲ್ಲ ವಯೋಮಾನದವರಲ್ಲೂ ಆರೋಗ್ಯಕರ ಜೀವನವನ್ನು ಉತ್ತೇಜಿಸುತ್ತದೆ, ಪರಂಪರೆಯ ಸಂರಕ್ಷಣೆಗೂ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
Also read: ಕೆಪಿಟಿಸಿಎಲ್ ಹುದ್ದೆ ನೇಮಕಾತಿ | ಅರ್ಜಿ ಮತ್ತು ಶುಲ್ಕ ಪಾವತಿ ದಿನಾಂಕ ವಿಸ್ತರಣೆ
ಬಲಿಷ್ಠ ಭಾರತ – ಬುದ್ಧಿವಂತ ಯುವಕರು
ಭಾರತ, ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕ ರಾಷ್ಟ್ರವಾಗಿದೆ. ಬಲವಾದ ಆರ್ಥಿಕ ಬೆಳವಣಿಗೆಯು ದೃಢವಾದ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆ ಮತ್ತು ಬಲವಾದ ಸೇವಾ ವಲಯದ ನೆಲೆಯಿಂದ ಮುನ್ನಡೆಯುತ್ತದೆ. ಭಾರತದ ಯುವ ಮತ್ತು ವಿದ್ಯಾವಂತ ಕಾರ್ಮಿಕ ಶಕ್ತಿಯು ದೇಶವನ್ನು ಬಲಿಷ್ಠಗೊಳಿಸಿದೆ. ನಮ್ಮ ಬುದ್ಧಿವಂತ ಯುವಜನರು ಅದರ ರೂವಾರಿಗಳಾಗಿದ್ದಾರೆ ಎಂದರು.
ಕರ್ನಾಟಕ ಸುಸ್ಥಿರ ಅಭಿವೃದ್ಧಿ ಗುರಿ -ಎಸ್.ಡಿ.ಜಿ. ಸಾಧನೆಯಲ್ಲಿ ಹಿಂದೆ ಬಿದ್ದಿಲ್ಲ. ಈ ಗಮನಾರ್ಹ ಸಾಧನೆಗಾಗಿ ಸರ್ಕಾರಿ ಸಂಸ್ಥೆಗಳೊಂದಿಗೆ ಒಟ್ಟಾಗಿ ಶ್ರಮಿಸಲಾಗುತ್ತಿದೆ. ಶೂನ್ಯ ಹೊರಸೂಸುವಿಕೆ, ಏಕ ಬಳಕೆ ಪ್ಲಾಸ್ಟಿಕ್ ನಿಗ್ರಹದಂತಹ ಕ್ರಮಗಳು ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸಿವೆ.
ಇಂದು, ಬೆಂಗಳೂರು ಟೆಕ್ ಶೃಂಗ 2024ರಲ್ಲಿ ಪ್ರದರ್ಶಕರಿಗೆ ಸುಸ್ಥಿರ ಪ್ರಶಸ್ತಿ ನೀಡಲಾಗಿದೆ. ಇದು ಇತರರಿಗೂ ಮಾದರಿಯಾಗಲಿ, ಉತ್ತಮ ಸುಸ್ಥಿರ ರೂಢಿಗಳನ್ನು ಎಲ್ಲರೂ ಅಳವಡಿಸಿಕೊಳ್ಳುವ ಮೂಲಕ ಇರುವ ಏಕೈಕ ಭೂಗ್ರಹದ ರಕ್ಷಣೆಗೆ ನಮ್ಮದೇ ಆದ ಕೊಡುಗೆ ನೀಡಬೇಕು ಎಂದು ಈಶ್ವರ ಖಂಡ್ರೆ ಹೇಳಿದರು.
ಈ ಶೃಂಗಸಭೆಯ ಧ್ಯೇಯ ಅನ್ ಬೌಂಡ್ ಅಂದರೆ ಅಪಾರ ಎಂಬುದಾಗಿದೆ. ನಮ್ಮ ಪ್ರತಿಭಾವಂತ ಯುವಕರಿಗೆ ಆಗಸವೇ ಮಿತಿ. ಸುಸ್ಥಿರ ಅಭಿವೃದ್ಧಿಯ ಕ್ಷೇತ್ರದಲ್ಲಿ ಸಂಶೋಧನೆ ನಡೆಯಬೇಕು. ಅದರ ಫಲ ಶ್ರೀಸಾಮಾನ್ಯನಿಗೂ ಲಭಿಸಬೇಕು. ಆಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರುಗಳಾದ ಪ್ರಿಯಾಂಕ್ ಖರ್ಗೆ, ಶರಣ್ ಪ್ರಕಾಶ್ ಪಾಟೀಲ್ ಮತ್ತಿತರರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post