ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಬೆಂಗಳೂರು ನಗರದ ಚಾಮರಾಜಪೇಟೆಯ ಆಲೂರು ವೆಂಕಟರಾವ್ ರಸ್ತೆಯಲ್ಲಿರುವ ಮಿಂಟೋ ಕಣ್ಣಿನ ಆಸ್ಪತ್ರೆ ಎದುರಿಗೆ ಇರುವ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಹನುಮನ ಜಯಂತಿ ಆಚರಿಸಲಾಯಿತು.
ಕೋವಿಡ್19 ನಿಯಾಮಾನುಸಾರ ದೇವಾಲಯಕ್ಕೆ ಹನುಮನ ದರ್ಶನಕ್ಕೆ ಬರುತ್ತಿದ್ದ ಭಕ್ತರು ಮಾಸ್ಕ್ ಧರಿಸಿ ಹನುಮ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದು ಮುಜರಾಯಿ ಇಲಾಖೆಗೆ ಸೇರಿದ ದೇವಾಲಯವಾಗಿದ್ದು ಇಲಾಖೆಯ ಆದೇಶದಂತೆ ಈ ಬಾರಿ ಸರಳವಾಗಿ ಆಚರಣೆ ಮಾಡಲಾಗಿದೆ ಎಂದು ದೇವಾಲಯದ ಅರ್ಚಕರಾದ ಹರಿದಾಸ ಉಪಾಧ್ಯ ಹೇಳಿದರು.
ಉತ್ಸವ ಮೂರ್ತಿಗೆ ವಿಶೇಷ ಪೂಜೆ
ಶ್ರೀರಾಮ-ಸೀತಾ-ಲಕ್ಷ್ಮಣ ಸಹಿತ ಇರುವ ಶ್ರೀಮುಖ್ಯಪ್ರಾಣ ದೇವರಿಗೆ ಹಾಗೂ ಮೂಲ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ದೇವಾಲಯದ ಇತಿಹಾಸ
ಚಾಮರಾಜಪೇಟೆಯ ಆಲೂರು ವೆಂಕಟರಾವ್ ರಸ್ತೆಯಲ್ಲಿರುವ ಈ ದೇವಾಲಯಕ್ಕೆ ಸುಮಾರು 400 ವರ್ಷಗಳಷ್ಟು ಇತಿಹಾಸವಿದೆ. ಸನ್ಯಾಸಿಯಾಗಿದ್ದುಕೊಂಡು ವಿಜಯನಗರ ಸಾಮ್ರಾಜ್ಯವನ್ನೂ ಆಳಿದ ಯತಿ ಶ್ರೀ ವ್ಯಾಸರಾಜರು ಲೋಕ ಕಲ್ಯಾಣಾರ್ಥ ಭಾರತದಾದ್ಯಂತ 734 ಸ್ಥಳಗಳಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪಿಸಿದ್ದರು.
ಮಿಂಟೋ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ವಿಗ್ರಹದ ಬಗ್ಗೆ
ಬಲ ಹಸ್ತ ಅಭಯ, ಎಡ ಹಸ್ತದಲ್ಲಿ ಗಧೆ, ಬಾಲದಲ್ಲಿ ಗಂಟೆ, ಹೃದಯ ಬಾಹುಗಳಲ್ಲಿ ದ್ವಾದಶ ನಾಮ ಮತ್ತು ಮುದ್ರೆ ಈ ಸ್ವಾಮಿಯ ವಿಶೇಷವಾಗಿದೆ ಎನ್ನುತ್ತಾರೆ ಮಿಂಟೋ ಶ್ರೀಆಂಜನೇಯ ಸ್ವಾಮಿ ದೇವಳದ ಪ್ರಧಾನ ಅರ್ಚಕರಾದ ನಾರಾಯಣಮೂರ್ತಿ.
