ಭದ್ರಾವತಿ: ಬಗರ್ ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿ ಮಾಡಿರುವ ರೈತರಿಗೆ ಭೂಮಿ ಹಕ್ಕು ನೀಡಬೇಕೆಂದು ಒತ್ತಾಯಿಸಿ ಜೂ. 17 ರಂದು ಸೋಮವಾರ ರಾಜ್ಯಾಧ್ಯಕ್ಷ ಕೆ.ಟಿ. ಗಂಗಾಧರ್ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ ಹೇಳಿದರು.
ಪತ್ರಿಕಾಘೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 50 ಲಕ್ಷ ರೈತ ಕುಟುಂಬಗಳು ಬಗರ್ ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿ ಮಾಡುತ್ತಾ ಬದುಕು ರೂಪಿಸಿಕೊಂಡಿದ್ದಾರೆ. ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರರು ಮಹಿಳೆಯರು ಭೂಮಿ ಸಾಗುವಳಿ ಮಾಡುತ್ತಾ ಆಹಾರ ಮತ್ತು ಉದ್ಯೋಗವನ್ನು ಹುಡಿಕೊಂಡಿದ್ದಾರೆ. ಆದರೆ ಸುಮಾರು 7 ದಶಕಗಳ ಅಂತರದಲ್ಲಿ ಭೂಮಿಯ ಹಕ್ಕನ್ನು ಹೊಂದಲು ಹಲವಾರು ಹೋರಾಟ ಮಾಡುತ್ತಿರುವ ಬಡ ರೈತರ ಹಿತಾಸಕ್ತಿ ಕಡೆಗಣಿಸಿವೆ ಎಂದು ದೂರಿದರು.
ಗ್ರಾಮೀಣ ಪ್ರದೇಶಗಳಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಾ ಸಾಗುವಳಿಯಿಂದ ಉತ್ಪಾದನೆ, ಕೃಷಿ ಹುಟ್ಟುವಳಿಗಳು ಸಹ ದೇಶದ ಭದ್ರತೆಯಲ್ಲಿ ಪಾಲು ಹೊಂದಿವೆ ಎಂಬುದನ್ನು ಸರಕಾರ ಮರೆಯಬಾರದು. ರಾಜ್ಯದ 4 ವಿಭಾಗಗಳಲ್ಲಿ 7 ಲಕ್ಷ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಇದ್ದು ಸುಮಾರು 18 ಲಕ್ಷ ಹೆಕ್ಟೇರ್ ಭೂಮಿಯನ್ನು ಬಗರ್ ಹುಕುಂ ಮತ್ತು ಅರಣ್ಯ ಸಾಗುವಳಿ ಮಾಡಿರುವ ಬಡ ರೈತರಿಗೆ ನೀಡುವ ಹೊಣೆಗಾರಿಕೆ ಕೇಂದ್ರ ಹಾಗು ರಾಜ್ಯ ಸರಕಾರಗಳ ಮೇಲಿದೆ ಎಂದರು.
ನಮೂನೆ 50 ಹಾಗು 53 ರಲ್ಲಿ ಅರ್ಜಿ ಸಲ್ಲಿಸಿರುವ ಭೂಮಿ ಹಕ್ಕನ್ನು ಪಡೆಯಲು ಅರ್ಹರಾಗಿರುವ ಫಲಾನುಭವಿಗಳ ಬವಣೆ, ಅರಣ್ಯ ಹಕ್ಕು ಸಮಿತಿಯಲ್ಲಿ ಅರ್ಜಿ ಸಲ್ಲಿಸಿರುವ ಬಡ ರೈತರು ಅರ್ಹ ಫಲಾನುಭವಿಗಳಾಗಿದ್ದರೂ ಹಕ್ಕುಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಹಿಂದಿನ ಎಲ್ಲಾ ಸರಕಾರಗಳು ರೈತರ ಜೀವನೋಪಾಯಕ್ಕೆ ಉಳಿಮೆ ಮಾಡಿದ್ದ ಕಂದಾಯ-ಅರಣ್ಯ ಭೂಮಿಯನ್ನು ಯಾವುದೇ ಪರಿಶೀಲನೆ ನಡೆಸದೆ ರೈತರ ಅಭಿಪ್ರಾಯಗಳನ್ನು ಪಡೆಯದೆ ಏಕಾಏಕಿ ಭೂಮಿಯನ್ನು ಅರಣ್ಯ ಇಂಡೀಕರಣ ಮಾಡಿದ್ದರಿಂದ ಅಧಿಕಾರಿಗಳ ಕುಂಟು ನೆಪದಿಂದ ದಶಕಗಳಿಂದ ಭೂಮಿಯ ಹಕ್ಕು ಪಡೆಯಲಾಗದೆ ವಂಚಿತರಾಗಿದ್ದಾರೆ.
ರಾಜ್ಯ ಸರಕಾರ 3667 ಎಕರೆ ಭೂಮಿಯನ್ನು ಜಿಂದಾಲ್ಗೆ ಕೊಡುವ ನಿರ್ಧಾರವನ್ನು ಕೂಡಲೇ ಕೈ ಬಿಡಬೇಕು, ಸರಕಾರಗಳು ತಕ್ಷಣವೆ ಅವೈಜ್ಞಾನಿಕವಾಗಿ ಅರಣ್ಯ ಇಂಡೀಕರಣದಲ್ಲಿ ಸೇರಿಸಿರುವ ಭೂಮಿಯನ್ನು ಹೊರತರಬೇಕು. ಅರಣ್ಯ ಸಮಿತಿಗೆ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೆ ಕಠಿಣ ಷರತ್ತು ವಿಧಿಸಬಾರದು, ರಾಜ್ಯ ಸರಕಾರ ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಸಂಘ, ಖಾಸಗೀ ಫೈನಾನ್ಸ್, ಮಹಿಳಾ ಸ್ವಸಹಾಯ ಸಂಘಗಳಲ್ಲಿ ಪಡೆದಿರುವ ಎಲ್ಲಾರೀತಿಯ ಸಾಲಗಳನ್ನು ಮನ್ನಾ ಮಾಡಬೇಕು, ಎಲ್ಲಾ ಕಾಲದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಪತ್ರಿಕಾಗೋಷ್ಟಿಯಲ್ಲಿ ಒತ್ತಾಯಿಸಿದರು.
ಗೋಷ್ಟಿಯಲ್ಲಿ ರೈತ ಮುಖಂಡರಾದ ಹಿರಿಯಣ್ಣಯ್ಯ, ಡಿ.ವಿ. ವೀರೇಶ್, ಎಂ. ಮೋಹನ್ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post