ಭದ್ರಾವತಿ: ರಾಜ್ಯದಲ್ಲಿ ಮಳೆ ಹಾವಳಿಯ ನೆರೆ-ಬರದಿಂದ ತತ್ತರಿಸಿದ್ದಾರೆ. ಬರಗಾಲ ಬಂದಾಗ ಕೇಂದ್ರಕ್ಕೆ ಪರಿಹಾರಕ್ಕಾಗಿ ಬೇಡಿಕೆ ಇಡುತ್ತೇವೆ. ಅದು ಶಾಶ್ವತ ಪರಿಹಾರವಾಗುವುದಿಲ್ಲ. ಶಾಶ್ವತ ಪರಿಹಾರ ಕಲ್ಪಿಸುವಂತೆ ಸರಕಾರಕ್ಕೆ ಬೇಡಿಕೆ ಇಟ್ಟರು ಪೂರ್ಣ ಪ್ರಮಾಣದ ಹಣ ಬಿಡುಗಡೆ ಮಾಡದಿರುವುದರಿಂದ ಸಮಸ್ಯೆಗಳು ಉಳಿದಿರುತ್ತವೆ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಶ್ರೀ 1108 ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.
ಅವರು ನಗರದ ಜನ್ನಾಪುರ ಮಲ್ಲೇಶ್ವರ ಸಮುದಾಯ ಭವನದಲ್ಲಿ ತಾಲೂಕು ಸಾಧು ವೀರಶೈವ ಸಮಾಜ, ತರಳಬಾಳು ಯುವ ವೇದಿಕೆ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 27 ನೇ ಶ್ರದ್ದಾಂಜಲಿ ಸಮಾರಂಭದ ದಾಸೋಹಕ್ಕೆ ಭಕ್ತಿ ಸಮರ್ಪಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬರಪರಿಹಾರಕ್ಕಾಗಿ ಸರಕಾರಕ್ಕೆ ನೀರಾವರಿ ಯೋಜನೆ ಕಲ್ಪಿಸುವಂತೆ ಒತ್ತಡ ಏರಲಾಗಿ ಮುಖ್ಯಮಂತ್ರಿ ಯಡಿಯೂರಪ್ಪ 660 ಕೋಟಿ ರೂಗಳ ಪೂರ್ಣ ಪ್ರಮಾಣದ ಹಣ ಬಿಡುಗಡೆ ಮಾಡಿದ್ದಾರೆ. ನಮ್ಮ ಜನ ದುಡಿಯುವವರಿದ್ದು ಮುಂದೆ ಯಾವ ಕಾರಣಕ್ಕೂ ಕೇಂದ್ರಕ್ಕೆ ಪರಿಹಾರ ನೀಡುವಂತೆ ಬೇಡಿಕೆ ಇಡುವ ಪ್ರಶ್ನೆಯೆ ಇಲ್ಲ. ರಾಜ್ಯ ಸರಕಾರದ ಚಳಿಗಾಲ ಹಾಗೂ ಮಳೆಗಾಲದ ಎರಡು ಅಧಿವೇಶನಗಳು ನಡೆಯುತ್ತವೆ. ಆದರೆ ನಮ್ಮ ಮಠದಿಂದ ಅಧಿವೇಶನದಂತೆ ನಡೆಯುವ ದೊಡ್ಡ ಗುರುಗಳ ಭಕ್ತಿ ಸಮರ್ಪಣಾ ಶೃದ್ದಾಂಜಲಿ ಕಾರ್ಯಕ್ರಮವು ಸಿರಿಗೆರೆಯೂ ಸೇರಿದಂತೆ 4 ಕಡೆ ನಡೆಯುತ್ತವೆ. ಇಂತಹ ಭಕ್ತಿ ಸಮರ್ಪಣೆ ಸಮಾವೇಶಗಳು ವಿನೂತ ಭಾವನೆಯಿಂದ ನಡೆಯಬೇಕೆ ಹೊರತು ಅಹಂಕಾರದ ಸಮರ್ಪಣೆಯಾಗಬಾರದು. ಯುವ ಪೀಳಿಗೆ ಎಚ್ಚೆತ್ತು ಹಿರಿಯರ ಮಾರ್ಗದರ್ಶನದಲ್ಲಿ ಸಮಾಜ ಸೇವೆ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಬದುಕಿನ ಎಲ್ಲಾ ರಂಗಗಳಲ್ಲಿಯೂ ಜನರನ್ನು ಹುರಿದುಂಬಿಸಿ ಸಾಧಕರನ್ನಾಗಿಸಿದವರು ಲಿಂಗೈಕ್ಯ ಗುರುಗಳು. ಸ್ವಾತಂತ್ರ್ಯ ಪೂರ್ವದಲ್ಲಿ ಅವರು ಮಾಡಿದ ಸಾಧನೆ, ಎಲ್ಲಾ ವರ್ಗೀಯ ಮಕ್ಕಳಿಗೆ ನೀಡಿರುವ ಊಟ ವಸತಿ ಸೌಕರ್ಯಗಳನ್ನು ಸಮಾಜ ಇಂದು ನೆನಪು ಮಾಡಿಕೊಳ್ಳುತ್ತದೆ. ಅಂದು ಅವರು ನೀರಾವರಿ ಯೋಜನೆಯನ್ನು ಜಾರಿಗೆ ತರದಿದ್ದರೆ ಇಂದು ಸಿರಿಗೆರೆಯ ಜನ ಗುಳೇ ಹೊರಡುವಂತಹ ಪರಿಸ್ಥಿತಿ ಎದುರಾಗುತ್ತಿತ್ತು. ಸೆ.24 ರಂದು ಸಿರಿಗೆರೆಯಲ್ಲಿ ಶಿವಕುಮಾರ ಮಹಾಸ್ವಾಮಿಗಳ ಶೃದ್ದಾಂಜಲಿ ಸಮಾರಂಭ ನಡೆಯಲಿದ್ದು ಎಲ್ಲಾ ಭಕ್ತರೂ ಆಗಮಿಸಬೇಕೆಂದರು.