ಶ್ರೀ ಮುಖ್ಯಪ್ರಾಣ ದೇವರಿಗೆ-ಶತಮಾನೋತ್ಸವದ ಸಂಭ್ರಮ
ಮಿಂಟೋ ಆಂಜನೇಯ 1922ರಿಂದ ಪೂಜೆ ಮಾಡಿಸಿಕೊಳ್ಳುತ್ತಿದ್ದು, ಇನ್ನು ಎರಡು ವರ್ಷದಲ್ಲಿ ಆಂಜನೇಯನಿಗೆ ಶತಮಾನೋತ್ಸವದ ಸಂಭ್ರಮ!
ಮಿಂಟೋ ಕಣ್ಣಿನ ಆಸ್ಪತ್ರೆ ಎದುರಿಗೆ ಇರುವುದರಿಂದ ದೇವಾಲಯ ಈ ಹೆಸರು ಬಂದಿದೆ. ಬೆಂಗಳೂರು ನಗರದಲ್ಲಿ-ಪಂಚಮುಖಿ, ವೀರಪ್ರತಾಪ, ರಾಮಭಕ್ತ ಇತ್ಯಾದಿ ವಿಶೇಷಣದೊಂದಿಗಿನ ಹನುಮ ದೇವಾಲಯ ಹಲವೆಡೆ ಇದೆ. ಆದರೆ ಆಂಗ್ಲ ಹೆಸರಿನ ವಿಶೇಷಣ ಇರುವುದು ಮಿಂಟೋ ಶ್ರೀಪ್ರಸನ್ನಾಂಜನೇಯ ಸ್ವಾಮಿಗೆ ಮಾತ್ರ.

ವಿಕ್ಟೋರಿಯಾ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ನಿರ್ಮಾಣಗಾರ ಸೋಮಪ್ಪ ಎಂಬುವರಿಗೆ ಮಣ್ಣಿನಡಿ ಆಂಜನೇಯ ಸ್ವಾಮಿಯ ವಿಗ್ರಹ ದೊರೆತಿತ್ತು. ಅದನ್ನು ಮಿಂಟೋ ಆಸ್ಪತ್ರೆ ಎದುರು ಚಿಕ್ಕ ಗುಡಿ ನಿರ್ಮಿಸಿ ಪ್ರತಿಷ್ಠಾಪಿಸಿದ್ದರು. ಆದರೆ ಅದರ ನಿರ್ವಹಣೆ ಇಲ್ಲದೆ ದೇವಾಲಯ ಶಿಥಿಲಗೊಂಡಿತ್ತು.
ಸ್ವಪ್ನದಲ್ಲಿ ಬಂದ ಗುರುರಾಯರು
ಮಂತ್ರಾಲಯದಲ್ಲಿ ಸೇವೆ ಮಾಡುತ್ತಿದ್ದ ಉಡುಪಿ ವಿಠಲದಾಸಾಚಾರ್ಯರಿಗೆ ಗುರುರಾಯರು ಕನಸಿನಲ್ಲಿ ಬಂದು ಕೋಟೆ ಸಮೀಪ ಮಣ್ಣಿನಲ್ಲಿ ದೊರೆತ ಹನುಮನಿಗೆ ಪೂಜೆ ಸಲ್ಲಿಸು ಎಂದು ಸೂಚಿಸಿದರಂತೆ. ಅದರಂತೆ ನಗರಕ್ಕೆ ಆಗಮಿಸಿದ ಅವರು, 1922ರಿಂದ ಆಂಜನೇಯ ಸೇವೆಯಲ್ಲಿ ನಿರತರಾದರು ಎಂಬ ಐತಿಹ್ಯವಿದೆ, ಅವರ ವಂಶದ 3ನೆಯ ತಲೆಮಾರಿನ ನಾರಾಯಣಮೂರ್ತಿ ಈಗ ದೇಗುಲದ ಪ್ರಧಾನ ಅರ್ಚಕರಾಗಿದ್ದಾರೆ.
