ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಉಡುಪಿ #Udupi ಶ್ರೀ ಭಂಡಾರಕೇರಿ ಮಠ, ಲೋಕ ಸಂಸ್ಕೃತಿ ವಿದ್ಯಾ ವಿಕಾಶ ಪ್ರತಿಷ್ಠಾನವು ರಾಜಧಾನಿಯ ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ #VedavyasaJayanti ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವಕ್ಕೆ ಬುಧವಾರ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ವಿಧ್ಯುಕ್ತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು, ವ್ಯಾಸ ಮತ್ತು ದಾಸ ಸಾಹಿತ್ಯದಲ್ಲಿರುವ ವಿಶೇಷ ಜ್ಞಾನದ ಅರಿವು ಮೂಡಿದರೆ ಬದುಕು ಸಾರ್ಥಕವಾಗುತ್ತದೆ ಎಂದರು. ವ್ಯಾಸ ಸಾಹಿತ್ಯಪ್ರಖರ ಸೂರ್ಯನಂತೆ. ನಾವು ಅದರ ಪ್ರಭೆಯನ್ನು ನೇರವಾಗಿ ಪಡೆಯಲು ಅಸಾಧ್ಯ. ಆದರೆ ಅದೇ ಕಿರಣ ಚಂದ್ರಮಂಡಲದ ಮೇಲೆ ಬಿದ್ದು , (ದಾಸ ಸಾಹಿತ್ಯವಾಗಿ) ನಮಗೆ ಬಂದರೆ ಅದು ಸಂತೋಷ, ನೆಮ್ಮದಿ ಮತ್ತು ಸುಖವನ್ನು ನೀಡಬಲ್ಲದು. ಆದಕಾರಣ ಈ ಸಭಾದಲ್ಲಿ ದಾಸ ಸಾಹಿತ್ಯದ ಚಿಂತನ- ಮಂಥನಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದರು.
ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ #DasaSahityaProject ಗೌರವ ನಿರ್ದೇಶಕ ಅಪ್ಪಣ್ಣಾಚಾರ್ಯ, ಮಠದ ಹಿರಿಯ ಸ್ವಯಂಸೇವಕರಾದ ಗೋಪಾಲಕೃಷ್ಣ ಇತರರು ಇದ್ದರು. ಸಂಜೆ ವಾಲ್ಮೀಕಿ ರಾಮಾಯಣದ ವಿವಾದ- ಸಂವಾದದಲ್ಲಿ ವಿದ್ವಾಂಸರಾದ ಕೆ. ಕೃಷ್ಣರಾಜ ಭಟ್, ಮತ್ತು ಬಂಡಿ ಶ್ಯಾಮಾಚಾರ್ಯ ಭಾಗವಹಿಸಿದ್ದರು. ಮೇ 21ರವರೆಗೆ ನಿತ್ಯ ಶ್ರೀ ಮಠದಲ್ಲಿ ವೈವಿಧ್ಯಮಯ ಕಾರ್ಯಕ್ರಮ ನೆರವೇರಲಿದೆ.
Also read: ಲೋಕಸಭಾ ಚುನಾವಣೆ | ಮೋದಿ ಅವರು ಈಗಾಗಲೇ ಬಹುಮತ ಪಡೆದಿದ್ದಾರೆ | ಅಮಿತ್ ಶಾ ವಿಶ್ವಾಸ
ಮೇ 16ರ ಬೆಳಗ್ಗೆ 9ಕ್ಕೆ ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ಗೌರವ ನಿರ್ದೇಶಕ ಅಪ್ಪಣ್ಣಾಚಾರ್ಯ ಅವರು ‘ ಹರಿದಾಸ ಸಾಹಿತ್ಯದಲ್ಲಿ ಅನುಭವ ಉದ್ಗಾರಗಳ ಚಿಂತನೆ’ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಂಜೆ 5ಕ್ಕೆ ಪಂಡಿತರಾದ ತಿರುಮಲ ಕುಲಕರ್ಣಿ ಮತ್ತು ವೆಂಕಟೇಶ ಕುಲಕರ್ಣಿ ಅವರು ಮಹಾಭಾರತ- ವಾದ- ಸಂವಾದ- ನಡೆಸಿಕೊಡಲಿದ್ದಾರೆ.
