ಕಲ್ಪ ಮೀಡಿಯಾ ಹೌಸ್ | ಬೆಂಗಳೂರು ನಗರ |
ಗುರು ಹಿರಿಯರಿಗೆ ಗೌರವ ನೀಡುವ ವ್ಯಕ್ತಿ ಎಂದಿಗೂ ಎತ್ತರಕ್ಕೆ ಬೆಳೆಯುತ್ತಾನೆ ಎಂದು ಹಿರಿಯ ಸಂಗೀತ ವಿದುಷಿ ಡಾ. ಟಿ.ಎಸ್. ಸತ್ಯವತಿ ಹೇಳಿದರು.
ಮಹಾನಗರದ ವಾಡಿಯಾ ರಸ್ತೆಯಲ್ಲಿರುವ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ #InstituteofWorldCulture ಸಭಾಂಗಣದಲ್ಲಿ ಭಾನುವಾರ ಬೆಳಗ್ಗೆ ನಾದವೈಭವ ಸಂಗೀತ ವಿದ್ಯಾಲಯ ಹಮ್ಮಿಕೊಂಡಿದ್ದ ಶ್ರೀ ಪುರಂದರದಾಸರ ಹಾಗೂ ತ್ಯಾಗರಾಜ ಸ್ವಾಮಿಗಳ #SriTyagarajaru ಆರಾಧನೆ ಸಂದರ್ಭ ಸ್ಮೃತಿ ಚಂದ್ರಿಕಾ ಫೌಂಡೇಷನ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜೀವನದಲ್ಲಿ 3 ವಿಷಯಗಳು ನಮಗೆ ಪ್ರಾಪ್ತವಾಗುವುದು ಬಹಳ ಕಷ್ಟ. ಅವುಗಳೆಂದರೆ ಮನುಷ್ಯತ್ವ, ಹಿರಿಯರೊಂದಿಗೆ ಸತ್ಸಂತ ಮತ್ತು ಮೋಕ್ಷ. ವಿವಿಧ ಕಲೆಗಳಲ್ಲಿ ಸಂಗೀತವು ಮೋಕ್ಷ ಸಾಧನೆಗೆ ಪೂರಕ ಎನ್ನುತ್ತಾರೆ. ಆದರೆ ಸತ್ಸಂಗ ಇದ್ದರೆ ಮಾತ್ರ ಅದು ಸುಲಭವಾಗುತ್ತದೆ. ಇವೆಲ್ಲವನ್ನೂ ಕಲಾವಿದರಿಗೆ ದೊರಕಿಸಿಕೊಡುತ್ತಿದ್ದ ಹಿರಿಯ ವಿದುಷಿ ಚಂದ್ರಿಕಾ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ನೆನಪು ಸದಾ ಹಸಿರಾಗಿದೆ ಎಂದರು.
ಚಂದ್ರಿಕಾ ಅವರಲ್ಲಿ ವಿದ್ವತ್ತು ಇದ್ದರೂ ವಿನಯವಿತ್ತು. ಹಿರಿಯರ ಬಗ್ಗೆ ಭಕ್ತಿ ಮತ್ತು ಗೌರವ ನೆಲೆಸಿತ್ತು. ವ್ಯಕ್ತಿ ಅಳಿಯಬಹುದು. ಆದರೆ ಅವರಲ್ಲಿರುವ ಗುಣ ಸಂಪತ್ತಿಗೆ ಎಂದಿಗೂ ಸಾವಿಲ್ಲ ಎಂದು ಸತ್ಯವತಿ ಹೇಳಿದರು.
