ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನ ಎಲ್ಲೆಡೆ ಸತತವಾಗಿ ನಡೆಯುತ್ತಿರುವ ನವರಾತ್ರಿಯ #Navarathri ಆಚರಣೆ ಕಣ್ಮನಗಳಿಗೆ ಹಬ್ಬವಾಗಿದೆ. ನವರಾತ್ರಿಯು, ಆಧ್ಯಾತ್ಮಿಕ ಬೆಳವಣೆಗೆ, ಸಾಂಸ್ಕೃತಿಕ ಐಕ್ಯತೆಯನ್ನು ಜನಮನಗಳಲ್ಲಿ ಮೂಡಿಸುವ ವಿಶೇಷ ಆಚರಣೆ. ಯಾವುದೇ ಹೊಸ ವಿದ್ಯೆಯನ್ನು ಕಲಿಯಲು ತೊಡಗುವುದಕ್ಕೆ ಈ ಒಂಬತ್ತೂ ದಿನಗಳೂ ಬಹಳ ಪ್ರಶಸ್ತ ಎಂದು ಹಿಂದಿನಿಂದಲೂ ಇರುವ ಕ್ರಮ ಹಾಗೂ ನಂಬಿಕೆ.
ನವಶಕ್ತಿಯರ ಪೂಜೆ, ಒಂಭತ್ತು ದಿನಗಳೂ ಪಟ್ಟದ ಬೊಂಬೆಗಳಾದ ರಾಜ-ರಾಣಿ ಬೊಂಬೆಗಳನ್ನು ಅಲಂಕರಿಸಿ ಇಟ್ಟು, ಹಲವು ರೀತಿಯ ಬೊಂಬೆಗಳನ್ನು ಮೆಟ್ಟಲುಗಳಲ್ಲಿ ಜೋಡಿಸುವ ಸಂಪ್ರದಾಯ, ರಾಮನು ರಾವಣನ ಮೇಲೆ ವಿಜಯ ಸಾಧಿಸಿದ ದಿನ ವಿಜಯದಶಮಿಯಂಬ ನಂಬಿಕೆ, ಹೀಗೆ ಹಲವು ವಿಶೇಷತೆಗಳನ್ನೊಳಗೊಂಡ ಈ ಉತ್ಸವದಲ್ಲಿ ನಾನಾ ರೀತಿಯಲ್ಲಿ ಜನ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಬೆಂಗಳೂರಿನ ನಟನತರಂಗಿಣಿ ಸಂಸ್ಥೆ ಅನೇಕ ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ, ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹ ನೀಡಲು ವೇದಿಕೆಯನ್ನು ಕಲ್ಪಿಸ ತೊಡಗಿದೆ. ನವರಾತ್ರಿಯ ಒಂಬತ್ತು ದಿನಗಳೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನವರಾತ್ರಿಯ ಮೊದಲ ಮೂರು ದಿನಗಳೂ ಉತ್ತಮ ಸಂಗೀತ ಪ್ರದರ್ಶನಗಳು ನಡೆದವು.

ಯಾವುದೇ ಭರತನಾಟ್ಯ ಪ್ರದರ್ಶನದ ಮೊದಲ ವಿನಿಕೆ ಪುಷ್ಪಗಳನ್ನು ಅರ್ಪಿಸಿ ವೇದಿಕೆಗೆ, ಸಭೆಗೆ ಸಲ್ಲಿಸುವ ನಮನ, ಪುಷ್ಪಾಂಜಲಿ, ಹೀಗೆ ನರ್ತನವನ್ನು ಪ್ರಾರಂಭಿಸಿದ ಶ್ರೀಲಾಸ್ಯ, ಊತ್ತುಕ್ಕಾಡು ವೆಂಕಟಸುಬ್ಬಯ್ಯ ಅವರ ಶ್ರೀವಿಘ್ನರಾಜಂ ಭಜೇ ಕೃತಿಯ ಮೂಲಕ ತಮ್ಮ ನೃತ್ತದ ಕುಶಲತೆಯನ್ನು ವ್ಯಕ್ತಪಡಿಸಿದರು.

ಐದನೆಯ ದಿನದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟವರು ಕು.ಚೈತನ್ಯ. ಒಳ್ಳೆಯ ಕಂಠಸಿರಿ. ಶ್ರೀರಾಗದ ವರ್ಣದಿಂದ ಪ್ರಾರಂಭಿಸಿ, ಅಪರೂಪದ ಛಾಯಾತರಂಗಿಣೆ, ಮುಖ್ಯ ಪ್ರಸ್ತುತಿಯಾಗಿ ಪಂತುವರಾಳಿ ಉತ್ತಮವಾಗಿ ಹಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಭಜನೆ, ನಾಮಸಂಕೀರ್ತನ, ಪ್ರಸ್ತುತಿಗಳು ಕಛೇರಿಯನ್ನು ಮೆರಗುಗೊಳಿಸಿದವು. ಡಾ.ಬಾಲಮುರಳೀಕೃಷ್ಣ ಅವರ ಕದನಕುತೂಹಲ ರಾಗದ ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















Discussion about this post