ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಾಗಮಂಗಲ ಗಲಭೆ ಹಿಂದೆ ಕುಮಾರಸ್ವಾಮಿ ಇದ್ದಾರೆ ಎಂಬ ಡಿ.ಕೆ. ಸುರೇಶ್ #D K Suresh ಆರೋಪಕ್ಕೆ ತಿರುಗೇಟು ಕೊಟ್ಟ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ #H D Kumaraswamy ಅವರು, ಆ ಬ್ರದರ್ ಗಳ ಹಿನ್ನೆಲೆ ಏನು ಎಂಬುದು ಇಡೀ ಜಗತ್ತಿಗೇ ಗೊತ್ತಿದೆ ಎಂದರು.
ಬೆಂಗಳೂರಿನಲ್ಲಿ ಶನಿವಾರ ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಡಿ.ಕೆ.ಸುರೇಶ್ ಅವರ ಹಿನ್ನಲೆ ಏನು ಅಂತ ಗೊತ್ತಿಲ್ಲವೇ? ಅವರ ಮಾರ್ಗ ಎಂಥದು ಎನ್ನುವುದು ಎಲ್ಲರಿಗೂ ಗೊತ್ತು ಎಂದು ಕಿಡಿಕಾರಿದರು.
ಅಣ್ಣ – ತಮ್ಮಂದಿರು ಯಾವ ಮಾರ್ಗದಲ್ಲಿ ಬಂದಿದ್ದಾರೆ. ಯಾರಿಗೆ ಹೇಗೆಲ್ಲಾ ಧಮ್ಕಿ ಹಾಕಿದ್ದಾರೆ. ಯಾರ ಯಾರ ಆಸ್ತಿಗಳನ್ನು ಲಪಟಾಯಿಸಿ ಲೂಟಿ ಮೂಡಿದ್ದಾರೆ, ಇದೆಲ್ಲವೂ ಜನರಿಗೆ ಗೊತ್ತಿದೆ. ಅಂತವರ ಬಗ್ಗೆ ನಾನು ಹೇಳಿಕೆ ಕೊಡಬೇಕಾ? ಎಂದು ಸಚಿವರು ತೀಕ್ಷ್ಣವಾಗಿ ಪ್ರಶ್ನಿಸಿದರು.
Also read: ಕ್ರೈಸ್ಟ್‌ಕಿಂಗ್: ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳು ಕ್ರಿಕೆಟ್ ಪಂದ್ಯಾಟದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ
ನಾನು ವಾರಕ್ಕೊಮ್ಮೆ ರಾಜ್ಯಕ್ಕೆ ಬರುವುದು ಗಲಾಟೆ ಮಾಡಿಸುವುದಕ್ಕಾ? ನಾನು ನಾಗಮಂಗಲಕ್ಕೆ ಹೋಗಿದ್ದು ಶಾಂತಿ ಉದ್ದೇಶಕ್ಕೆ. ಅಲ್ಲಿ ನಾನು ಏನು ಸಂದೇಶ ಕೊಟ್ಟಿದ್ದೀನಿ ಎಂಬುದನ್ನು ಆ ವ್ಯಕ್ತಿ ಒಮ್ಮೆ ಗಮನಿಸಲಿ ಡಿ.ಕೆ.ಸುರೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಲೈಕೆ ರಾಜಕಾರಣಕ್ಕೆ ಮರುಳಾಗಬೇಡಿ ಎಂದು ಹೇಳಿದ್ದೇನೆ. ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಇದು ಕುವೆಂಪು ಅವರು ಕೊಟ್ಟ ಸಂದೇಶ. ಈ ಸರ್ವ ಜನಾಂಗದ ಶಾಂತಿಯ ತೋಟ ನೆಮ್ಮದಿಯಿಂದ ಇರಬೇಕು. ಎಲ್ಲರಿಗೂ ಕೈ ಮುಗಿದು ಮನವಿ ಮಾಡುತ್ತೇನೆ. ಎಲ್ಲಾ ಅಣ್ಣ ತಮ್ಮಂದಿರ ರೀತಿ ಬದುಕಬೇಕೆಂದು ನಾಗಮಂಗಲದಲ್ಲಿ ನಾಡಿನ ಜನತೆಗೆ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.
ನಾಗಮಂಗಲದಲ್ಲಿ ನಾನೇನು ಬೆಂಕಿ ಹಚ್ಚೋದಕ್ಕೆ ಹೋಗಿದ್ನಾ? ಬೆಂಕಿ ಹಚ್ಚುವ ಸಂಸ್ಕೃತಿ ಅವದ್ದು ಎಂದು ಸಚಿವರು ಟೀಕಿಸಿದರು.
