ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿಮ್ಮ ಧ್ಯೇಯೋದ್ದೇಶಗಳಿಂದ ಕೂಡಿದ ಗುರಿಯತ್ತ ತಲುಪಿ, ಯಶಸ್ಸಿನ ಮಟ್ಟಿಲುಗಳನ್ನು ಏರುತ್ತಾ ತಾವು ಕಲಿತ ಶಿಕ್ಷಣ ಸಂಸ್ಥೆಗೆ ಹಾಗೂ ಪೋಷಕರಿಗೆ ಋಣಿಯಾಗಿರಿ ಎಂದು ಜಿಲ್ಲಾ ಅಭಿವೃದ್ಧಿ ಪ್ರಾಧಿಕಾರದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಂಜುನಾಥ್ ಕರೆ ನೀಡಿದರು.
ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಇಂದು ಆಯೋಜಿಸಲಾಗಿದ್ದ ರಾಷ್ಟ್ರೀಯ ಇಂಜಿನಿಯರ‍್ಸ್ ಡೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಮ್ಮಲ್ಲಿನ ಕೂಡಿದ ಗುರಿಗಳನ್ನು ಮನಸ್ಸಿನಲ್ಲಿ ಕೇಂದ್ರೀಕರಿಸಿಕೊಂಡು ತನ್ಮೂಲಕ ಆಗುರಿಗಳನ್ನು ತಲುಪಲು ಅದ್ವಿತೀಯ ಪ್ರಯತ್ನಗಳನ್ನು ಪ್ರಖರವಾಗಿ ಮಾಡುತ್ತಾ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾ ತಾವು ಕಲಿತ ಶಿಕ್ಷಣ ಸಂಸ್ಥೆಗೆ ಹಾಗೂ ಪೋಷಕರಿಗೆ ಋಣಿಯಾಗುವಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.
ಇಂಜಿನಿಯರಿಂಗ್ ಪದವಿಯನ್ನು ಅಭ್ಯಾಸ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯು ನಮ್ಮ ಭಾರತ ದೇಶದ ಅನೂಹ್ಯ ರತ್ನಗಳಲ್ಲಿ ಒಬ್ಬರಾದ ಶ್ರೀ ಎಂ. ವಿಶ್ವೇಶ್ವರಯ್ಯನವರ ಒಟ್ಟಾರೆ ಸಾಧನೆಯ ಬಗ್ಗೆ ಹೆಮ್ಮೆಯನ್ನು ಹೊಂದಿರಬೇಕು ಎಂದು ತಿಳಿಸಿದರು.
ವಿಶ್ವೇಶ್ವರಯ್ಯನವರ ತಾಂತ್ರಿಕ ಕೌಶಲ್ಯತೆ, ಪ್ರಾಯೋಗಿಕ ಕಾರ್ಯತತ್ಪರತೆ ಹಾಗೂ ಸಮಾಜಮುಖಿ ಗುಣಗಳನ್ನು ಸರಿಯಾದ ರೀತಿಯಲ್ಲಿ ವಿಶ್ಲೇಷಿಸಿಕೊಳ್ಳಿ. ತನ್ಮೂಲಕ ತಾವು ಹುಟ್ಟಿ ಬೆಳೆದ ಸಮಾಜಕ್ಕೆ ತೃಣಮಾತ್ರದ ಕೊಡುಗೆಗಳನ್ನು ನೀಡುವಲ್ಲಿ ಶ್ರಮಿಸಬೇಕೆಂದು ತಮ್ಮ ಹಾಗೂ ವಿಶ್ವೇಶ್ವರಯ್ಯನವರ ಕಾಲಘಟ್ಟದ ಹಲವಾರು ಉದಾಹರಣೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಮನಮುಟ್ಟುವಂತೆ ಸೂಚ್ಯವಾಗಿ ವಿವರಿಸಿದರು.
ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುವಂತೆ ತಾವು ಕಲಿತ ತಾಂತ್ರಿಕ ವಿಷಯದಲ್ಲಿನ ಹಲವಾರು ಪ್ರಯೋಗಗಳ ಫಲಿತಾಂಶಗಳನ್ನು ಮಾರ್ಮಿಕವಾಗಿ ಅಳವಡಿಸಿಕೊಂಡು ಜೀವನ ಶೈಲಿಯು ಉತ್ತುಂಗದೆಡೆಗೆ ಒಯ್ಯುವಲ್ಲಿ ಪ್ರಯತ್ನಿಸಬೇಕೆಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ರೂಪಿಸುವ ಗುರಿಗಳು, ಅವುಗಳನ್ನು ತಲುಪಲು ಬೇಕಾದ ಪ್ರಾಯೋಗಿಕ ಚಾಕಚಕ್ಯತೆಗಳು, ತಮ್ಮ ಸುತ್ತಮುತ್ತಲಿನ ಪ್ರಕೃತಿಯ ಜೊತೆಗೆ ಅಪರಿಮಿತ ಒಡನಾಟ ಮತ್ತು ಉತ್ತಮ ಗುಣಮಟ್ಟವುಳ್ಳ ಬೌದ್ಧಿಕ ಮನೋಸ್ಥಿತಿಯನ್ನು ವೃದ್ಧಿಸಿಕೊಳ್ಳುವಂತೆ ಪ್ರೇರೇಪಿಸಿದರು.
ಪಿಇಎಸ್ ಟ್ರಸ್ಟ್ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಡಾ. ನಾಗರಾಜ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಸಾಧಿಸಬೇಕಾದ ಗುರಿಗಳು, ಆ ಗುರಿಗಳನ್ನು ತಲುಪಲು ಬೇಕಾದ ಪ್ರಾಯೋಗಿಕ ಕಾರ್ಯಕ್ಷಮತೆ, ಕಲಾಕೌಶಲ್ಯಗಳು, ತಮ್ಮ ಗುಣಮಟ್ಟವುಳ್ಳ ಪದಾರ್ಥಗಳ ಸೇವನೆ ಮತ್ತು ತನ್ಮೂಲಕ ಆರೋಗ್ಯಭರಿತ ಸಮಾಜ ನಿರ್ಮಾಣ ಮಾಡುವಲ್ಲಿ ಕಾರ್ಯಯೋನ್ಮುಖರಾಗಬೇಕೆಂದು ಸೂಚಿಸಿದರು.
ತಮ್ಮ ಸುತ್ತಮುತ್ತಲಿನ ಸಮಾಜದ ಹಾಗೂ ಪರಿಸರದ ಜೊತೆಗೆ ತಾರ್ಕಿಕ ನಂಟನ್ನು ಬೆಸೆದು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಲ್ಲಿ ಶ್ರಮಿಸಬೇಕೆಂದು ವಿದ್ಯಾರ್ಥಿಗಳ ಮನಮುಟ್ಟುವಂತೆ ಹಲವು ಪ್ರಾಯೋಗಿಕ ಉದಾಹರಣೆಗಳನ್ನು ನೀಡುವ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಆಡಳಿತ ಸಂಯೋಜನಾಧಿಕಾರಿ, ಪ್ರಾಂಶುಪಾಲರು ಹಾಗೂ ಉಪಪ್ರಾಂಶುಪಾಲರ ಜೊತೆಜೊತೆಗೆ ಎಲ್ಲಾ ವಿಭಾಗಗಳ ಮುಖ್ಯಸ್ಥರು ವಿಶ್ವೇಶ್ವರಯ್ಯನವರ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವನ ಮನವನ್ನು ಸಲ್ಲಿಸಲಾಯಿತು.
ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ.ಆರ್. ಸ್ವಾಮಿ, ಉಪಪ್ರಾಂಶುಪಾಲರಾದ ಡಾ. ಆರ್. ಶೇಖರ್ ಉಪಸ್ಥಿತರಿದ್ದರು.
ಪಿಇಎಸ್ ಸಮೂಹ ಸಂಸ್ಥೆಯ ಪ್ರಾಂಶುಪಾಲರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