ಬರಗಾಲವನ್ನು ತಪ್ಪಿಸಲು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಗಳೂರಿನ ತರಳಬಾಳು ಹುಣ್ಣಿಮೆಯ ಸಮ್ಮೇಳನದಲ್ಲಿ ಬೇಡಿಕೆ ಇಟ್ಟಿದ್ದ ಜಗಳೂರು ಹಾಗು ಭರಮಸಾಗರ ಏತ ನೀರಾವರಿ ಯೋಜನೆಗಳಿಗೆ ಕ್ಯಾಬಿನೆಟ್‍ನಲ್ಲಿ ಅನುಮೋದನೆ ದೊರೆತಿದ್ದು ಹಣ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಗುವುದು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ ಭಕ್ತಿ ಸಮರ್ಪಣಾ ಕಾರ್ಯಗಳು ಸದ್ಭಕ್ತರ ಜ್ಞಾನವನ್ನು ಹೆಚ್ಚಿಸುತ್ತದೆ. ನಡೆದಾಡುವ ದೇವರೆನಿಸಿಕೊಂಡಿರುವ ಶ್ರೀಗಳು ನೆರೆ ಸಂತ್ರಸ್ಥರಿಗೆ ಸ್ವಾಭಿಮಾನದ ಬದುಕು ಸಾಗಿಸಲು 1 ವರ್ಷಕ್ಕಾಗುವಷ್ಟು ಆಹಾರ ಬಟ್ಟೆ ಸೇರಿದಂತೆ ಇನ್ನಿತರೆ ವಸ್ತುಗಳನ್ನು ನೀಡಿ ಸಕಲವ್ಯವಸ್ಥೆ ಕಲ್ಪಿಸಿಕೊಟ್ಟಿರುವ ಅವರ ಮಹಾತ್ಕಾರ್ಯವನ್ನು ಯಾರೂ ಮರೆಯುವಂತಿಲ್ಲ. ಖಾದಿ, ಖಾಕಿ ಸೇರಿದಂತೆ ಎಲ್ಲರನ್ನೂ ಎಚ್ಚರಿಸುವ ಕೆಲಸ ಶ್ರೀಗಳು ಮಾಡುತ್ತಿದ್ದಾರೆ ಎಂದ ಅವರು ವಿಐಎಸ್‍ಎಲ್ ಕಾರ್ಖಾನೆಯನ್ನು ಅಭಿವೃದ್ದಿಗೊಳಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಕಾರ್ಮಿಕರು, ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಶಾಸಕ ಬಿ.ಕೆ. ಸಂಗಮೇಶ್ವರ್ ಮಾತನಾಡಿ, ಲಿಂಗೈಕ್ಯ ಶ್ರೀಗಳು ನೇರ ನುಡಿಯ ಸಾಮಾಜಿಕ ಕಳಕಳಿಹೊತ್ತು ಪಾದರಸದಂತೆ ಕೆಲಸ ಮಾಡಿದ್ದಾರೆ ಎಂದರು.
ಸಾಧು ವೀರಶೈವ ಸಮಾಜದ ಅಧ್ಯಕ್ಷೆ ಯಶೋಧ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೊಸಮನೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ. ದನಂಜಯ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ, ಸಮಾಜದ ಮುಖಂಡರಾದ ಎಂ.ವಿರೂಪಾಕ್ಷಪ್ಪ, ಕೆ.ಸಿ.ವೀರಭದ್ರಪ್ಪ, ಹೆಚ್.ಎಲ್. ಷಡಾಕ್ಷರಿ, ಕೆ.ಜಿ.ರವಿಕುಮಾರ್, ಎಚ್.ಎಸ್. ಸಂಜೀವಕುಮಾರ್, ಶೇಖರಪ್ಪ, ಮಂಗೋಟೆ ರುದ್ರೇಶ್, ಹೆಬ್ಬಂಡಿ ಲೋಕೇಶಪ್ಪ, ಎಚ್.ಆರ್. ಬಸವರಾಜಪ್ಪ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post