ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರತಿ ದಿನ ಒಂದು ತಾಸು ಹೆಚ್ಚಿಗೆ ಕೆಲಸ ಮಾಡಿ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಅವರು ಸರ್ಕಾರಿ ನೌಕರರಿಗೆ ಕರೆ ನೀಡಿದರು.
ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7 ನೇ ವೇತನ ಆಯೋಗ ರಚನೆ ಮಾಡಿರುವುದಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರುಗಳ ನಿಯೋಗವು ಇಂದು ಮುಖ್ಯ ಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದರು.

ಕರ್ನಾಟಕದಲ್ಲಿ ವೇತನ ಆಯೋಗವನ್ನು ಐದು ವರ್ಷವಾದ ಕೂಡಲೇ ಘೋಷಣೆಯಾಗಿರುವುದು ನಮ್ಮ ಸರ್ಕಾರದ ಅವಧಿಯಲ್ಲಿ. ವರ್ಷದಿಂದ ವರ್ಷಕ್ಕೆ ಹಣದುಬ್ಬರ ಹೆಚ್ಚಾಗುತ್ತದೆ . ಸರ್ಕಾರಿ ನೌಕರರಾಗಿ ಸೇವೆಗೆ ಸೇರಿದ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ವ್ಯತ್ಯಾಸವಿರುತ್ತದೆ. ಸಮಯ ಮತ್ತು ಹಣ ಎರಡೂ ಬಹಳ ಮುಖ್ಯ. ಸರಿಯಾದ ಸಮಯದಲ್ಲಿ ಸರಿಯಾದ ಸಂಪಾದನೆಯಾದರೆ ಬದುಕಿಗೆ ಪ್ರೇರಣೆ. ಅದಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಕೂಡ ಇದಕ್ಕೆ ಒತ್ತಾಸೆಯಾಗಿದ್ದರು. ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರೂ ಒತ್ತಾಯ ಮಾಡಿದ್ದರು ಎಂದರು.

ಇದಕ್ಕೆ ನೌಕರರ ಸಹಕಾರ ಕೂಡ ಅಗತ್ಯ. ಇದನ್ನು ಸಕಾರಗೊಳಿಸಿ ಎಲ್ಲರಿಗೂ ಒಳ್ಳೆಯದು ಆಗಬೇಕು. ಚಿಂತೆ ಮಾಡಬೇಡಿ. ಮುಂದಿನ ಸರ್ಕಾರ ನಮ್ಮದೇ ಬರಲಿದ್ದು, ಇದರ ಅನುಷ್ಠಾನ ನಾವೇ ಮಾಡುತ್ತೇವೆ ಎಂದರು.

ವಿಶೇಷವಾಗಿ ಕೋವಿಡ್ ಸಂದರ್ಭದಲ್ಲಿ ಆರೋಗ್ಯ, ಪೊಲೀಸ್, ಗ್ರಾಮೀಣಾಭಿವೃದ್ಧಿ, ಕಂದಾಯ ಇಲಾಖೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ. ಕಂದಾಯ, ಲೋಕೋಪಯೋಗಿ, ಅಗ್ನಿಶಾಮಕ ಇಲಾಖೆ ಸೇರಿದಂತೆ ಬಹುತೇಕ ಎಲ್ಲಾ ಇಲಾಖೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ. ನಾನು ಮುಖ್ಯ ಮಂತ್ರಿಯಾದ ಸಂದರ್ಭದಲ್ಲಿ ಐದು ಸಾವಿರ ಕೋಟಿ ಆದಾಯ ಸಂಗ್ರಹ ಕೊರತೆ ಇತ್ತು. ಇದನ್ನು ಭರ್ತಿ ಮಾಡುವಂತೆ ಸೂಚಿಸಿದಾಗ ತೆರಿಗೆ ಇಲಾಖೆ ಅಧಿಕಾರಿಗಳು ಇದಕ್ಕೆ ಸ್ಪಂದಿಸಿ ಆ ಮೊತ್ತವನ್ನು ತುಂಬಿದ್ದಷ್ಟೇ ಅಲ್ಲದೆ, ಆ ವರ್ಷದ ಗುರಿಗಿಂತಲೂ 13 ಸಾವಿರ ಕೋಟಿ ರೂ.ಗಳ ಹೆಚ್ಚಿನ ಆದಾಯ ಸಂಗ್ರಹ ಮಾಡಿದರು ಎಂದರು.
ಸರ್ಕಾರದ ಮುಖ್ಯಸ್ಥನಾಗಿ ಸರಕಾರಿ ನೌಕರರ ಸೇವೆಯನ್ನು ಗುರುತಿಸುವುದಾಗಿ ತಿಳಿಸಿ ಅಭಿನಂದಿಸಿದ ಮುಖ್ಯಮಂತ್ರಿಗಳು ಅದೇ ಸಂದರ್ಭದಲ್ಲಿ ನ್ಯಾಯಸಮ್ಮತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕೆಂಬ ತೀರ್ಮಾನ ಮಾಡಿದೆ. ಕೇಂದ್ರ ಸರ್ಕಾರ ಡಿಎ ಘೋಷಿಸಿದ 24 ಗಂಟೆಯೊಳಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಮತ್ತೊಂದು ಡಿಎ ಕೇಂದ್ರ ಸರ್ಕಾರಕ್ಕೆ ಬೆಳಿಗ್ಗೆ ಘೋಷಣೆ ಮಾಡಿದರೆ ಸಂಜೆ ರಾಜ್ಯ ದಲ್ಲಿ ಆದೇಶ ಹೊರಡಿಸಲಾಯಿತು ಎಂದರು.

