ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ದಿನೇದಿನೇ ಹೆಚ್ಚಾಗುತ್ತಿರುವ ಕೋವಿಡ್ ಸೋಂಕನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹಾಗೂ ಕೋವಿಡ್ ಪೀಡಿತರ ಆರೈಕೆಗಾಗಿ ಎಂಪಿಎಂ ಕಲ್ಯಾಣ ಮಂಟಪವನ್ನು100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆಗಿ ಮಾಡಲಾಗಿದ್ದು, ಅಗತ್ಯವಿರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು.
ಕೋವಿಡ್ ಕೇರ್ ಸೆಂಟರ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ಸೋಂಕಿತರ ಸಂಖ್ಯೆ ತಾಲೂಕಿನಲ್ಲಿ ದಿನೇದಿನೇ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ, ತಾಲೂಕು ಆಡಳಿತ, ಆರೋಗ್ಯ ಇಲಾಖೆ, ನಗರಸಭೆ ಹಾಗೂ ಪೊಲೀಸ್ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ. ರಾಜ್ಯದ ಹಲವೆಡೆ ಇರುವಂತೆ ಭದ್ರಾವತಿಯಲ್ಲೂ ಸಹ ಬೆಡ್ ಕೊರತೆ ಉಂಟಾಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.
ತಾಲೂಕಿನಲ್ಲಿ ಬೆಡ್ ಕೊರತೆಯಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಎಂಪಿಎಂ ಕಲ್ಯಾಣ ಮಂಟಪವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾಡಲಾಗಿದ್ದು, ತೀವ್ರ ಲಕ್ಷಣಗಳಿಲ್ಲದ ಪಾಸಿಟಿವ್ ರೋಗಿಗಳಿಗೆ ಇಲ್ಲಿ ಐಸೋಲೇಶನ್ ಆಗಲು ಅವಕಾಶವಿದೆ. ಇಲ್ಲಿ ದಾಖಲಾಗುವ ರೋಗಿಗಳಿಗೆ ಊಟ, ತಿಂಡಿ, ಪೋಷಕಾಂಶ ಆಹಾರ, ಶುದ್ಧ ಕುಡಿಯುವ ನೀರು ಹಾಗೂ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು.
ನಗರದಲ್ಲಿ ನಡೆದ ಸಭೆಯಲ್ಲಿ ತಿಳಿಸಿದಂತೆ ಕೋವಿಡ್ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಗಳಿಗಾಗಿ ಶಾಸಕರ ಅನುದಾನದಿಂದ 100ಕೋಟಿ ಅನುದಾನವನ್ನು ನೀಡಲಾಗಿದೆ. ಇದನ್ನು ಬಳಸಿಕೊಂಡು ನಗರಸಭೆ, ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಒಂದು ವೇಳೆ ಈ ಹಣ ಕಡಿಮೆಯಾದಲ್ಲಿ ತಾಲೂಕಿನ ಜನರ ಆರೋಗ್ಯಕ್ಕಾಗಿ ವೈಯಕ್ತಿಕವಾಗಿ ಹಣ ನೀಡಲು ಸಿದ್ಧನಿದ್ದೇನೆ ಎಂದರು.
ನಾಲ್ಕು ಉಚಿತ ಆಂಬ್ಯುಲೆನ್ಸ್ ಲೋಕಾರ್ಪಣೆ
ಈ ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಾಗುವ ರೋಗಿಗಳ ಅನುಕೂಲಕ್ಕಾಗಿ ನಾಲ್ಕು ಉಚಿತ ಆಂಬ್ಯುಲೆನ್ಸ್‌ಗಳನ್ನು ಲೋಕಾರ್ಪಣೆಗೊಳಿಸಿದರು. ಶಾಸರು ವೈಯಕ್ತಿಕವಾಗಿ ಎರಡು ಆಂಬ್ಯುಲೆನ್ಸ್, ಭದ್ರಾವತಿ ಸತ್ಯಸಾಯಿ ಸೇವಾ ಟ್ರಸ್ಟ್ ವತಿಯಿಂದ ಒಂದು ಹಾಗೂ ಶ್ರೀಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಒಂದು ಒಟ್ಟು ನಾಲ್ಕು ಆಂಬ್ಯುಲೆನ್ಸ್‌ಗಳನ್ನು ರೋಗಿಗಳ ಸೇವೆಗಾಗಿ ಉಚಿತವಾಗಿ ನೀಡಲಾಗಿದೆ.
ಖಾಸಗಿ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕಕ್ಕೆ ಸೂಚನೆ
ಭದ್ರಾವತಿ ತಾಲೂಕಿನಲ್ಲಿ ಕೋವಿಡ್ ಚಿಕಿತ್ಸೆಗಾಗಿ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆಯಾಗದಂತೆ ನೋಡಿಕೊಳ್ಳಲು ತಾಲೂಕು ಆರೋಗ್ಯಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಅಗತ್ಯವಿದ್ದಲ್ಲಿ ನಿವೃತ್ತ ಅಥವಾ ಖಾಸಗಿ ವೈದ್ಯರು ಹಾಗು ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಿ. ಸರ್ಕಾರ ಇದರ ವೆಚ್ಚವನ್ನು ಭರಿಸದಿದ್ದಲ್ಲಿ ತಾವು ವೈಯಕ್ತಿಕವಾಗಿ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಸಮಾಜ ಕಲ್ಯಾಣಾಧಿಕಾರಿ ಎನ್. ಕೃಷ್ಣಪ್ಪ, ಕಂದಾಯಾಧಿಕಾರಿ ಪ್ರಶಾಂತ್, ಎಂಪಿಎಂ ಅಧಿಕಾರಿ ಸತೀಶ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಪ್ರಭಾಕರ ಬೀರಯ್ಯ, ಪರಮೇಶ್ವರಪ್ಪ, ಕುಂಚ ಕಲಾವಿದ ಬಿ. ಗುರು, ನಗರಸಭೆ ಮಾಜಿ ಸದಸ್ಯೆ ಲಕ್ಷ್ಮೀದೇವಿ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post