ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಸಮಾಜಕ್ಕೆ ನಾವೇನಾದರೂ ಕೊಟ್ಟರೆ, ಸಮಾಜ ನಮಗೆ ಏನಾದರೂ ಕೊಡುತ್ತದೆ ಎಂದು ನಂಬಿ ಜನರ ಅಲ್ಪ ಸೇವೆಯಲ್ಲಿ ತೊಡಗಿಕೊಂಡಿರುವ ನಾನು ಎಲ್ಲರ ಪ್ರೀತಿ ಕಂಡು ಮೂಕವಿಸ್ಮಿತನಾಗಿದ್ದೇನೆ ಎಂದು ಸ್ನೇಹ ಜೀವಿ ಉಮೇಶ್ ಭಾವುಕ ಮಾತುಗಳನ್ನಾಡಿದ್ದಾರೆ.
ತಮ್ಮ 46ನೆಯ ಜನ್ಮದಿನದ ನಿಮಿತ್ತ ಚಂದ್ರಾಲಯದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ನಂತರ ಕಲ್ಪ ಮೀಡಿಯಾ ಹೌಸ್ ಜೊತೆಯಲ್ಲಿ ಅವರು ಮಾತನಾಡಿದರು.
ನಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನ ಒಂದು ರೀತಿಯ ಸಂತೃಪ್ತ ಭಾವನೆಯನ್ನು ನೀಡಿದರೆ ಜನರ ಸೇವೆ ಧನ್ಯತಾ ಭಾವನೆಯನ್ನು ನೀಡುತ್ತದೆ. ನನಗೆ ಎಲ್ಲವನ್ನೂ ನೀಡಿರುವ ಸಮಾಜಕ್ಕೆ ನಾನು ನೀಡಿರುವುದು ಅತ್ಯಲ್ಪ ಮಾತ್ರ. ಆದರೆ, ನನ್ನ ಅಳಿಲು ಸೇವೆ ಗುರುತಿಸಿದ ಜನರು ಇಷ್ಟು ಪ್ರೀತಿ ತೋರುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಲು ನನ್ನಲ್ಲಿ ಪದಗಳೇ ಇಲ್ಲ ಎಂದರು.
ಇಷ್ಟೊಂದು ಅಭಿಮಾನಿಗಳು ಈ ರೀತಿ ನನ್ನ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ಹಾಗೂ ತೋರುತ್ತಿರುವ ಪ್ರೀತಿಗೆ ನಾನು ಸದಾ ಅಭಾರಿಯಾಗಿದ್ದೇನೆ. ಈ ಸಂತಸದ ಕ್ಷಣ ಹಾಗೂ ದಿನ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಜನಸೇವೆಯಲ್ಲಿ ತೊಡಗಿಕೊಳ್ಳುವ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಉಮೇಶ್ ಅವರ ಜನ್ಮದಿನದ ಅಂಗವಾಗಿ ಅವರ ನಿವಾಸದಲ್ಲಿ ಸತ್ಯನಾರಾಯಣ ಪೂಜೆಯನ್ನು ಏರ್ಪಡಿಸಲಾಗಿತ್ತು.
ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಮಾದರಿಯಾದರು.
ಸಾವಿರಾರು ಅಭಿಮಾನಿಗಳು ಹಾಗೂ ನಗರದ ಗಣ್ಯರು ಉಮೇಶ್ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಕ್ ಕತ್ತರಿಸಿ, ಹಾರ, ತುರಾಯಿ, ಶಾಲು ಹೊದಿಸಿ ಶುಭ ಕೋರಿದರು.
ಸ್ನೇಹ ಜೀವಿ ಬಳಗದ ಸತೀಶ್ ಸೇರಿದಂತೆ ಸದಸ್ಯರು ಹಾಗೂ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post