ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಎಲ್ಲಾ ಕಲೆಗಳಲ್ಲೂ ಎಲ್ಲರೂ ರಮಿಸುವ ಕಲೆಯೆಂದರೆ ಸಂಗೀತ. ಎಲ್ಲ ಹಾಡುಗಳ ಮೂಲ ಸಂಗೀತ. ಚರಿತ್ರೆಯನ್ನು ನೋಡಿದರೆ, ಸಂಗೀತವು ಉತ್ಪತ್ತಿಯಾದ ಬಗ್ಗೆ ಬಹಳ ಊಹೆಗಳಿವೆ. ಅದರ ಮೂಲ ತಿಳಿಯುವುದು ಅಸಾಧ್ಯ. ಮನುಷ್ಯನ ಲೆಕ್ಕದಲ್ಲಿ ಸ್ವರಗಳು ಏಳೇ ಆದರೂ ಅವುಗಳಿಂದ ಉದ್ಭವವಾಗುವ ರಾಗಗಳಿಗೆ ಲೆಕ್ಕವಿಲ್ಲ. ಸ್ವರವೆಂದರೇನು? ರಾಗವೆಂದರೇನು? ಎಂಬ ಹಲವು ಹತ್ತು ಪ್ರಶ್ನೆಗಳನ್ನು ಕೇಳುವ ಬುದ್ಧಿಯುಳ್ಳ ಮನುಷ್ಯ ಹುಟ್ಟುವ ಮೊದಲೇ ಸಂಗೀತ ಹುಟ್ಟಿ ಆಗಿತ್ತು. ಪ್ರಕೃತಿಯಲ್ಲಿ ಪ್ರತಿನಿತ್ಯ ಧ್ವನಿಸುವ, ಗಿಡ-ಮರ-ಬಳ್ಳಿಗಳಲ್ಲಿ ಸ್ಫುರಿಸುವ, ಗಾಳಿ-ಮಳೆ-ಮಿಂಚು-ಗುಡುಗುಗಳ ಪಕ್ಕವಾದ್ಯಗಳಿಂದ ವಿಜೃಂಭಿಸುವ ಪಶು-ಪಕ್ಷಿಗಳ ಸಂಗೀತ ಯಾವ ಶಾಸ್ತ್ರಕ್ಕೂ ಕಟ್ಟುಬೀಳದಿದ್ದರೂ, ಆ ದನಿಗಳಲ್ಲಿ ದುಃಖ, ಆನಂದ, ಶಾಂತ, ಭಕ್ತಿ, ಭಯ, ಉನ್ಮಾದ, ರೌದ್ರ, ಸ್ನೇಹ, ಕರುಣ ಮುಂತಾದ ರಸಗಳು, ಭಾವಗಳು ವ್ಯಕ್ತವಾಗುತ್ತವೆ ಎಂಬುದು ಅನುಭವವೇದ್ಯವಾದದ್ದು.
