ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
‘ಯಾವುದೇ ಆರೋಪಿಗೂ ಜಾಮೀನು ಪಡೆಯುವ ಹಕ್ಕಿದೆ. ವಿಚಾರಣೆ ಆರಂಭವಾಗುವ ಮೊದಲು ಯಾರನ್ನಾದರೂ ಜೈಲಿನಲ್ಲಿ ಇರಿಸುವುದು, ಇನ್ನೂ ಸಾಬೀತಾಗದ ಅಪರಾಧಕ್ಕೆ ಶಿಕ್ಷೆ ನೀಡಿದಂತೆʼ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಹೇಳಿದರು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ #Manipal Academy of Higher Education University ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆ, ಬೆಂಗಳೂರು ಕ್ಯಾಂಪಸ್‌ನ ಅಂಗ ಸಂಸ್ಥೆಯಾದ ಮಣಿಪಾಲ್ ಲಾ ಸ್ಕೂಲ್‌ನಲ್ಲಿ ನಡೆದ ವಾರ್ಷಿಕ ಕಾನೂನು ಉಪನ್ಯಾಸದಲ್ಲಿ ಅವರು ಹೇಳಿದರು.
‘ಜಾಮೀನು ನ್ಯಾಯಶಾಸ್ತ್ರದಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಮಹತ್ವ ಏಕೆ?ʼ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಜಾಮೀನು ನಿರ್ಧಾರಗಳಲ್ಲಿ ವೈಯಕ್ತಿಕ ಸ್ವಾತಂತ್ರ್ಯವು ಪ್ರಮುಖವಾಗಬೇಕು ಎಂದು ಅವರು ಒತ್ತಿಹೇಳಿದರು. ವಿಚಾರಣೆಗೆ ಮುನ್ನ ಆರೋಪಿಗಳನ್ನು ದೀರ್ಘಕಾಲ ಬಂಧನದಲ್ಲಿಡುವ ಪ್ರಕ್ರಿಯೆ ಕ್ರಮೇಣ ಏಕಪಕ್ಷೀಯ ಶಿಕ್ಷೆಯ ಸಾಧನವಾಗಿ ಬಳಸಲಾಗುತ್ತಿದೆ ಎಂಬುದಾಗಿ ಅವರು ಎಚ್ಚರಿಸಿದರು.
State of Rajasthan V. Balchand (1977) ಎಂಬ ಮಹತ್ವದ ತೀರ್ಪನ್ನು ಉಲ್ಲೇಖಿಸಿದ ಅವರು, ‘ಜಾಮೀನು ನಿಯಮ, ಜೈಲು ಆಕ್ಷೇಪಣೆ” ಎಂಬ ದೀರ್ಘಕಾಲದಿಂದಲೂ ಮಾನ್ಯವಾಗಿರುವ ತತ್ವವನ್ನು ಪುನರುಚ್ಚರಿಸಿದರು. ಕ್ರಿಮಿನಲ್ ಕಾನೂನಿನಲ್ಲಿ ನಿರ್ದೋಷಿತ್ವದ ಪೂರ್ವಾನುಮಾನವು ಪ್ರಮುಖ ಬುನಾದಿಯಾಗಿದ್ದು, ಜಾಮೀನು ನಿರಾಕರಣೆ ಎಂದಿಗೂ ವಿಚಾರಣೆಗೆ ಮುನ್ನ ನೀಡುವ ಶಿಕ್ಷೆಯ ರೂಪವಾಗಬಾರದುʼ ಎಂದು ಅವರು ಹೇಳಿದರು.
ಜಾಮೀನು ಸಂಬಂಧಿತ ತೀರ್ಮಾನಗಳನ್ನು ಕೇವಲ ಕಾನೂನು ನಿಯಮಗಳ ಆಧಾರದಲ್ಲಿ ಮಾತ್ರವಲ್ಲದೆ, ಸಂವಿಧಾನದ 14, 19 ಮತ್ತು 21 ವಿಧಿಗಳ ಮೂಲಕವೂ ಪರಿಶೀಲಿಸಬೇಕು ಎಂದು ನ್ಯಾಯಮೂರ್ತಿ ಓಕಾ ಅಭಿಪ್ರಾಯಪಟ್ಟರು. ಪ್ರತಿಯೊಬ್ಬ ನಾಗರಿಕನ ಸ್ವಾತಂತ್ರ್ಯವನ್ನು ಸಂವಿಧಾನ ರಕ್ಷಿಸುತ್ತದೆ ಎಂಬುದನ್ನು ಎಲ್ಲಾ ನ್ಯಾಯಾಧೀಶರು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಜಾಮೀನು ನಿರ್ಧಾರಗಳಿಗೆ ಅದೇ ಮಾರ್ಗದರ್ಶಿಯಾಗಬೇಕು ಎಂದರು.
ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ‘ಅನೇಕ ವಿಚಾರಣಾಧೀನ ಕೈದಿಗಳು ತಮ್ಮ ವಿಚಾರಣೆ ಪ್ರಾರಂಭವಾಗುವುದಕ್ಕೂ ಮುನ್ನವೇ ವರ್ಷಗಳ ಕಾಲ ಜೈಲಿನಲ್ಲಿ ಕಾಲ ಕಳೆಯುವ ಪರಿಸ್ಥಿತಿ ಇದೆ. ಈ ರೀತಿ ದೀರ್ಘಕಾಲದ ಬಂಧನವು ಆರೋಪಿಗಳಿಗೆ ಮಾತ್ರವಲ್ಲ, ಅವರ ಕುಟುಂಬಗಳಿಗೂ ಅನ್ಯಾಯ ಮಾಡಿದಂತಾಗುತ್ತದೆ. Union of India v. K.A. Najeeb ಎಂಬ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ, ವಿಚಾರಣೆಗೆ ಮುನ್ನ ದೀರ್ಘಕಾಲ ಬಂಧನದಲ್ಲಿಡುವುದು ನ್ಯಾಯತತ್ವಗಳನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆʼ ಎಂದು ಹೇಳಿದರು.
‘ಜಾಮೀನು ಮೊತ್ತವನ್ನು ಹೆಚ್ಚು ನಿಗದಿಪಡಿಸುವುದು ಆರ್ಥಿಕವಾಗಿ ಹಿಂದುಳಿದ ಆರೋಪಿಗಳನ್ನು ಜೈಲಿನಲ್ಲೇ ಉಳಿಯುವಂತೆ ಮಾಡುತ್ತದೆ. ಜೊತೆಗೆ ನಿರಂತರ ಡಿಜಿಟಲ್ ಸ್ಥಳ ಮಾಹಿತಿಯನ್ನು ಹಂಚಿಕೊಳ್ಳುವಂತಹ ಅತಿಕ್ರಮಣಕಾರಿ ಷರತ್ತುಗಳನ್ನು ವಿಧಿಸುವುದರ ವಿರುದ್ಧವೂ ಅವರು ಎಚ್ಚರಿಕೆ ನೀಡಿದರು. ಇಂತಹ ಕ್ರಮಗಳು ಸಂವಿಧಾನದ 21ನೇ ವಿಧಿ ಅಡಿಯಲ್ಲಿ ರಕ್ಷಿಸಿರುವ ಗೌಪ್ಯತೆ ಮತ್ತು ಮಾನವ ಗೌರವದ ಹಕ್ಕುಗಳನ್ನು ಉಲ್ಲಂಘಿಸುವ ಸಾಧ್ಯತೆ ಇದೆʼ ಎಂದು ತಿಳಿಸಿದರು.
ಸಂವಿಧಾನಾತ್ಮಕ ಸ್ವಾತಂತ್ರ್ಯಗಳನ್ನು ಕಾಪಾಡಲು ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸಲು ಶಿಕ್ಷಿತರು ತಮ್ಮ ಹಕ್ಕುಗಳನ್ನು ಅರಿತುಕೊಂಡು ಸಕ್ರಿಯವಾಗಿ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮಾಹೆ ಬೆಂಗಳೂರು ಕ್ಯಾಂಪಸ್‌ನ ಸಹ ಕುಲಪತಿ ಡಾ. ಮಧು ವೀರರಾಘವನ್ ಹಾಗೂ ಮಣಿಪಾಲ್ ಲಾ ಸ್ಕೂಲ್, ಮಾಹೆ ಬೆಂಗಳೂರು ನಿರ್ದೇಶಕಿ ಡಾ. ಸರಸು ಎಸ್ಟರ್ ಥಾಮಸ್ ಉಪಸ್ಥಿತರಿದ್ದರು. ಕಾರ್ಯಕ್ರಮದ ವೇಳೆ ರಾಷ್ಟ್ರೀಯ ಸಂವಿಧಾನ ದಿನದ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