ಜೀರ್ಣೋದ್ಧಾರ-ಇತಿಹಾಸ
ಶಿಥಿಲಾವಸ್ಥೆಯಲ್ಲಿದ್ದ ಮಿಂಟೋ ಶ್ರೀಆಂಜನೇಯ ಸ್ವಾಮಿ ದೇವಾಲಯವನ್ನು ದಿವಾನ್ ಮಿರ್ಜಾ ಇಸ್ಮಾಯಿಲ್ ಅವರು ಜೀರ್ಣೋದ್ಧಾರಗೊಳಿಸಿ ಸುಂದರ ಆಲಯ ನಿರ್ಮಿಸಿದರು. ನಂತರ ತರಗುಪೇಟೆ ವರ್ತಕರು ಗೋಪುರ ಕಟ್ಟಿಸಿದರು. ದಿವಾನ್ ಮಾಧವರಾಯರು ದೇವಾಲಯದ ಅಭಿವೃದ್ಧಿಗೆ ಮುಂದಾದರು ಎಂದು ಇತಿಹಾಸ ಹೇಳುತ್ತಿದೆ.
ಗಣ್ಯರ ಭೇಟಿ
ರಾಷ್ಟ್ರಪತಿ ಮಹಾತ್ಮಾ ಗಾಂಧೀಜಿ ಸೇರಿ ಹಲವು ಗಣ್ಯರು ದೇವಾಲಯಕ್ಕೆ ಭೇಟಿ ಕೊಟ್ಟಿದ್ದರು. ಪಂಡಿತ್ ಜವಹರಲಾಲ್ನೆಹರು, ಡಾ. ಬಾಬು ರಾಜೇಂದ್ರ ಪ್ರಸಾದ್, ಬ್ರಿಟಿಷ್ ವೈಸ್ರಾಯ್ ಲಾರ್ಡ್ ವೆಲ್ಲಿಂಗ್ಟನ್, ಲಾರ್ಡ್ ಮೌಂಟ್ ಬ್ಯಾಟನ್ ಸೇರಿದಂತೆ ಹಲವು ಗಣ್ಯರು ಈ ಗುಡಿಗೆ ಭೇಟಿ ನೀಡಿದ್ದಾರೆ ಎಂಬುದು ಮತ್ತೊಂದು ವಿಶೇಷ.
ಉತ್ಸವಗಳು
ಹನುಮ ಜಯಂತಿ, ರಾಮ ನವಮಿ ಉತ್ಸವ, ಕಾರ್ತಿಕ ಮಾಸದಲ್ಲಿ ಪೂರ್ಣ ದೀಪೋತ್ಸವ, ಚಿತ್ತ ಪೂರ್ಣಿಮಾ ಪೂಜೆ ಮತ್ತು ಧನುರ್ಮಾಸ ಪೂಜೆ ಇಲ್ಲಿ ವಿಶೇಷವಾಗಿ ನಡೆಯುತ್ತದೆ.
ಮಾಧ್ವ ಸಂಪ್ರದಾಯದ ಪೂಜೆ
ದೇವಾಲಯಲ್ಲಿ ಇಂದಿಗೂ ಮಾಧ್ವ ಸಂಪ್ರದಾಯದ ಪ್ರಕಾರ ಪೂಜೆ ಮಾಡಲಾಗುತ್ತದೆ. ಪ್ರಾಣದೇವರಿಗೆ ಹರಿವಾಯುಸ್ತುತಿ ಪಾರಾಯಣ ಹಾಗೂ ಜೇನುತುಪ್ಪದ ಅಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಅನ್ನ ನೈವೇದ್ಯ ಸೇವೆ ಮೂಲಕ ಪೂಜೆ ಸಲ್ಲಿಸಲಾಗುತ್ತದೆ.
ಇನ್ನು, 98 ವರ್ಷಗಳಿಂದ ನಮ್ಮ ವಂಶಸ್ಥರೇ ಪ್ರಸನ್ನಾಂಜನೇಯನಿಗೆ ಪೂಜೆ ಮಾಡುತ್ತಿದ್ದಾರೆ. ಬೇಡಿದ್ದನ್ನು ನೀಡುವ ದೇವರು ಎಂದು ಈ ಸ್ವಾಮಿ ಹೆಸರಾಗಿದ್ದಾರೆ ಎನ್ನುತ್ತಾರೆ ಮಿಂಟೋ ಶ್ರೀ ಆಂಜನೇಯ ಸ್ವಾಮಿ ದೇವಳದ ಪ್ರಧಾನ ಅರ್ಚಕ ನಾರಾಯಣಮೂರ್ತಿ ದೇವಾಲಯದ ಸಮೀಪದಲ್ಲಿರುವ ಮಿಂಟೋ ಆಸ್ಪತ್ರೆಗೆ ಆಗಮಿಸುವ ರೋಗಿಗಳು, ಅವರ ಕುಟುಂಬಸ್ಥರು, ಕಾಲೇಜು ವಿದ್ಯಾರ್ಥಿಗಳು ಹಾಗೂ ನಗರದ ಅನೇಕ ಭಾಗಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ.