ಸಂಸ್ಕೃತದಲ್ಲೊಂದು ಮಾತಿದೆ ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನರಸಂ ಫಣಿಃ’’ ಅಂದ್ರೆ ಶಿಶು ಪಶು ಸೇರಿದಂತೆ ಹಾವೂ ಸಂಗೀತಕ್ಕೆ ತಲೆದೂಗುತ್ತದೆಯಂತೆ. ಸರ್ವಂ ಸಂಗೀತಮಯಂ ಅನ್ನುತ್ತಾರೆ ಸಂಗೀತ ಪ್ರೇಮಿಗಳು. ಅಂತೆಯೇ ಇಲ್ಲೊಬ್ಬ ಬಾಲೆ ತನ್ನ ಎಳೆವಯಸ್ಸಿನಿಂದಲೇ ಸಂಗೀತ ಶರಧಿಯಲಿ ಮಿಂದು, ಆ ಸಂಗೀತದ ರಸಧಾರೆಯಲ್ಲಿ ಜನಮನವನ್ನು ತೋಯಿಸುತ್ತಿದ್ದಾಳೆ. ಆಕೆ ಬೇರಾರೂ ಅಲ್ಲ ಇತ್ತೀಚೆಗಷ್ಟೇ ಸರಿಗಮಪ ಸೀಸನ್-17ರಲ್ಲಿ ತೀರ್ಪುಗಾರ ದಿಗ್ಗಜರನ್ನಷ್ಟೇ ಅಲ್ಲದೆ ಕರ್ನಾಟಕದಾದ್ಯಂತ ಹೆಸರುವಾಸಿಯಾಗಿ ತನ್ನ ಸ್ವರಮಾಧುರ್ಯದಿಂದ ಜನಮನವನ್ನು ಗೆದ್ದ ಉಡುಪಿಯ ಗಾನಕೋಗಿಲೆ ಶರಧಿ ಪಾಟೀಲ್.ಉಡುಪಿಯ ಚೇರ್ಕಾಡಿ ಮುಂಡ್ಕಿನಜಡ್ಡು ರಾಜಾರಾಮ ಪಾಟೀಲ್ ಹಾಗೂ ಲೀಲಾವತಿ ಪಾಟೀಲ್ ದಂಪತಿಗಳ ಮುದ್ದು ಕುವರಿ ಶರಧಿ ಪಾಟೀಲ್ ತನ್ನ ಪ್ರಾಥಮಿಕ ಶಿಕ್ಷಣವನ್ನು ನಾಲ್ಕನೆಯ ತರಗತಿವರೆಗೆ ಮುಂಡ್ಕಿನಜಡ್ಡು ಆರ್.ಕೆ. ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಐದರಿಂದ ಹತ್ತನೆಯ ತರಗತಿವರೆಗೆ ಬ್ರಹ್ಮಾವರದ ನಿರ್ಮಲ ಹಿರಿಯ ಪ್ರಾಥಮಿಕ ಶಾಲೆ ಹಾಗೂ ನಿರ್ಮಲ ಪ್ರೌಢಶಾಲೆಯಲ್ಲಿ ಕಲಿತು, ಬ್ರಹ್ಮಾವರದ ಎಸ್.ಎಂ.ಎಸ್ ಪದವಿಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿಯನ್ನು ಪೂರೈಸಿದರು.
ಬೆಳೆಯುವ ಸಿರಿ ಮೊಳಕೆಯಲ್ಲೆಂಬಂತೆ ಶರಧಿ ತನ್ನ ಮೂರನೇ ವಯಸ್ಸಿನಲ್ಲೇ ಸಂಗೀತದ ಒಲವು ತೋರಿ ಪೋಷಕರ ಜೊತೆ ಮನೆಯಲ್ಲೇ ತನ್ನ ತೊದಲು ಪರಿಭಾಷೆಯಲ್ಲಿ ಸಂಗೀತ ಹಾಡಲು ಆರಂಭಿಸಿ, ನಾಲ್ಕನೇ ವಯಸ್ಸಿನಿಂದ ಉಡುಪಿಯ ಪ್ರಸಿದ್ಧ ಸಂಗೀತ ಗುರುಗಳಾದ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂರವರ ಬಳಿ ’ಕರ್ನಾಟಕ ಶಾಸ್ತ್ರೀಯ ಸಂಗೀತ’ವನ್ನು ಕಲಿಯಲು ಆರಂಭಿಸಿದರು. ಗುರುಗಳ ಸಾರಥ್ಯದಲ್ಲಿ ಸಂಗೀತವನ್ನು ಚೆನ್ನಾಗಿ ಕರಗತ ಮಾಡಿಕೊಂಡ ಶರಧಿ ಸಂಗೀತ ಪರೀಕ್ಷೆಗಳಾದ ಜ್ಯೂನಿಯರ್, ಸೀನಿಯರ್ ಮತ್ತು ವಿದ್ವತ್ ಪೂರ್ವ ಹಂತಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು.ಪದವಿ ಶಿಕ್ಷಣದ ಬಳಿಕ ಒಂದು ವರ್ಷ ಕುಂದಾಪುರದ ಪ್ರಸಿದ್ಧ ವಿದ್ಯಾಸಂಸ್ಥೆಯಾದ ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ಶರಧಿ ತನ್ನ ಹೆಚ್ಚಿನ ವಿದ್ಯಾಭ್ಯಾಸದ ಕನಸಿನೊಂದಿಗೆ ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ತೆರಳಿ ಅಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕ ಪಡೆಯುವ ಮೂಲಕ ತೇರ್ಗಡೆ ಹೊಂದಿದರು.
