ಹಾಸನ: ಜಿಲ್ಲೆ ಎಸ್’ಎಸ್’ಎಲ್’ಸಿ ಪರೀಕ್ಷೆಯಲ್ಲಿ ನಂ.1 ಆಗಲು ಭವಾನಿ ರೇವಣ್ಣ ಕಾರಣರೇ ಹೊರತು, ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಲ್ಲ ಎಂದು ಸಚಿವ ಎಚ್.ಡಿ. ರೇವಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಿಲ್ಲೆ ಉತ್ತಮ ಫಲಿತಾಂಶ ಪಡೆಯಲು ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕೊಡುಗೆ ಹೆಚ್ಚಾಗಿದೆ ಎಂದು ನಿನ್ನೆ ಮಾಧ್ಯಮಗಳು ವರದಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.
ಫಲಿತಾಂಶ ಹೆಚ್ಚಳವಾಗಲು ಆ ವಮ್ಮ ಎಷ್ಟು ಮೀಟಿಂಗ್ ಮಾಡಿದೆ? ಏನ್ ಕಡಿದು ಕಟ್ಟೆ ಹಾಕಿದೆ. ಏನೂ ಕೊಡುಗೆ ಇಲ್ಲ ಎಂದು ಕಿಡಿ ಕಾರಿರುವ ಅವರು, ರೋಹಿಣಿ ಏನು ಎಲ್ಲಾದರೂ ಹೋಗಿ ಪಾಠ ಮಾಡಿದ್ದಾರೆಯೇ? ಒಂದು ಮಗುವಿಗಾದರೂ ಬೋಧನೆ ಮಾಡಿದ್ದಾರೆಯೇ ಎಂದು ಕಿಡಿ ಕಾರಿದರು.
ಇನ್ನು, ಫಲಿತಾಂಶ ಹೆಚ್ಚಳಕ್ಕೆ ತಮ್ಮ ಪತ್ನಿ ಕಾರಣ ಎಂದಿರುವ ರೇವಣ್ಣ, ನನ್ನ ಪತ್ನಿ ಭವಾನಿ ಜಿಲ್ಲಾ ಪಂಚಾಯ್ತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದು ಹಾಸನ ಪ್ರಥಮ ಸ್ಥಾನಕ್ಕೇರಲು 3-4 ಬಾರಿ ಸಭೆ ನಡೆಸಲಾಗಿತ್ತು. ಅಲ್ಲದೆ ವಿಶೇಷ ತರಗತಿ ನಡೆಸಲು ಸೂಚಿಸಿದ್ದರು. ಇದೇ ಮುಖ್ಯ ಕಾರಣ ಎಂದಿದ್ದಾರೆ.
ನಾನು ಸಚಿವನಾದ ಬಳಿಕ ವಿಶೇಷ ತರಬೇತಿ ನಡೆಸಲು ಸೂಚಿಸಿದ್ದೆ. ಅದರೆ ಕೆಲವು ಶಾಲೆಗಳಲ್ಲಿ ಭಾನುವಾರವೂ ಶಿಕ್ಷಕರು ತರಗತಿ ಮಾಡಿದ್ದಾರೆ. ಹಾಸನಕ್ಕೆ ಉತ್ತಮ ಫಲಿತಾಂಶ ಬಂದ ಶಾಲೆಗೆ ಶಿಕ್ಷಕರಿಗೆ ಮುಖ್ಯಮಂತ್ರಿಗಳನ್ನು ಕರೆಸಿ ಸನ್ಮಾನ ಮಾಡುವುದಾಗಿ ಹೇಳಿದ್ದೆ ಎಂದರು.
ಇನ್ನು, ಬಿಜೆಪಿಗೆ ಮತ ಹಾಕದೆ ಜಾತ್ಯಾತೀತ ಪಕ್ಷಕ್ಕೆ ಮತ ಹಾಕಿದ್ದರೆ ದಕ್ಷಿಣ ಕನ್ನಡ ಎಸ್’ಎಸ್’ಎಲ್’ಸಿ ಫಲಿತಾಂಶದಲ್ಲಿ ಪ್ರಥಮ ಬರುತ್ತಿತ್ತು ಎಂದು ವಿವಾದಾತ್ಮಕ ಹೇಳಿಕೆಯನ್ನೂ ಸಹ ಅವರು ನೀಡಿದ್ದಾರೆ.
Discussion about this post