17ರಂದು ಬೆಳಗ್ಗೆ 9ರಿಂದ 12 – ಸಂಜೆ 4ರಿಂದ 6ರವರೆಗೆ ವಾಕ್ಯಾರ್ಥ ಗೋಷ್ಠಿ ಸಂಪನ್ನಗೊಳ್ಳಲಿದೆ. ವಿದ್ವಾನ್ ಪಿ.ಎಸ್. ಶೇಷಗಿರಿ ಆಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ವಾಂಸರಾದ ವೀರನಾರಾಯಣ ಪಾಂಡುರಂಗಿ, ಸತ್ತಿಗೇರಿ ವಾಸುದೇವ, ಕಟ್ಟಿ ನರಸಿಂಹ ಆಚಾರ್ಯ, ಪ್ರಹ್ಲಾದಾಚಾರ್ಯ ಜೋಷಿ, ಸುಧೀಂದ್ರಾಚಾರ್ಯ, ರಂಗನಾಥ ಗಣಾಚಾರಿ, ನಾಗರಾಜಾಚಾರ್ಯ, ಗುರುರಾಜ ಕಲ್ಕೂರ, ಶ್ರೀನಿವಾಸಮೂರ್ತಿ ಮತ್ತು ಮಾತರಿಶ್ವಾಚಾರ್ಯ ಭಾಗವಹಿಸಲಿದ್ದಾರೆ. ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
18ರಂದು ವರ್ಧಂತಿ ಮಹೋತ್ಸವ:
ಮೇ 18ರಂದು ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ 70ನೇ ವರ್ಧಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 11ಕ್ಕೆ ವಿವಿಧ ಹೋಮ, ಹರಿಕಥಾಮೃತ ಸಾರ ಪಾರಾಯಣ, ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ಡಾ. ಎಚ್.ವಿ. ಸತ್ಯನಾರಾಯಣರಿಂದ ಉಪನ್ಯಾಸ( ವಾದಿರಾಜ ವಿರಚಿತ ವೈಕುಂಠ ವರ್ಣನೆ), ಸಂಜೆ ವಿವಿಧ ರಂಗದ ಗಣ್ಯರಿಗೆ ಸನ್ಮಾನವಿದೆ.
19ರಂದು ಶ್ರೀ ವಿದ್ಯಾಮಾನ್ಯರ ಪುಣ್ಯಸ್ಮರಣೆ:
ಉಡುಪಿ ಪಲಿಮಾರು- ಭಂಡಾರಕೇರಿ ಉಭಯ ಮಠದ ಪೀಠಾಧೀಶರಾಗಿದ್ದ ಶ್ರೀ ವಿದ್ಯಾಮಾನ್ಯ ತೀರ್ಥರ ಪುಣ್ಯಸ್ಮರಣೆ
ಮೇ 19ರಂದು ನೆರವೇರಲಿದೆ. ಬೆಳಗ್ಗೆ 9ಕ್ಕೆ ಶ್ರೀ ವಿದ್ಯೇಶ ವಿಠಲಾಂಕಿತ ಕೃತಿಗಳ ಚಿಂತನ- ಮಂಥನ ನಡೆಯಲಿದ್ದು, ಹಲವುವಿದ್ವಾಂಸರು ಭಾಗವಹಿಸಲಿದ್ದಾರೆ. ಸಂಜೆ 6ಕ್ಕೆ ಶ್ರೀ ವಿದ್ಯೇಶತೀರ್ಥರಿಂದ ಅನುಗ್ರಹ ಸಂದೇಶವಿದೆ.
20ರಂದು ಶೋಭಾಯಾತ್ರೆ- ಪೇಜಾವರ ಶ್ರೀ ಸಾನ್ನಿಧ್ಯ:
20ರಂದು ವೇದವ್ಯಾಸ ಜಯಂತಿ ಮತ್ತು ವಿದ್ಯಾಮಾನ್ಯರ ಮಧ್ಯಾರಾಧನೆ ನಿಮಿತ್ತ ಬೆಳಗ್ಗೆ 8ಕ್ಕೆ ಹೋಮ, 9ಕ್ಕೆ ವೇದ ಶಾಸ್ತ್ರ ವಿನೋದ, ಮಧ್ಯಾಹ್ನ 2ಕ್ಕೆ ವಸಂತ ಉತ್ಸವ, ಸಂಜೆ 5ಕ್ಕೆ ಶ್ರೀ ವಿದ್ಯಾಮಾನ್ಯರ ಭಾವಚಿತ್ರ ಶೋಭಾಯಾತ್ರೆ, ಸಂಜೆ 6ಕ್ಕೆ ಸಭಾ ಕಾರ್ಯಕ್ರಮವಿದೆ. ಪೇಜಾವರ ಶ್ರೀ ವಿಶ್ವ ಪ್ರಸನ್ನತೀರ್ಥರು ಸಾನ್ನಿಧ್ಯ ವಹಿಸಲಿದ್ದಾರೆ. ಹಿರಿಯ ವಿದ್ವಾಂಸ ಡಾ. ಆನಂದತೀರ್ಥ ನಾಗಸಂಪಿಗೆ ಉಪನ್ಯಾಸ ನೀಡಲಿದ್ದಾರೆ. ನಂತರ ಮಠದ ವಾರ್ಷಿಕ ಪ್ರಶಸ್ತಿ ಪ್ರದಾನ ನೆರವೇರಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post