ಬಾಲ್ಯದಲ್ಲಿಯೇ ಅನೇಕ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಶರಧಿಗೆ ನಿರಂತರವಾಗಿ ಪ್ರಥಮ ಸ್ಥಾನವೇ ಒಲಿದು ಬರುತ್ತಿದ್ದುದು ಆಕೆಯ ಗಾನ ಮಾಧುರ್ಯ ಹಾಗೂ ಸಂಗೀತ ಜ್ಞಾನಕ್ಕೆ ಹಿಡಿದ ಕೈಗನ್ನಡಿಯೇ ಸರಿ. ಎಳವೆಯಲ್ಲಿಯೇ ಭಾವಗೀತೆ, ಭಕ್ತಿಗೀತೆ, ಶಾಸ್ತ್ರೀಯ ಸಂಗೀತದಂತಹ ಕಾರ್ಯಕ್ರಮಗಳನ್ನು ನೀಡಲು ಆರಂಭಿಸಿದ್ದ ಶರಧಿಗೆ ಉಡುಪಿಯ ಎಂ.ಜಿ.ಎಂ ಕಾಲೇಜ್ ಮುದ್ದಣ ಮಂಟಪ, ಕೃಷ್ಣ ಮಠದ ರಾಜಾಂಗಣ, ದೇವಸ್ಥಾನ, ವಾದಿರಾಜ ಕನಕದಾಸ ಸಂಗೀತೋತ್ಸವ ಮೊದಲಾದ ಕಾರ್ಯಕ್ರಮಗಳು ಹೆಚ್ಚಿನ ವೇದಿಕೆಯನ್ನೊದಗಿಸಿ ಸಂಗೀತದ ಅರಳುವ ಸುಮಕೆ ನೀರೆರೆದು ಪೋಷಿಸಿದಂತಾಯಿತು ಎಂದು ಶರಧಿ ನೆನಪಿಸಿಕೊಳ್ಳುತ್ತಾರೆ.
ಶಾಲಾ ದಿನಗಳಲ್ಲಿ ಪ್ರತಿಭಾ ಕಾರಂಜಿ, ಕನ್ನಡ ಸಂಸ್ಕೃತಿ ಇಲಾಖೆ ಏರ್ಪಡಿಸಿದ ಹಲವು ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಾರಿ ರಾಜ್ಯಮಟ್ಟದಲ್ಲಿ ಪ್ರಥಮ ಪ್ರಶಸ್ತಿಗಳ ಸರದಾರಿಣಿಯಾಗಿಯೂ ಮಿಂಚಿದ್ದಾರೆ. ಜೊತೆಗೆ ದೆಹಲಿಯ ಸಿ.ಸಿ.ಆರ್.ಟಿ ವತಿಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಕೊಡಮಾಡುವ ರಾಷ್ಟ್ರೀಯ ಶಿಷ್ಯವೇತನವನ್ನೂ ಪಡೆದುಕೊಂಡ ಹೆಗ್ಗಳಿಕೆ ಶರಧಿ ಪಾಟೀಲರದು.
ಕನ್ನಡದ ಶ್ರೇಷ್ಠ ಕವಿಗಳ ಗೀತೆಗಳನ್ನು ಭಾವದುಂಬಿ ಹಾಡುವಂಥ ಸಾಮರ್ಥ್ಯವನ್ನು ಕರಗತ ಮಾಡಿಕೊಂಡ ಶರಧಿ ಮಂಗಳೂರು ಆಕಾಶವಾಣಿಯ ಬಿ ಹೈ ಗ್ರೇಡ್ ಕಲಾವಿದೆಯೂ ಹೌದು.
