ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಜೋಡಿ ಕೆರೆಗಳ ನಿರ್ಮಾಣ ಕಾರ್ಯವಾಗಿ 2020 ಅಕ್ಟೋಬರ್ 30 ನೆಯ ತಾರೀಕಿಗೆ ಸುಮಾರು 299 ವರ್ಷಗಳು ಪೂರ್ಣಗೊಂಡಿದೆ. ಈಗ ಸಂದರ್ಭದಲ್ಲಿ ಭರಮಸಾಗರದ ಕೆರೆ ನಿರ್ಮಾಣ ಕಾರ್ಯ 1689ರಲ್ಲಿ ಪ್ರಾರಂಭವಾಗಿ ಸುಮಾರು 32 ವರ್ಷಗಳ ಅವಧಿಯಲ್ಲಿ ಭರಮಸಾಗರದ ಜೋಡಿ ಕೆರೆಯಲ್ಲಿ ದೊಡ್ಡ ಕೆರೆ 30-10- 1721 ನಿರ್ಮಾಣವಾಗಿ ಭರಮಸಾಗರದ ಜನರ ಕೈಗೆ ಶ್ರೀ ಬಿಚ್ಚುಗತ್ತಿ ಭರಮಣ್ಣ ನಾಯಕರು ನೀಡಿದ್ದಾರೆ.
ಪ್ರಾರಂಭದಲ್ಲಿ ಕೆರೆಯ ಕಾಮಗಾರಿಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿದ ನಮಗೆ ಜೀವನಾಡಿಯಾದ ಬಿಚ್ಚುಗತ್ತಿ ಭರಮಣ್ಣ ನಾಯಕರಿಗೂ ಹಾಗೂ ಕೆರೆ ನಿರ್ಮಾಣ ಕಾಮಗಾರಿಯಲ್ಲಿ ಭಾಗಿಯಾದ ಕಾರ್ಮಿಕ ವರ್ಗವನ್ನು ಈ ಸಂದರ್ಭದಲ್ಲಿ ಜ್ಞಾಪಕ ಮಾಡಿಕೊಂಡು ಅವರನ್ನು ಸದಾಕಾಲವೂ ನೆನೆಯುವಂತಹ ಸಮಯ.
ಭರಮಸಾಗರದ ಸುಮಾರು 800 ರಿಂದ 900 ಎಕರೆ ದೊಡ್ಡ ಕೆರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಹೆಸರುವಾಸಿಯಾದ ಕೆರೆ, ಒಮ್ಮೆ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿದರೆ ರೈತರು, ಜನರು ಯಾವುದೇ ರೀತಿಯ ನೀರಿನ ತೊಂದರೆ ಕಾಣದೆ ಸುಮಾರು ಐದು ವರ್ಷ ಸುಖವಾಗಿ ಜೀವನವನ್ನು ಸಾಗಿಸಬಹುದು ಇದು ನಾವು ಕಣ್ಣಾರೆ ಕಂಡ ದೃಶ್ಯ.
ದೇಶದಲ್ಲಿ ಕಳೆದ ಮಳೆಗಾಲದಲ್ಲಿ ಸುರಿದ ಮಳೆಯಿಂದ ಕಂಗಾಲಾಗದ ಜನಕ್ಕೆ ವಿಸ್ಮಯ ಎಂದರೆ, ಭರಮಸಾಗರದಲ್ಲಿ ಮಳೆ ಇಲ್ಲದೆ ಒಂದು ಹನಿ ನೀರು ಕೆರೆಗೆ ಬಂದಿಲ್ಲ, ಇಲ್ಲಿನ ಜನರಿಗೆ ನಮ್ಮ ಊರಿನಲ್ಲಿ ಕೆರೆ ಇತ್ತು ಎಂಬುವುದು ಮರೆತು ಹೋದಂತೆ ಆಗಿದೆ ಮತ್ತು ಕೆರೆಯ ಬದುವಿನಲ್ಲಿ ಈಗಾಗಲೆ ನಿವೇಶನಗಳನ್ನು, ಮನೆಗಳನ್ನು ನೋಡಬಹುದು.
ಮುಂದಿನ ವರ್ಷಕ್ಕೆ 300 ವರ್ಷಕ್ಕೆ ಕಾಲಿಡುವ ನಮ್ಮ ಕೆರೆಯನ್ನು ಜೀರ್ಣೋದ್ಧಾರ ಮಾಡಿ ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಕೆರೆ ತುಂಬಿಸಿ ನೀರಾವರಿ ಕಾಲುವೆ ಮಾಡಲಾಗುತ್ತಿದೆ. ಈಗಾಗಲೇ ಕೆಲಸ ಪ್ರಗತಿಯಲ್ಲಿ ಇದೆ. ಆದರೂ ಸುರಕ್ಷತೆಗಾಗಿ ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಂದಾಳತ್ವ ವಹಿಸಿದವರು ಕೆಲಸ ಮುಂದುವರೆಸಬೇಕು.