ಹಿರಿಯ ವಿದುಷಿ ಡಾ. ಮೈಸೂರು ನಾಗಮಣಿ ಶ್ರೀನಾಥ್ ಮಾತನಾಡಿ, ನಾನು ಅನೇಕ ಶಿಷ್ಯರಿಗೆ ಪಾಠ ಮಾಡುವ ಮೂಲಕ ಅನೇಕ ಗುಣಗಳನ್ನು, ಹೊಸತನವನ್ನು ಕಲಿತಿದ್ದೇನೆ. ಈ ನಿಟ್ಟಿನಲ್ಲಿ ಚಂದ್ರಿಕಾ ನನ್ನ ಪ್ರಿಯ ಶಿಷ್ಯೆಯಾಗಿ ಸದ್ಗುಣಗಳ ಗಣಿಯಾಗಿದ್ದರು ಎಂದು ಸ್ಮರಿಸಿದರು. ಅವರ ಹೆಸರಿನಲ್ಲಿ ಇಂದು ಕುಟುಂಬದವರು ಒಂದು ಫೌಂಡೇಷನ್, ಯೂ ಟ್ಯೂಬ್ ಚಾನೆಲ್ ಆರಂಭಮಾಡಿರುವುದು ಮಾದರಿ ಕಾರ್ಯ. ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಇವೆಲ್ಲವೂ ಉತ್ತಮ ಕೊಡುಗೆ ಎಂದರು.
Also Read>> ಶಿಕಾರಿಪುರ | ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಖಾಸಗಿ ಬಸ್ | ಹೇಗಾಯ್ತು ಘಟನೆ?
ಸಾಧಕರಿಗೆ ಸ್ಮೃತಿ ಚಂದ್ರಿಕಾ ಪುರಸ್ಕಾರ ಪ್ರದಾನ
ಇದೇ ಸಂದರ್ಭ ಹಿರಿಯ ವಿದ್ವಾಂಸರಾದ ಪ್ರೊ.ಡಾ.ಜಿ.ಎನ್.ನಾಗಮಣಿ ಶ್ರೀನಾಥ್, ವಿದುಷಿ ಲಾಲ್ಗುಡಿ ರಾಜಲಕ್ಷ್ಮೀ, ವಿದ್ವಾನ್ ಟಿ.ಟಿ. ಶ್ರೀನಿವಾಸನ್, ವಿದುಷಿ ಗೀತಾ ರಮಾನಂದ್, ವಿದುಷಿ ವಸಂತಮಾಧವಿ, ವಿದುಷಿ ಪುಸ್ತಕಂ ರಮಾ, ವಿದ್ವಾನ್ ಬಿ.ಕೆ. ಅನಂತರಾಮ್, ವಿದ್ವಾನ್ ರವಿಶಂಕರ್ ಶರ್ಮ ಅವರಿಗೆ ಸ್ಮೃತಿ ಚಂದ್ರಿಕಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಸಂಗೀತ ವಿದ್ವಾಂಸರಾದ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಅವರು ಮಾತನಾಡಿ, ಚಂದ್ರಿಕಾ ಅವರು ತಂಬೂರಿ ಶೃತಿ ಮಾಡುವುದರಲ್ಲಿ ಅತೀ ನಿಪುಣತೆ, ಸಂಗೀತ ಕೃತಿಗಳ ಬರವಣಿಗೆಯಲ್ಲಿ ಅಚ್ಚುಕಟ್ಟುತನ, ಸುಂದರವಾದ ಬರವಣಿಗೆ, ನಿತ್ಯ ಜೀವನದಲ್ಲಿ ಸದಾ ಹಸನ್ಮುಖಿ ಮತ್ತು ಹಾಸ್ಯ ಪ್ರವೃತ್ತಿಯನ್ನು ಹೊಂದಿದ್ದು, ಕಲಾವಿದರಿಗೆ ಮಾದರಿಯಾಗಿದ್ದರು ಎಂದರು.
ಸಂಸ್ಥೆಯ ಸಂಚಾಲಕರಾದ ಉಮೇಶ್ ಡಿ.ಎಸ್. ಮತ್ತು ಸಿ.ಆರ್. ರವಿಶಂಕರ್ ಹಾಜರಿದ್ದರು. ನಾಡಿನ ಹಿರಿಯ ವಿದ್ವಾಂಸರಿಂದ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ, ಆಹ್ವಾನಿತ ಕಲಾವಿದರಿಂದ ಸಂಗೀತ ಸೇವೆ ನೆರವೇರಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