2008 ರ ಕಸ್ತೂರಿ ಕನ್ನಡವಾಹಿನಿಯ ’ಸಪ್ತಸ್ವರ-2’ ರಿಯಾಲಿಟಿ ಶೋನಲ್ಲಿ ಪ್ರಥಮ ಸ್ಥಾನವನ್ನು ಬಾಚಿಕೊಂಡ ಶರಧಿ ಪಾಟೀಲ್ ಕಸ್ತೂರಿ ವಾಹಿನಿಯ ’ಗಾನಕೋಗಿಲೆ’ ಪ್ರಶಸ್ತಿಗೆ ಬಾಜನರಾದರು.
2020ರ ಜನವರಿಯಿಂದ ಆರಂಭವಾದ ಜೀ ಕನ್ನಡ ವಾಹಿನಿಯ ’ಸರಿಗಮಪ ಸೀಸನ್-17’ ರಿಯಾಲಿಟಿ ಶೋದಲ್ಲಿ ಭಾಗವಹಿಸಿ ಅನೇಕ ಹಾಡುಗಳನ್ನು ಹಾಡಿ ಹಂತಹಂತವಾಗಿ ಮೇಲೇರುತ್ತಾ, ಸೆಮಿಫೈನಲ್ ತಲುಪಿ ಸೆಮಿಫೈನಲ್ನಲ್ಲಿ ’ಖರಹರ ಪ್ರಿಯ’ ರಾಗದ ’ಬಾ ಬೇಗ ಮನೋಹನ..’ ಹಾಡನ್ನು ಹಾಡಿ ಎಲ್ಲಾ ತೀರ್ಪುಗಾರರ ಮನಸೂರೆಗೊಂಡು, ಮೆಚ್ಚುಗೆ ಗಳಿಸಿ, ಫೈನಲ್ ಹಂತಕ್ಕೆ ತಲುಪಿದರು. 2020 ಡಿಸೆಂಬರ್ 20ರ ಭಾನುವಾರದಂದು ಸಂಜೆ ಬೆಂಗಳೂರಿನ ನಾಯಂಡರಹಳ್ಳಿಯ ನಂದಿಲಿಂಕ್ ಮೈದಾನದಲ್ಲಿ ನಡೆದ ಗ್ರಾಂಡ್ ಫಿನಾಲೆಯಲ್ಲಿ ಟಾಪ್-5 ಸ್ಪರ್ಧಿಗಳಲ್ಲಿ ಒಬ್ಬರಾದ ಶರಧಿ ಪಾಟೀಲ್ ’ಚಾರುಕೇಶಿ’ ರಾಗದ ’ಬೊಂಬೆಯಾಟವಯ್ಯಾ…’ ಹಾಡನ್ನು ಹಾಡಿ ತೀರ್ಪುಗಾರರಾದ ನಾದಬ್ರಹ್ಮ ಹಂಸಲೇಖ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣ ಹಾಗೂ ಅರ್ಜುನ್ ಜನ್ಯ ಸೇರಿದಂತೆ ನಾಡಿನ ಜನತೆಯ ಸಂಗೀತಪ್ರಿಯರ ಪ್ರಶಂಸೆಯ ಸುರಿಮಳೆಯಲ್ಲಿ ಪುನೀತರಾದರು.
