ಭದ್ರಾವತಿ: ಶಿವಮೊಗ್ಗ ಸಾರಿಗೆ ಇಲಾಖೆಯಲ್ಲಿ ದಲಿತ ನೌಕರ ಮಂಜುನಾಥ್ ರವರ ಮೇಲೆ ಹಾಡುಹಗಲೆ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿ ಅವ್ಯಾಚ ಪದಗಳ ನಿಂದನೆ ಮಾಡಿ ಅವಮಾನಿಸಿರುವ ದುಷ್ಕರ್ಮಿಗಳ ಮೇಲೆ ದೂರು ದಾಖಲಾಗಿದ್ದರು ಬಂಧಿಸದೆ ಇರುವುದನ್ನು ಖಂಡಿಸಿ ಗುರುವಾರ ದಸಂಸ ಮತ್ತು ಕರ್ನಾಟಕ ದಲಿತ ನೌಕರರ ಒಕ್ಕೂಟ ಹಾಗು ವಿವಿಧ ಪ್ರಗತಿಪರ ಸಂಘಟನೆಗಳು ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕ್ರಿಮಿನಲ್ ಗೂಂಡಾಗಿರಿ ಪ್ರಕರಣದಲ್ಲಿರುವ ಮಹಾನಗರ ಪಾಲಿಕೆ ಸದಸ್ಯ ವಿಶ್ವಾಸ್ ಎಂಬುವವರು ಆರ್‍ಟಿಒ ಕಛೇರಿಗೆ ಹಾಡುಹಗಲೆ ನುಗ್ಗಿ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಹಾಕಿ, ಅವ್ಯಾಚ ಪದಗಳಿಂದ ನಿಂದಿಸಿ, ಸಾರ್ವಜನಿಕವಾಗಿ ಅವಮಾನಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಶಿವಮೊಗ್ಗ ಜಯನಗರ ಪೊಲೀಸ್ ಠಾಣೆಯಲ್ಲಿ ಆರೋಪಿಯ ಮೇಲೆ ಎಫ್‍ಐಆರ್ ದಾಖಲಾಗಿ 16 ದಿನಗಳು ಕಳೆದರೂ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದನ್ನು ಖಂಡನೀಯ. ಪೊಲೀಸರು ಆರೋಪಿಗಳನ್ನು ಬಂಧಿಸದೆ ಇರುವುದರಿಂದ ಪ್ರಭಾವಿತ ವ್ಯಕ್ತಿಗಳಾದ ಅವರು ಪ್ರತಿನಿತ್ಯ ಬಾಧಿತ ನೌಕರರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಆತಂಕಕ್ಕೊಳಗಾದ ನೌಕರ ಮಂಜುನಾಥ್ ಸೇವೆಗೆ ಹಾಜರಾಗಲು ಹಿಂಜರಿಯುತ್ತಿದ್ದಾರೆ. ಅದ್ದರಿಂದ ಜಿಲ್ಲಾಡಳಿತಕ್ಕೆ ಮುಖ್ಯ ಮಂತ್ರಿಗಳು ಮತ್ತು ಗೃಹ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ನೊಂದ ನೌಕರರಿಗೆ ಸೂಕ್ತ ಭರವಸೆ ನೀಡಬೇಕು, ಆರೋಪಿಗಳು ನಿರಂತರವಾಗಿ ಇಂತಹ ಕೃತ್ಯದಲ್ಲಿ ತೊಡಗಿರುವುದರಿಂದ ಗೂಂಡಾಕಾಯ್ದೆಯಡಿ ಬಂಧಿಸಬೇಕು, ಶಿವರಾಜ್ ಬಿ.ಪಾಟೀಲ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿರುವ ಆದೇಶವನ್ನು ಕೂಡಲೇ ರದ್ದುಪಡಿಸಿ ಸಮರ್ಥ ಅಧಿಕಾರಿಯನ್ನು ಆರ್‍ಟಿಒ ಸ್ಥಾನಕ್ಕೆ ನೇಮಕ ಮಾಡಬೇಕು. ಹಲ್ಲೆಕೋರ ವಿಶ್ವಾಸ್ ರವರ ಪಾಲಿಕೆ ಸದಸ್ಯತ್ವ ರದ್ದು ಪಡಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಲಿತ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಬಸಪ್ಪ, ತಾಲೂಕು ಅಧ್ಯಕ್ಷೆ ಭಾರತಿ, ಕಾರ್ಯದರ್ಶಿ ಚನ್ನಪ್ಪ, ಪ್ರಗತಿ ಪರ ಸಂಘಟನೆಯ ಮುಖಂಡ ಡಿ.ಸಿ.ಮಾಯಣ್ಣ, ಮಾನವ ಹಕ್ಕುಗಳ ಹೋರಾಟ ಸಮಿತಿಯ ಬಿ.ಎನ್.ರಾಜು, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್, ಕರ್ನಾಟಕ ರಕ್ಷಣ ವೇದಿಕೆಯ ಬಿ.ವಿ.ಗಿರೀಶ್, ಛಲವಾದಿ ಮಹಾಸಭಾದ ಬಸವರಾಜ್, ಕಾಂಗ್ರೆಸ್ ಪಕ್ಷದ ಪಜಾ/ಪಪಂ ವಿಭಾಗದ ಅಧ್ಯಕ್ಷ ಅರುಣ್, ದಸಂಸ ಮುಖಂಡರಾದ ವಿನೋದ್, ದೂಗುರು ಪರಮೇಶ್, ಏಳುಮಲೈ, ನಿಂಗಪ್ಪ, ಲಕ್ಷ್ಮಣ, ಶೇಷಪ್ಪ ಮುಂತಾದ ನೂರಾರು ಮಂದಿ ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post