ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕ ರಾಜ್ಯದಲ್ಲಿ ಉದ್ಯೋಗ ನೀತಿ ಯುವಕರಿಗೆ,ಉದ್ಯೋಗಾಕಾಂಕ್ಷಿಗಳಿಗೆ ಲಾಭದಾಯಕವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಆನ್ ಲೈನ್ ಮೂಲಕ ವಿದ್ಯಾರ್ಥಿ ವೇತನ ವಿತರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಉದ್ಯೋಗ ನೀತಿಯಿಂದ ರಾಜ್ಯದ ಯುವಕರ ಬದುಕು ಹಸನಾಗಲಿದೆ. ಕೆಳಸ್ತರದ ದುಡಿಯುವ ವರ್ಗಕ್ಕೆ ಸಹಾಯಧನ ಬಹಳ ದೊಡ್ಡ ಆಸರೆಯಾಗಿದೆ. ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಈ ಕಾರ್ಯಕ್ರಮದಿಂದ ಮಕ್ಕಳು ಉತ್ತಮ ಶಿಕ್ಷಣ ಪಡೆದು,ವಿವಿಧ ಉದ್ಯೋಗಳಲ್ಲಿ ತೊಡಗಿಕೊಂಡು ರಾಜ್ಯದ ಆರ್ಥಿಕತೆಯ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಬೇಕು ಎಂದು ತಿಳಿಸಿದರು.
ದೇಶದ ಆರ್ಥಿಕತೆಯನ್ನು ಮುನ್ನೆಡೆಸುವವರು ದುಡಿಯುವ ವರ್ಗ. ದೇವರು ರೈತರ ಶ್ರಮ ಹಾಗೂ ಕಾರ್ಮಿಕರ ಬೆವರಿನಲ್ಲಿದ್ದಾನೆ ಎಂದು ಕವಿ ರವೀಂದ್ರನಾಥ ಟ್ಯಾಗೋರ್ ಅವರು ತಿಳಿಸಿದಂತೆ ದುಡಿಯುವ ವರ್ಗವನ್ನು ದೈವತ್ವಕ್ಕೆ ಹೋಲಿಸುವ ಸಂಸ್ಕೃತಿ ಭಾರತ ದೇಶದಲ್ಲಿದೆ ಎಂದು ತಿಳಿಸಿದರು.
ಸಮಾಜದಲ್ಲಿ ಕಾಯಕದ ನಿಷ್ಟೆ, ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ದೇಶದ ಜನ ಶ್ರೀಮಂತವಾಗಿದ್ದರೆ, ದೇಶ ಅಭಿವೃದ್ಧಿಯಾದಂತೆ. ರಾಜ್ಯದಲ್ಲಿ ದುಡಿಯುವ ವರ್ಗಕ್ಕೆ ಆರ್ಥಿಕ ಶಕ್ತಿಯನ್ನು ನೀಡಿದರೆ, ರಾಜ್ಯದ ಆರ್ಥಿಕ ಶಕ್ತಿ ವೃದ್ಧಿಸುತ್ತದೆ. ಕಟ್ಟಡ ಕಾರ್ಮಿಕರು, ವಲಸೆ ಬಂದಿರುವವರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವುದು ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post