ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಮಾನ್ಯವಾಗಿ ಛಲವಿರುವ ಮಂದಿ ಸಾಧನೆಯ ಹಿಂದೆ ಓಡುತ್ತಲೇ ಇರುತ್ತಾರೆ. ಗುರಿ ತಲುಪಲು ಊಟ, ನಿದ್ದೆಗಳನ್ನು ತ್ಯಜಿಸಿ, ಅವಿರತ ಶ್ರಮಿಸುತ್ತಲೇ ಇದ್ದರೂ, ಸಾಧನೆಯನ್ನು ಒಲಿಸಿಕೊಳ್ಳುವಲ್ಲಿ ಹಲವರು ಹಿಂದೆ ಬೀಳುತ್ತಾರೆ.
ಆದರೆ, ಈ ಹಿರಿಯ ಅಪ್ಪಟ ಕನ್ನಡ ಪ್ರೇಮಿಗೆ ಸಾಧನೆಯೇ ತಲೆದೂಗಿದೆ. ಅವರೇ ಕನ್ನಡ ಪರ ಹೋರಾಟಗಾರ ಶ್ರೀ ಡಾ. ಕೃ.ವೆಂ. ರಾಮಚಂದ್ರ.
ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಕೆ.ಆರ್. ವೆಂಕಟೇಶ ಮತ್ತು ಮಂಜುಳಾ ದಂಪತಿ ಪುತ್ರರಾಗಿ 1963 ರ ಜನವರಿ 1 ರಂದು ಜನಿಸಿದರು.
(2020 ರ) ಈಗ ಭಾರತಕ್ಕೆ ಬಂದು ಎರೆಗಿರುವ ಕೊರೋನಾ ವಿರುದ್ದ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸಿರುವ ಇವರು ಈ ಸಂಕಷ್ಟ ಎದುರಾದಾಗ ಕುಗ್ಗದೆ ದೊಡ್ಡ ಮಟ್ಟದ ಸಾಮಾಜಿಕ ಸೇವೆ ಸಲ್ಲಿಸಿದ್ದಾರೆ ಎಂದರೆ ಪ್ರಾಯಶಃ ತಪ್ಪಗಾಲಾರದು. ಕಷ್ಟದಲ್ಲಿದ್ದವರಿಗೆ ಅಕ್ಕಿ, ಬೇಳೆ, ಮನೆಯ ದಿನಸಿ ಸಾಮಾನುಗಳನ್ನು ಉಚಿತವಾಗಿ ನೀಡಿ ಮಾನವೀಯತೆ ಮೆರೆದಿರುವ ಮಹಾನ್ ವ್ಯಕ್ತಿ ಇವರು.
ಆಶಾ ಕಾರ್ಯಕರ್ತೆಯರಿಗೆ ಅವರು ಸಲ್ಲಿಸುವ ಸೇವೆ ಗುರುತಿಸಿ ಅಕ್ಕರೆಯ ಬಾಗಿನ ಎಂಬ ಕಾರ್ಯಕ್ರಮ ಮಾಡಿ ಅವರಿಗೆ ಬಾಗಿನ ನೀಡಿ ಗೌರವ ಸಲ್ಲಿಸಿದ್ದಾರೆ.
ಚಾಮರಾಜಪೇಟೆಯ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ರಸ್ತೆಯ ಎರಡನೇ ಅಡ್ಡರಸ್ತೆಯ ಬಾಟಾ ಮಳಿಗೆ ಎದುರಲ್ಲಿ ಇದೆ ರಾಮಚಂದ್ರ ಅವರ ಕನ್ನಡ ತಿಂಡಿ ಕೇಂದ್ರ’ವಿದೆ. ಅಲ್ಲಿ ನೀವು ಸಾಹಿತಿ, ಕಲಾವಿದರ ಚಿತ್ರಗಳನ್ನು ಹಾಗೂ ಅನೇಕ ಪುಸ್ತಕಗಳನ್ನು ನೀವು ನೋಡಬಹುದು.
ಸಾಮಾಜಿಕ ಕಳಕಳಿ
ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಯಾರಾದರೂ ಮೃತಪಟ್ಟರೆ ಅವರ ಕುಟುಂಬಕ್ಕೆ ಸಹಾಯ ಹಸ್ತ ಚಾಚುವ ರಾಮಚಂದ್ರ ಮತ್ತು ಗೆಳೆಯರಾದ ನರಸಿಂಹ ಮೂರ್ತಿ ಶೇಖರ್, ಉಚಿತ ಊಟವನ್ನು ನೀಡುತ್ತಾರೆ ಹಾಗೂ ಸಂಸ್ಕಾರಕ್ಕೆ ಬೇಕಾದ ಸಹಾಯವನ್ನು ಮಾಡುತ್ತಾರೆ. ಇವರ ಸಮಾಜ ಮುಖಿ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿದೆ. ಅಂಗಾಂಗದಾನದ ಕುರಿತು ಇವರು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು, ಇದುವರೆಗೂ ನೂರಾರು ಜನ ನೋಂದಾಯಿಸಿದ್ದಾರೆ. ವಿಧಿವಶರಾದವರ ದೇಹದಾನವೂ ನಡೆದಿದೆ. ಅದಕ್ಕಾಗಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಇವರನ್ನು ಸನ್ಮಾನಿಸಿದೆ.