ಕಾರ್ಯಾಂಗ ಜನಸ್ಪಂದನೆಯ ಕೆಲಸ ಮಾಡಿದಾಗ ಸರ್ಕಾರಕ್ಕೆ , ವ್ಯವಸ್ಥೆಗೆ ಒಳ್ಳೆಯ ಹೆಸರು ಬರುತ್ತದೆ. ಜನಸಂಖ್ಯೆ ಹೆಚ್ಚಿದ್ದು, ಎಲ್ಲರ ಅಶೋತ್ತರಗಳೂ ಹೆಚ್ಚಾಗಿವೆ. ಯುವಕರು, ವಿದ್ಯಾವಂತರ ನೌಕರರ ಜೀವನದ ಗುಣಮಟ್ಟವೂ ಉತ್ತಮಗೊಳ್ಳಬೇಕು. ಅವರು ಚೆನ್ನಾಗಿದ್ದರೆ ಸಂತೋಷದಿಂದಿದ್ದರೆ ಸರ್ಕಾರದ ಕೆಲಸಗಳು ಉತ್ತಮವಾಗಿ ಆಗುತ್ತದೆ. ವ್ಯವಸ್ಥೆಯಲ್ಲಿ ವೇತನ, ಸೌಲತ್ತು, ಪಿಂಚಣಿಯನ್ನು ಕಾಲಕಾಲಕ್ಕೆ ಪರಿಷ್ಕರಣೆ ಮಾಡಬೇಕು. ಇದು ಮೊದಲಿನಿಂದಲೂ ಬಂದಿದೆ. ಒಂದು ವೇತನ ಆಯೋಗಕ್ಕೂ ಮತ್ತೊಂದು ವೇತನ ಆಯೋಗದ ನಡುವೆ 5 ವರ್ಷಗಳ ಅಂತರವಿರಬೇಕು. ಆದರೆ ಬಹಳ ಸಾರಿ ಹಾಗಾಗುವುದಿಲ್ಲ. 6-7 ವರ್ಷ ತೆಗೆದುಕೊಂಡಿರುವ ಉದಾಹರಣೆ ಇದೆ. ನಮ್ಮ ಸರ್ಕಾರ ಕೋವಿಡ್ ಹಾಗೂ ಪ್ರವಾಹದ ಹಿನ್ನೆಲೆಯಲ್ಲಿ, ತಮ್ಮ ಜೀವದ ಹಂಗನ್ನು ತೊರೆದು ಸರ್ಕಾರಕ್ಕೆ ಸಹಾಯಕವಾಗಿ ನಿಂತು ಜನರ ಸೇವೆಯನ್ನು ಅತ್ಯುತ್ತಮವಾಗಿ ಮಾಡಿದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post