ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವೈಚಾರಿಕ ದೀವಿಗೆಯನ್ನು ಜನ ಸಾಮಾನ್ಯರ ಮನದಲ್ಲಿ ಬೆಳಗಲು ಕುವೆಂಪು ಅವರ ಸಾಹಿತ್ಯದ ಕೊಡುಗೆ ಅಪಾರ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಸಹಯೋಗದಲ್ಲಿ ಸೋಮವಾರ ದೇವಂಗಿ ಆರ್. ರತ್ನಾಕರ್ ಅವರ ಸ್ಮಾರಕ ದತ್ತಿ ಅಂಗವಾಗಿ, ದತ್ತಿ ದಾನಿಗಳಾದ ಅಮರೇಂದ್ರ ಕಿರೀಟಿ ಅವರ ಆಶಯದಂತೆ ರಾಷ್ಟ್ರಕವಿ ಕುವೆಂಪು ಅವರ ವಿಚಾರ ಕ್ರಾಂತಿಗೆ ಆಹ್ವಾನ ವಿಶೇಷ ಉಪನ್ಯಾಸ ಹಾಗೂ ಆಯೇಶಭಿಯಾನೆ ಖಾಸಿಂಬಿ ಕೋಂ ಸಯದ್ ರಸೂಲ್ ಸಾಬ್ ಅಬ್ಬಲಗೆರೆ ಸ್ಮಾರಕ ದತ್ತಿ ಅಂಗವಾಗಿ, ದತ್ತಿ ದಾನಿಗಳಾದ ಅಬ್ಬಾಸ್ ಅಬ್ಬಲಗೆರೆ ಅವರ ಆಶಯದಂತೆ ಶಿಶುನಾಳ ಶರೀಫರ ಗೀತೆಗಳ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಮಾತನಾಡಿ, ಕನ್ನಡ ಭಾಷೆಯ ಜನರನ್ನು ಒಟ್ಟುಗೂಡಿಸುವ ಹಂಬಲವನ್ನು ಸಾರ್ಥಕಗೊಳಿಸುವ ಉದ್ದೇಶದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಸಾಪವನ್ನು ಸ್ಥಾಪಿಸಿದರು. ಹೊಸತಲೆಮಾರಿಗೆ ಸಾಹಿತ್ಯದ ಚಿಂತನೆಗಳ ಮೂಲಕ ಕ್ರೀಯಾಶೀಲತೆಯ ಬಿತ್ತುವ ಕಾರ್ಯವನ್ನು ದತ್ತಿಯ ಮೂಲಕ ಮಾಡುತ್ತಿದ್ದೇವೆ. ಭಾಷೆಯ ಬಗ್ಗೆ ಉದಾಸೀನ ಬೇಡ ಎಂದು ಹೇಳಿದರು.
ಪರಕೀಯರಿಂದ ಮುಕ್ತಿ ಪಡೆಯುವುದು ಒಂದೇ ಭಾರತದ ಸ್ವಾತಂತ್ರ್ಯ ಚಳುವಳಿಯ ಆಶಯವಾಗಿರಲಿಲ್ಲ. ಬದಲಿಗೆ ಅತ್ಯುತ್ತಮ ಸಧೃಡ ಸಮಾಜ ನಿರ್ಮಾಣ ಮಾಡುವ ಕನಸು ಹೋರಾಟಗಾರರದಾಗಿತ್ತು. ಹಣ ಎಂದಿಗೂ ರಾಜಕೀಯ ವ್ಯವಸ್ಥೆಯನ್ನು ಆಳಬಾರದು ಎಂದು ಹೇಳುತ್ತಾ, ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದು ಯುವ ಸಮೂಹಕ್ಕೆ ಕರೆ ನೀಡಿದವರು ಕುವೆಂಪು ಎಂದು ಹೇಳಿದರು.
ಸಂತ ಶಿಶುನಾಳ ಶರೀಫರ ಗೀತೆಗಳನ್ನು ಗಾಯಕಿ ನಳಿನಾಕ್ಷಿ ಹಾಡಿದರು. ಉಪನ್ಯಾಸಕರಾದ ಪ್ರವೀಣ್ ಬಿ.ಎನ್., ಗಾಯತ್ರಿ ಟಿ., ಚೈತ್ರಾ ಕೆ, ಕಸಾಪ ಪದಾಧಿಕಾರಿಗಳಾದ ಡಿ.ಗಣೇಶ್, ಅನುರಾಧ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅನನ್ಯ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