ಕರ್ನಾಟಕಕ್ಕೆ ಬಂದರೆ ಇವರು ಸಹಿಸಲ್ಲ
ನಾನು ನಾಗಮಂಗಲಕ್ಕೆ ಹೋಗುವುದು ಇರಲಿ,ಕರ್ನಾಟಕಕ್ಕೆ ಬರುವುದನ್ನೇ ಇವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನನ್ನ ಮತ್ತು ನಮ್ಮ ಪಕ್ಷದ ಕಥೆ ಮುಗಿದೇ ಹೋಯಿತು ಎಂದುಕೊಂಡಿದ್ದರು. ಈಗ ಕೇಂದ್ರದಲ್ಲಿ ಮಂತ್ರಿ ಆಗಿರುವುದಕ್ಕೆ ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರ ನೋವಿಗೆ ಔಷಧಿ ನಾನು ಎಲ್ಲಿಂದ ಕೊಡಲಿ? ಎಂದು ಕುಮಾರಸ್ವಾಮಿ ಅವರು ಟಾಂಗ್ ನೀಡಿದರು.
ಚನ್ನಪಟ್ಟಣ ಚುನಾವಣೆಗೂ ನಾಗಮಂಗಲಕ್ಕೂ ಏನು ಸಂಬಂಧ?
ಕುಮಾರಸ್ವಾಮಿಯವರು ಚನ್ನಪಟ್ಟಣ ಚುನಾವಣೆಗಾಗಿ ಬರುದ್ದಾರೆ ಎಂದು ಟೀಕೆ ಮಾಡಿದರೆ ನಾನೇನು ಹೇಳಲಿ? ಚನ್ನಪಟ್ಟಣ ಚುನಾವಣೆಗೂ ನಾಗಮಂಗಲಕ್ಕೂ ಏನು ಸಂಬಂಧ? ಅಲ್ಲಿ ನಡೆದಿರುವ ಘಟನೆ ಬಗ್ಗೆ ಪರಿಶೀಲನೆ ಮಾಡಲು ಮಂಡ್ಯ ಸಂಸದನಾಗಿ ಅಲ್ಲಿಗೆ ಹೋಗಿದ್ದೇನೆ. ನಾನು ಹೋದಾಗ ಒಂದು ಸಮಾಜದವರನ್ನ ಒಲೈಸಿದ್ದೇನೆಯೇ? ಎರಡೂ ಸಮಾಜಗಳಲ್ಲಿ ಆಗಿರುವ ಅನಾಹುತವನ್ನು ಅರಿತುಕೊಂಡು ನನ್ನ ಕೈಲಾದಷ್ಟು ಪರಿಹಾರ ಕೊಟ್ಟು ಬಂದಿದ್ದೇನೆ ಎಂದರು ಅವರು.
ಇವರ ಸರ್ಟಿಫಿಕೇಟ್ ನನಗೆ ಬೇಕಿಲ್ಲ?
ಮಾಗಡಿ ಅಭಿವೃದ್ಧಿಗೆ ನನ್ನ ಕೊಡುಗೆ ಇಲ್ಲ ಎಂದು ಕೆಲವರು ಹೇಳಿಕೊಂಡು ತಿರುಗುತ್ತಿದ್ದಾರೆ. ಅಲ್ಲಿ ನಾನು ಏನೆಲ್ಲಾ ಕೆಲಸ ಮಾಡಿ ಅಭಿವೃದ್ಧಿ ಮಾಡಿದ್ದೇನೆ ಎನ್ನುವುದು ಜನತೆಗೆ ಗೊತ್ತಿದೆ. ಯಾರೋ ಒಬ್ಬರಿಂದ ನಾನು ಸರ್ಟಿಫಿಕೇಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಮಾಗಡಿ ಜನರೇ ನನಗೆ ಸರ್ಟಿಫಿಕೇಟ್ ಕೊಡುತ್ತಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
₹600 ಕೋಟಿ ಕಳ್ಳ ಬಿಲ್
ಮಾಗಡಿಯಲ್ಲಿ 2012-13ರಲ್ಲಿ ಸುಮಾರು ₹600 ಕೋಟಿ ಲಪಟಾಯಿಸಿದಾರೆ. ಕಳ್ಳ ಬಿಲ್ ಮಾಡಿ ದುಡ್ಡು ಲೂಟಿಯಾಗಿದೆ ಎಂದು ವಿಧಾನಸೌದದಲ್ಲಿ ಹೇಳಿದ್ದು ಯಾರು? ಸಿಎಂ ಅವರನ್ನು ಕರೆದುಕೊಂಡು ಹೋಗಿ ಭಾಷಣ ಮಾಡಿಸಿದ್ದಾರಲ್ಲವೇ? ಮಾಗಡಿಯಲ್ಲಿ ನಡೆದ ಅಕ್ರಮವನ್ನು ಯಾರು ಮುಚ್ಚಿ ಹಾಕಿದರು? ನಾಲಿಗೆ ಹರಿಯಬಿಡುವ ವ್ಯಕ್ತಿಗೆ ಇದು ಗೊತ್ತಿಲ್ಲವೇ? ಇವರಿಂದ ನಾನು ಪಾಠ ಕಲಿಬೇಕಾ? ಎಂದು ಸಚಿವರು ಕಿಡಿಕಾರಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post