ನಾಲ್ಕನೆಯ ತಲೆಮಾರು ಪ್ರವೇಶ
ಮೂರು ತಲೆಮಾರುಗಳಿಂದ ಪೂಜೆ ಸಲಿಸುತ್ತಿದ್ದು ನಾಲ್ಕನೆಯ ತಲೆಮಾರಿನ ಅಮೋಘ್ ಉಪಾಧ್ಯಾಯ ಶ್ರೀಸ್ವಾಮಿಗೆ ಹನುಮ ಜಯಂತಿ ಇಂದು ಸ್ವಾಮಿಗೆ ಮಂಗಳಾರತಿ ಮಾಡಿ ಶ್ರೀಸ್ವಾಮಿಯ ಸೇವೆಯಲ್ಲಿ ಇಂದಿನಿಂದ ಆರಂಭ ಮಾಡಿದ್ದಾರೆ.
ನಾರಾಯಣ ಮೂರ್ತಿ ಉಪಾಧ್ಯಾಯ ಅವರ ತಮ್ಮನಾದ ಹರಿದಾಸ ಉಪಾಧ್ಯ ಅವರ ಮೊಮ್ಮೊಗ ಎರಡನೇ ತರಗತಿಯಲ್ಲಿ ಓದುತ್ತಿರುವ ಅಮೋಘ್ ಉಪಾಧ್ಯಾಯ (ಅಮೋಘ್ ಉಪಾಧ್ಯಾಯ ಅವರಿಗೆ ವೇದಾಭ್ಯಾಸ ಮಾಡಿಸಿ ಹನುಮನ ಸೇವೆಯನ್ನು ವಂಶ ಪರಂಪರ್ಯಾವಾಗಿ ಮುಂದುವರೆಸುವ ಬಗ್ಗೆ ಪ್ರಸುತ್ತ ದೇವಾಲಯದ ಪ್ರಧಾನ ಪುರೋಹಿತರು ನಾರಾಯಣ ಮೂರ್ತಿ ಉಪಾಧ್ಯಾಯ ಹೇಳುತ್ತಾರೆ.
ಮಿಂಟೋ ಹನುಮನ ಪರಮಭಕ್ತ ಡಾ.ಕೆ.ವಿ. ರಾಮಚಂದ್ರ
ನಮ್ಮ ಕುಟುಂಬದಿಂದ ನಾಲ್ಕು ತಲೆಮಾರುಗಳಿಂದ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದು, ತಾತ ಶಾನಭೋಗ ರಾಮಚಂದ್ರಪ್ಪ, ತಂದೆ ಶಾನ ಭೋಗ ಕೆ.ಆರ್. ವೆಂಕಟೇಶ್ ಮೂರ್ತಿ ಹಾಗೂ ಡಾ.ಕೆ.ವಿ. ರಾಮಚಂದ್ರ ಮತ್ತು ಅವರ ಮಗ ಶಶಾಂಕ್ ಭಗವಂತನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸುತ್ತ ಬಂದಿದ್ದೇವೆ ಎಂದು ಇಂದು ಹನುಮ ಜಯಂತಿ ಆಚರಣೆ ಮಾಡಿ ಹನುಮನ ದರ್ಶನ ಪಡೆಯಲು ಮಿಂಟೋ ಆಂಜನೇಯ ಸ್ವಾಮಿ ದೇಗುಲಕ್ಕೆ ಬಂದಿದ್ದ ಕನ್ನಡ ತಿಂಡಿಯ ಡಾ.ಕೆ.ವಿ. ರಾಮಚಂದ್ರ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post