1) ಕೆರೆಯ ವಿಸ್ತೀರ್ಣ ಅಳತೆ ಮಾಡಿಸಬೇಕು.
2) ಈಗ ಇರುವ ಕೆರೆಯ ಕೋಡಿ ಮತ್ತು ಏರಿಯನ್ನು ನುರಿತ ತಂತ್ರಜ್ಞಾನ ಬಳಸಿ ಪರೀಕ್ಷೆ ಮಾಡಿ ವರದಿ ಮಾಡಿ ಸರಿಪಡಿಸಬೇಕು.
3) ಅಕಸ್ಮಾತ್ತಾಗಿ ಕೆಲವು ಜನ ಕೆರೆಯ ವಿಸ್ತೀರ್ಣದಲ್ಲಿ ಮನೆ ನಿರ್ಮಾಣ ಮಾಡಿದವರಿಗೆ ಬೇರೆ ಕಡೆ ಜಾಗ ನೀಡಿ ಆ ಸ್ಥಳವನ್ನು ನಿರ್ಬಂಧಗಳನ್ನು ಹೇರಬೇಕು.
4) ಕೆರೆಯ ಏರಿಯ ಮೇಲೆ ಬಿಚ್ಚುಗತ್ತಿ ಭರಮಣ್ಣ ನಾಯಕರ ಅಥವಾ ವೀರ ಮದಕರಿ ನಾಯಕ ಪ್ರತಿಮೆ ಮಾಡಿಸಿ ಪ್ರತಿಷ್ಠಾಪನೆ ಮಾಡಿ ಊರಿನ ಹೆಸರನ್ನು ಉಳಿಸಬೇಕು.
5) ಕೆರೆಯಲ್ಲಿ ಶೇಖರಣೆ ಮಾಡುವ ನೀರಿನ ಒಂದು ಭಾಗವನ್ನು ಬೇರೆಕಡೆ ಬೇರ್ಪಡಿಸಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಬೇಕು ಮತ್ತು (RO plant) ಶುದ್ಧ ನೀರನ್ನು ಕುಡಿಯಲು ಊರಿನ ಜನರಿಗೆ ಕೂಡಬಹುದು.
6) ಪೂರ್ವ ಯೋಜನೆ ರೂಪಿಸಿ ಕೆರೆಯಲ್ಲಿ ಶೇಖರಣೆ ಮಾಡಲಾದ ನೀರು ಯಾವುದೇ ರೀತಿಯಲ್ಲಿ ಪೂಲಾಗದಂತೆ ನಿರ್ವಹಣೆ ಮಾಡಬೇಕು.
7) ದೋಣಿ ವಿಹಾರ, ಮೀನು ಸಾಗಣಿಕೆ ಇವುಗಳನ್ನು ಯೋಜನೆಯಲ್ಲಿ ಸೇರಿಸಿ ಕೆರೆಯ ಜೀರ್ಣೋದ್ಧಾರಕ್ಕೆ ಬೇಕಾದ ವ್ಯವಸ್ಥೆ ಮಾಡಬೇಕು.
ಇವುಗಳು ಮುಂದೆ ನೀರು ಶೇಖರಣೆ ಮಾಡಿದ ನಂತರ ಮಾಡಬಹುದು ಈಗಾಗಲೆ ಬರುವ ಜನವರಿ-ಫೆಬ್ರವರಿ ವೇಳೆಗೆ ಕೆರೆಗೆ ನೀರು ತರಲು ಎಲ್ಲ ಪ್ರಯತ್ನ ನಡೆಯುತ್ತಿದೆ. ಆದರೂ ಊರಿನ ಮುಖಂಡರು ಮತ್ತು ರೈತರು ಮತ್ತು ಸಾಮಾಜಿಕ ಕಳಕಳಿ ಇರುವ ಜನರು ಊರಿನ ಉದ್ದಾರಕ್ಕಾಗಿ ಮುಂದಾಗಬೇಕು, ಸರ್ಕಾರದ ಹಣ ಸರಿಯಾಗಿ ವಿನಿಯೋಗಿಸಿ ಗುತ್ತಿಗೆದಾರರಿಂದ ವ್ಯವಸ್ಥಿತ ಕೆಲಸ ಮಾಡಿಸಿ ಕೊಂಡು ಬಿಚ್ಚುಗತ್ತಿ ಭರಮಣ್ಣ ನಾಯಕರ ಹೆಸರು ಸದಾಕಾಲವೂ ಉಳಿಯಲು ಭರಮಸಾಗರ ಮತ್ತು ಸುತ್ತಮುತ್ತಲಿನ ಜನ ಮುಂದಾಗಬೇಕು. ಇದು ಯಾರಿಗಾಗಿ-ಮುಂದಿನ ಪೀಳಿಗೆಗೆ.
ಲೇಖನ: ಮುರುಳೀಧರ್ ನಾಡಿಗೇರ್, ಭರಮಸಾಗರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post