ಕನ್ನಡ ಪರ ಹೋರಾಟಗಾರ ಡಾ.ಕೃ.ವೆಂ. ರಾಮಚಂದ್ರ ಅವರನ್ನು ಸಿಲಿಕಾನ್ ಸಿಟಿಯಲ್ಲಿ ನವೆಂಬರ್ ತಿಂಗಳಲ್ಲಿ ಬರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸರ್ವೋದಯ ಪ್ರತಿಷ್ಠಾನದ ಅಧ್ಯಕ್ಷ ಹೇಮರಾಜ್ ಜಿ ಜೈನ್ ನವೆಂಬರ್ 1 ರಂದು ಸನ್ಮಾನಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಇವರೊಂದಿಗೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಲೋಕಾಭಿರಾಮವಾಗಿ ಮಾತುಕತೆ ನಡೆಸಿದ್ದು, ಇವರ ಕುರಿತಾಗಿನ ಲೇಖನ ಇಲ್ಲಿದೆ.
ಕಲ್ಪ ನ್ಯೂಸ್: ನಿಮ್ಮ ತಿಂಡಿ ಕೇಂದ್ರಕ್ಕೆ ಕನ್ನಡ ತಿಂಡಿ ಕೇಂದ್ರ ಎಂದು ಹೆಸರು ಇಡಲು ಕಾರಣ?
ರಾಮಚಂದ್ರ: ಕನ್ನಡ ಭಾಷೆ ಮೇಲಿನ ಪ್ರೀತಿಗೆ ತಮ್ಮ ಹೋಟೆಲ್‌ಗೆ ಕನ್ನಡ ತಿಂಡಿ ಕೇಂದ್ರ’ ಎಂದು ನಾಮಕರಣ ಮಾಡಿದ್ದೇನೆ.
ಕಲ್ಪ ನ್ಯೂಸ್: ಕನ್ನಡ ಭಾಷೆಯ ಉಳಿವಿಗಾಗಿ ನಿಮ್ಮ ಹೋರಾಟ ಎಂದಿನಿಂದ?
ರಾಮಚಂದ್ರ: ಗೋಕಾಕ್ ಚಳವಳಿಯ ಕಾಲದಿಂದಲೂ ಕನ್ನಡ ಪರ ಹೋರಾಟದಲ್ಲಿ ತೊಡಗಿಕೊಂಡಿದ್ದೇನೆ.(ನಾಲ್ಕು ದಶಕಗಳಿಂದಲೂ ಕನ್ನಡಪರ ಚಳವಳಿಗಳಲ್ಲಿ ಭಾಗವಹಿಸುತ್ತಾ ಬಂದಿದ್ದೇನೆ)ಕನ್ನಡಕ್ಕೆ ಕುತ್ತು ಎಂದು ಕಂಡುಬಂದಾಗಲೆಲ್ಲ ದನಿಯೆತ್ತಿದ್ದನೆ ಹಾಗೂ ಹೋರಾಡಿದ್ದೇನೆ. ಕನ್ನಡ ಓದಿಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ವರ್ಷವರ್ಷ ಸಂಸ್ಥೆ, ಶಾಲೆಗಳಿಗೆ ಕನ್ನಡ ದಿನಪತ್ರಿಕೆಯನ್ನು ಹಂಚಿದ್ದೇನೆ.
ಕಲ್ಪ ನ್ಯೂಸ್: ಕೊರೋನಾ ವಿರುದ್ಧದ ನಿಮ್ಮ ಹೋರಾಟದ ಬಗ್ಗೆ?
ರಾಮಚಂದ್ರ: ಕೋವಿಡ್ ಮಹಾಮಾರಿಯ ವಿಷಮ ಸಂದರ್ಭದಲ್ಲಿ ಸ್ವಾರ್ಥವನ್ನು ಬಿಟ್ಟು ಸಾಮಾಜಿಕ ಹೊಣೆಗಾರಿಕೆಯನ್ನು ಮತ್ತು ಜನರ ಸೇವೆಯಲ್ಲಿ ತೊಡಗಿರುವವರ ಕಾರ್ಯವನ್ನು ಗುರುತಿಸುವ, ಅಭಿನಂದಿಸುವ ಮತ್ತು ಅವಶ್ಯವಿರುವ ಹಾಗೂ ಕೈಲಾದ ಸಹಾಯ ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ.
ಕಲ್ಪ ನ್ಯೂಸ್: ಕನ್ನಡ ತಿಂಡಿ ಕೇಂದ್ರದಿಂದ ನೀವು ನೀಡುವ ಪ್ರಶಸ್ತಿ- ಗೌರವಗಳ ಬಗ್ಗೆ?
