ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಏಳನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ನಗರದ ಬಸವನಗುಡಿ ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಬದರಿನಾಥ್ ಅವರು ಅಂಚೆ ಚೀಟಿ ಸಂಗ್ರಹ ಮಾಡುವ ಹವ್ಯಾಸ ಇರುವ ಬೆಂಗಳೂರಿನ ನಿತಿನ್ ಅವರಿಗೆ ವಿಶಿಷ್ಟವಾಗಿ ಅಂಚೆಚೀಟಿ ಮತ್ತು ಪೋಸ್ಟ್ ಕಾರ್ಡ್ ಮೇಲೆ ಯೋಗ ಮುದ್ರಿಕೆ ಹಾಕಿರುವ ಅಂಚೆ ಪತ್ರಗಳನ್ನು ನೀಡುವುದರ ಮೂಲಕ ವಿಶ್ವ ಯೋಗ ದಿನಾಚರಣೆಗೆ ಚಾಲನೆ ನೀಡಿದರು.
ಬಸವನಗುಡಿಯಲಿನ ಅಂಚೆ ಇಲಾಖೆಯಲ್ಲಿ ಭಾರತೀಯ ಅಂಚೆ ಇಲಾಖೆ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಬಟವಾಡೆ ಆಗುವ ಎಲ್ಲಾ ಲಕೋಟೆಗಳ ಮೇಲೆ ಯೋಗ ಮುದ್ರೆಯನ್ನು (ಅಂಚೆ ಪತ್ರದ ಮೇಲೆ ವಿಶೇಷ ಚಿತ್ರದ ಮುದ್ರೆ) ಹಾಕಿ ಬಸವನಗುಡಿ ಪ್ರಧಾನ ಅಂಚೆ ಕಚೇರಿಯಲ್ಲಿ ವಿಶಿಷ್ಟವಾಗಿ ವಿಶ್ವ ಯೋಗ ದಿನಾಚರಣೆಯನ್ನು ಅತ್ಯಂತ ಸ್ಮರಣೀಯ ರೀತಿಯಲ್ಲಿ ಆಚರಿಸಲಾಯಿತು.ಸಾರ್ವಜನಿಕರು ಅಂಚೆ ಚೀಟಿಯನ್ನು ಸಂಗ್ರಹಿಸುವ ಹವ್ಯಾಸ ಇರುವ ನಾಗರೀಕರು ಇದರ ಸದುಪಯೋಗ ಪಡೆದರು.
ವಿಶೇಷ ಮುದ್ರೆ:
ವಿಶೇಷ ಸಂದರ್ಭಗಳಲ್ಲಿ ಅಂದರೆ ಅಂತಾರಾಷ್ಟ್ರೀಯ ಮಹಿಳಾ ದಿನ ರಾಷ್ಟ್ರೀಯ ಯುವ ದಿನ ಅಂತರಾಷ್ಟ್ರೀಯ ಯೋಗ ದಿನ ಈ ದಿನಗಳಲ್ಲಿ ವಿಶೇಷ ಮುದ್ರೆಗಳನ್ನು ಹಾಕಲಾಗುತ್ತದೆ.
ಭಾರತೀಯ ಅಂಚೆ ಇಲಾಖೆ ಬಗ್ಗೆ:
ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ ಮತ್ತು ಇದರ 1,55,000 ಅಂಚೆ ಕಚೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಭಾರತ ದೇಶದ ಯಾವುದೇ ಊರಿಗೆ ಹೋದರೂ ನಮಗೆ ಅಂಚೆ ಕಛೇರಿ ಕಾಣಸಿಗುತ್ತದೆ. ಇದರಿಂದಾಗಿಯೇ ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪರ್ಕವನ್ನು ಸಾಧಿಸಲು ಸಾಧ್ಯವಾಗಿದೆ
ಭಾರತೀಯ ಅಂಚೆ ಸೇವೆ ಭಾರತದ ಅವಿಭಾಜ್ಯ ಅಂಗವಾಗಿದೆ. ಗಡಿ ಕಾಯುವ ಯೋಧನ ಪತ್ರವನ್ನು ಆತನ ಕುಟುಂಬಿಕರಿಗೆ ತಂದು ತಲುಪಿಸುವುದರಿಂದ ಹಿಡಿದು, ರೈತನೊಬ್ಬ ಪಟ್ಟಣದಲ್ಲಿ ಓದುತ್ತಿರುವ ತನ್ನ ಮಗನಿಗೆ ಮನಿ ಆರ್ಡರ್ ಮಾಡುವವರೆಗೆ ಭಾರತ ಮತ್ತು ಭಾರತೀಯರನ್ನು ಒಂದುಗೂಡಿಸುವಲ್ಲಿ ಅಂಚೆ ಸೇವೆಗಳು ಮಹತ್ವದ ಪಾತ್ರವನ್ನು ನಿಭಾಯಿಸಿವೆ. ಸಂಸ್ಕೃತಿ, ಸಂಪ್ರದಾಯದ ವೈವಿಧ್ಯತೆ ಮತ್ತು ಕ್ಲಿಷ್ಟ ಭೌಗೋಳಿಕ ಭೂಪ್ರದೇಶಗಳನ್ನು ಹೊಂದಿರುವ ಭಾರತದಲ್ಲಿ ಅಂಚೆ ಸೇವೆಗಳನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ.
