ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಇಲ್ಲಿ ಕೋರ್ಟ್ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ತಕರಾರರು ಎತ್ತಿರುವ ಕಟ್ಟಡ ಮಾಲೀಕರಿಗೆ ಸೂಕ್ತ ಪರಿಹಾರ ನೀಡಿ ಕಾನೂನು ರೀತಿಯ ಅಗಲೀಕರಣ ಕಾರ್ಯಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸೂಚನೆ ನೀಡಿದರು.
ಇಲ್ಲಿನ ರಂಗಪ್ಪ ವೃತ್ತ ಹಾಗೂ ಕೋರ್ಟ್ ರಸ್ತೆ ಅಗಲೀಕರಣ ವಿಚಾರದಲ್ಲಿ ಗೊಂದಲಗಳು ಉಂಟಾಗಿದ್ದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಂಗಪ್ಪ ವೃತ್ತದಿಂದ ಕೋರ್ಟ್ ರಸ್ತೆ ಆರಂಭದಲ್ಲಿರುವ ವಾಣಿಜ್ಯ ಕಟ್ಟಡಗಳಿಗೆ ಅಗಲೀಕರಣದಿಂದ ತೊಂದರೆಯಾಗುವ ಹಿನ್ನೆಲೆಯಲ್ಲಿ ಇದನ್ನು ಕೈಬಿಡುವಂತೆ ಆಗ್ರಹಿಸಲಾಗಿತ್ತು. ಈ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿತ್ತು. ಆದರೆ, ಇಂದು ಸ್ಥಳ ಪರೀಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಕಾನೂನು ರೀತಿ ಪರಿಹಾರ ನೀಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದರು.
ನೂತನ ಪೈಪ್‌ಲೈನ್ ಸ್ಥಳ ಬದಲಾವಣೆಗೆ ಸೂಚನೆ:
ರಂಗಪ್ಪ ವೃತ್ತದಲ್ಲಿ ಕೋರ್ಟ್ ರಸ್ತೆಗೆ ಹೊಂದಿಕೊಂಡಂತೆ ಹಾದು ಹೋಗಿರುವ ಕುಡಿಯುವ ನೀರಿನ ಹಳೆಯ ಪೈಪ್‌ಲೈನ್ ಬದಲಿಸದೆ ರಸ್ತೆ ಕಾಮಾಗಾರಿ ಮಾಡುತ್ತಿರುವುದಕ್ಕೆ ಶಾಸಕರು ಹಾಗೂ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಜಿಲ್ಲಾಧಿಕಾರಿ ಭೇಟಿ ಸಮಯದಲ್ಲಿ ಉಪಸ್ಥಿತರಿದ್ದ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು, ಹಳೆಯ ಪೈಪ್‌ಲೈನ್ ಬದಲಾವಣೆ ಮಾಡದೆ ರಸ್ತೆ ನಿರ್ಮಾಣ ಕಾಮಗಾರಿ ನಡೆಸುತ್ತಿರುವುದು ಅವೈಜ್ಞಾನಿಕವಾಗಿದೆ. ಇದೇರೀತಿ ನೂತನ ರಸ್ತೆ ನಿರ್ಮಾಣವಾದ ನಂತರ ವಾಹನ ಸಂಚಾರ ಹೆಚ್ಚಾದಾಗ, ಪೈಪ್‌ಲೈನ್ ಒಡೆದು ನೀರು ಪೋಲಾಗುತ್ತದೆ. ಅದರಿಂದ ಜನರು ಸಹ ಸಮಸ್ಯೆ ಎದುರಿಸಬೇಕಾಗುತ್ತದೆ. ಬಹುಮುಖ್ಯವಾಗಿ ಆರೀತಿ ಹಾನಿಯಾದರೆ ಮತ್ತೆ ರಸ್ತೆಯನ್ನು ಅಗೆಯಲು ರಿಪೇರಿ ಒಳಪಡಿಸಿ ರಸ್ತೆ ಮರು ನಿರ್ಮಾಣ ಮಾಡಬೇಕಾಗುತ್ತದೆ. ಇದರಿಂದಾಗಿ ಸರ್ಕಾರದ ಹಣವೂ ಸಹ ಪೋಲಾಗುತ್ತದೆ. ಹೀಗಾಗಿ ಹಳೆಯ ಪೈಪ್‌ಲೈನ್ ಅನ್ನು ರಸ್ತೆ ತುದಿಗೆ ಬದಲಿಸಿ ಕಾಮಗಾರಿ ಮುಂದುವರೆಸಬೇಕು ಎಂಬದನ್ನು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಇದಕ್ಕೆ ತತಕ್ಷಣವೇ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಅವರಿಂದ ಸ್ಥಳದಲ್ಲೇ ಮಾಹಿತಿ ಪಡೆದುಕೊಂಡರು.
ಈ ವೇಳೆ ಮಾಹಿತಿ ನೀಡಿದ ಇಂಜಿನಿಯರ್, ಪೈಪ್‌ಲೈನ್ ಸ್ಥಳ ಬದಲಾವಣೆಯಿಂದ ಹೆಚ್ಚುವರಿ ೨ಲಕ್ಷ ರೂ. ಹೊರೆಯಾಗುತ್ತದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಧಿಕಾರಿಗಳು ಹೆಚ್ಚುವರಿ ೨ ಲಕ್ಷ ರೂ.ಗಳನ್ನು ಜಿಲ್ಲಾಡಳಿತದಿಂದ ನಾವೇ ನೀಡುತ್ತೇವೆ. ನೀರಿನ ಪೈಪ್ ಮಾರ್ಗ ಬದಲಿಸಿದ ನಂತರ ರಸ್ತೆ ಕಾಮಗಾರಿ ಮುಂದುವರೆಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಪರಿಶೀಲನೆ ವೇಳೆ ಸ್ಥಳೀಯ ಮುಖಂಡರು ಹಾಗೂ ಕಟ್ಟಡ ಮಾಲೀಕರು, ಕಾಮಗಾರಿ ಬಗ್ಗೆ ಹಲವರ ವಿಚಾರಗಳನ್ನು ಗಮನಕ್ಕೆ ತಂದರು.
ಜಿಲ್ಲಾಧಿಕಾರಿಗಳ ಭೇಟಿಯ ವೇಳೆ ಲೋಕೋಪಯೋಗಿ ಇಲಾಖೆ ಇಇ ಧರ್ಮಪ್ಪ, ತಾಲೂಕು ಪಂಚಾಯ್ತಿ ಇಒ, ತಹಶೀಲ್ದಾರ್ ಸಂತೋಷ್ ಕುಮಾರ್, ಪರಮೇಶ್, ಡಿವೈಎಸ್‌ಪಿ ಕೃಷ್ಣಮೂರ್ತಿ, ಟಿಪ್ಪುಸುಲ್ತಾನ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post