ಸಂಗೀತವನ್ನು ಒಲಿಸಿಕೊಳ್ಳುವುದು ದೇವರನ್ನು ಒಳಿಸಿಕೊಳ್ಳುವುದಕ್ಕಿಂತಲೂ ಕಠಿಣ. ಸಂಗೀತ ಒಲಿದಮೇಲೆ ದೇವರನ್ನು ಒಲಿಸುವುದು ಸಿಪ್ಪೆ ಸುಲಿದ ಬಾಳೆ ಹಣ್ಣು ಸವಿದಷ್ಟೇ ಸರಳ ಎಂಬ ಹಿರಿಯರ ಮಾತಿದೆ. ಅಂತೆಯೇ ಚಿಕ್ಕಂದಿನಿಂದಲೇ ಹಾಡುವ ಕಲೆಯನ್ನು ಸಿದ್ಧಿಸಿಕೊಂಡು, ಏನೂ ಅರಿಯದ ವಯಸ್ಸಲ್ಲಿ ರಾಗ, ತಾಳ, ಶೃತಿಗಳಂತಹ ಸಂಗೀತ ಪ್ರಕಾರಗಳನ್ನು ತನ್ನದಾಗಿಸಿಕೊಳ್ಳಲು ಉತ್ತಮ ಗುರುಗಳ ಮಾರ್ಗದರ್ಶನ ಮುಖ್ಯ. ವಿದ್ವಾನ್ ಮಧೂರು ಪಿ ಬಾಲಸುಬ್ರಹ್ಮಣ್ಯಂರಂತಹ ಗುರುಗಳ ಶಿಷ್ಯತನ ಸಂಪಾದಿಸಿದ್ದರಿಂದಲೇ ಶರಧಿ ಈ ಮಟ್ಟಕ್ಕೆ ಏರಲು ಸಾಧ್ಯವಾಯಿತು. ಇಂತಹ ಗುರುಗಳು ಸಿಕ್ಕಿರುವುದು ಶರಧಿಯ ಪುಣ್ಯ ಎಂದು ಆಕೆಯ ಹೆತ್ತವರು ಸ್ಮರಿಸಿಕೊಳ್ಳುತ್ತಾರೆ.ಉಡುಪಿಯ ಎಂ.ಜಿ.ಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಶಾಸ್ತ್ರೀಯ ಹಾಡುಗಾರಿಕೆ, ಕನಕಗಾಯನ, ಬೇಂದ್ರೆ ಕಾವ್ಯ ಚಿಂತನ, ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಕುವೆಂಪು ಕಾವ್ಯ ಮಂಥನ, ಮೈಸೂರಿನಲ್ಲಿ ರಾಜು-ಗಾನ- ನಮನ, ಮೈಸೂರು ದಸರಾ ಪ್ರಯುಕ್ತ ಅರಮನೆ ಆವರಣದಲ್ಲಿ ಜಗನ್ಮೋಹನ ಪ್ಯಾಲೇಸ್, ಶ್ರೀರಂಗಪಟ್ಟಣ ದಸರಾ ಮಹೋತ್ಸವ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ ಅನುಭವಿ ಶರಧಿ ಪಾಟೀಲರಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ, ಗಾನ ಕೋಗಿಲೆ, ಕಿಶೋರ ಪ್ರತಿಭೆ ಸೇರಿದಂತೆ ಅನೇಕ ಪ್ರಶಸ್ತಿಗಳೂ ಮಡಿಲು ಸೇರಿವೆ.
ಎಳೆಯ ವಯಸ್ಸಲ್ಲೇ ಸಂಗೀತ ಕ್ಷೇತ್ರದಲ್ಲಿ ಅಮೋಘ ಸಾಧನೆಗೈದ ಶರಧಿ ಪಾಟೀಲ್ ಸಂಗೀತದ ಶರಧಿಯೇ ಸರಿ. ಆಕೆಯ ಗಾನಸಿರಿಗೆ ಮರುಳಾಗದವರೆ ಇಲ್ಲ. ಸರಳ ಸಜ್ಜನಿಕೆಯ ಕಲಾ ಸಾಧಕಿಯ ಸಾಧನಾ ಹಾದಿ ಸುಗಮವಾಗಿ ಇನ್ನಷ್ಟು ಮತ್ತಷ್ಟು ಎತ್ತರಕ್ಕೇರಲಿ ಎಂಬುದೇ ನಮ್ಮ ಹಾರೈಕೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post