ಭಾರತೀಯ ಅಂಚೆ ಇಲಾಖೆ ಶ್ಲಾಘನೀಯ ಉತ್ಸಾಹ ಮತ್ತು ಪ್ರೇರಣೆಯೊಂದಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದೆ. ಇದು ನಮ್ಮನ್ನು ಬೆಸೆಯುವ ಮತ್ತು ಪರಸ್ಪರ ಹತ್ತಿರ ತರುವಲ್ಲಿನ ರಾಷ್ಟ್ರದ ವಿಭಿನ್ನ ಚಿತ್ರಣವನ್ನು ಪ್ರತಿಬಿಂಬಿಸುತ್ತದೆ.ಪ್ರತಿ ವರ್ಷ ಅಕ್ಟೋಬರ್ 10 ರಂದು ರಾಷ್ಟ್ರೀಯ ಅಂಚೆ ದಿನವನ್ನು ಆಚರಿಸಲಾಗುತ್ತದೆ.
ಭಾರತೀಯ ಅಂಚೆ ಇಲಾಖೆ 150 ವರ್ಷಗಳಿಂದ ದೇಶಕ್ಕೆ ಸೇವೆ ಸಲ್ಲಿಸುತ್ತಿದೆ ಮತ್ತು ಅದು ಕನಿಷ್ಠ ಸಾಧನೆಯೇನಲ್ಲ. ವಿಶ್ವ ಅಂಚೆ ದಿನದ ಭಾಗವಾಗಿಯೇ ಭಾರತದ ರಾಷ್ಟ್ರೀಯ ಅಂಚೆ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಯೂನಿವರ್ಸಲ್ ಪೋಸ್ಟಲ್ ಯೂನಿಯನ್ (ಯುಪಿಯು) ಅನ್ನು 1874 ರಲ್ಲಿ ಬರ್ನೆಯಲ್ಲಿ ಸ್ಥಾಪಿಸಲಾಯಿತು. ಈ ದಿನವನ್ನು ವಿಶ್ವದಾದ್ಯಂತ ದೇಶಗಳು ಆಚರಿಸುತ್ತವೆ. ಈ ದಿನ ಹೊಸ ಅಂಚೆ ಉತ್ಪನ್ನಗಳು ಮತ್ತು ಸೇವೆಗಳನ್ನು ಪರಿಚಯಿಸಲಾಗುತ್ತದೆ. ಅಂಚೆ ಕಛೇರಿಗಳು, ಮೇಲ್ ಕೇಂದ್ರಗಳು ಮತ್ತು ಅಂಚೆ ವಸ್ತು ಸಂಗ್ರಹಾಲಯಗಳು, ಸಮ್ಮೇಳನಗಳು, ಸೆಮಿನಾರ್ಗಳು ಮತ್ತು ಕಾರ್ಯಾಗಾರಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆ ಮತ್ತು ಇತರ ಮನರಂಜನಾ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಅಂಚೆ ದಿನದಂದು ಆಯೋಜಿಸಲಾಗುತ್ತು.
ಹಿಂದಿನ ಶತಮಾನಕ್ಕೆ ಹೋಲಿಸಿದರೆ ಈಗ ಭಾರತೀಯ ಅಂಚೆಯ ಸ್ವರೂಪ, ಕಾರ್ಯವಿಧಾನ ಬದಲಾಗಿದೆ. ಆದರೆ ಭಾರತವನ್ನು ಬೆಸಯುವ ಕಾರ್ಯವನ್ನು ಇಂದಿಗೂ ಅದು ಉತ್ಕೃಷ್ಟವಾದ ರೀತಿಯಲ್ಲೇ ಮಾಡುತ್ತಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬ ಭಾರತೀಯನಿಗೂ ಅಂಚೆಯೊಂದಿಗೆ ಅವಿನಾಭಾವ ಸಂಬಂಧವಿದೆ.
(ಅಂಚೆ ಇಲಾಖೆ ಬಗ್ಗೆ ವಿವಿಧ ಮೂಲಗಳಿಂದ ಮಾಹಿತಿ ಕಲೆ ಹಾಕಿ ಲೇಖನ ಬರೆಯಲಾಗಿದೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post