ರಾಮಚಂದ್ರ: ರಾಜ್ಯೋತ್ಸವ, ಹನುಮ ಜಯಂತಿ ಸಂದರ್ಭಗಳಲ್ಲಿ ಅರ್ಹರಿಗೆ ನಾಡಭೂಷಣ ಪ್ರಶಸ್ತಿ ನೀಡಿ ಗೌರವಿಸುತ್ತೇವೆ. ಹೀಗೆ ಗೌರವ ಪಡೆದವರಲ್ಲಿ ಪೌರಕಾರ್ಮಿಕರು, ವಿಕ್ಟೋರಿಯಾ ಆಸ್ಪತ್ರೆ ಶವಾಗಾರದ ನೌಕರರೂ ಸೇರಿದ್ದಾರೆ.
ಕಲ್ಪ ನ್ಯೂಸ್: ನಿಮ್ಮ ತಿಂಡಿ ಕೇಂದ್ರಕ್ಕೆ ವಿಶೇಷವಾಗಿ ಭೇಟಿ ನೀಡಿದವರ ಬಗ್ಗೆ ?
ರಾಮಚಂದ್ರ: ಅನೇಕ ಸಾಹಿತಿ, ಕಲಾವಿದರ ಭೇಟಿ ನೀಡಿದ್ದಾರೆ. ಅವರಲ್ಲಿ ಉಪೇಂದ್ರ ಅವರು ಭೇಟಿ ನೀಡಿ ಪುಳಿಯೋಗರೆ ಸವಿದಿದ್ದಾರೆ ಹಾಗೂ ಕಲಾವಿದರಾದ ಮುಖ್ಯಮಂತ್ರಿ ಚಂದ್ರು, ಗಾಯಕರಾದ ವಿಜಯ್ ಪ್ರಕಾಶ್ ಹೀಗೆ ಹೇಳುತ್ತಾ ಹೋದರೆ ಉದ್ದನೆಯ ಪಟ್ಟಿ ಬೆಳೆಯುತ್ತದೆ. ಆರೇಳು ತಿಂಗಳ ಕೆಳಗೆ ಬಿಬಿಸಿ ನ್ಯೂಸ್ ಅವರು ಬಂದು ನಾವು ಚಿತ್ರಾನ್ನ ಮಾಡಲು ಬಳಸುವ ಅರಿಶಿನ ಪುಡಿಯ ಬಗ್ಗೆ ಹಾಗೂ ಅದು ಆರೋಗ್ಯಕ್ಕೆ ಎಷ್ಟು ಒಳ್ಳೆಯದ್ದು ಎನ್ನುವುದರ ಬಗ್ಗೆ ಒಂದು ಚಿತ್ರೀಕರಣ ಮಾಡಿಕೊಂಡು ಹೋಗಿದ್ದಾರೆ.
ಕಲ್ಪ ನ್ಯೂಸ್: ಅಂಗದಾನದ ಬಗ್ಗೆ ?
ರಾಮಚಂದ್ರ: ಅಂಗದಾನದ ಹಿರಿಮೆಯ ಬಗ್ಗೆ ಪೇಜಾವರ ಶ್ರೀಗಳು ತಿಳಿಸಿದ್ದಾರೆ- ಅತ್ಯಂತ ಶ್ರೇಷ್ಠ ದಾನಗಳಲ್ಲಿ ಅಂಗಾಂಗ ದಾನವು ಕೊಡ ಒಂದು- ಅನೇಕರಿಗೆ ಈ ತಪ್ಪು ಕಲ್ಪನೆಗಳಿವೆ. ನಮ್ಮ ಕಣ್ಣು ಮುಂತಾದ ಅಂಗಗಳನ್ನು ದಾನ ಮಾಡಿದರೆ ಮುಂದಿನ ಜನ್ಮದಲ್ಲಿ ಅಂಗ ವೈಕಲ್ಯ ಬರುತ್ತದೆ ಹಾಗೂ ಅದರಿಂದ ಮುಂದಿನ ಸಂಸ್ಕಾರಕ್ಕೆ ಹಾನಿ ಎಂಬ ಭ್ರಮೆ ಅನೇಕರಿಗೆ ಇದೆ. ಆದರೆ ವಾಸ್ತವವಾಗಿ ಹಾಗಲ್ಲ. ಮತ್ತೊಬ್ಬರಿಗೆ ಉಪಯೋಗವಾಗುವಂತಹ ಅಂಗದಾನ ಅತ್ಯಂತ ಶ್ರೇಷ್ಠದಾನ ಎಂದು ಅದರಂತೆಯೇ ನಾನು ಅಂಗಾಂಗದಾನಿ, ಮರಣಾದನಂತರ ದೇಹದಾನಿ, ನೀವು ಸಹ ಶ್ರೇಷ್ಠ ದಾನಿಯಾಗಲು ಸಂಪರ್ಕಿಸಿ-9342921229.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post