ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಉಕ್ಕಿನ ನಗರಿ ಭದ್ರಾವತಿಯಲ್ಲಿ ವೈಕುಂಠ ಏಕಾದಶಿ ಸಂಭ್ರಮದಲ್ಲಿ ಮಿಂದೆದಿದ್ದು, ಶ್ರೀಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಮಾತ್ರ ಸರಳವಾಗಿ ಆಚರಿಸಿದರೆ, ಉಳಿದ ದೇಗುಲಗಳಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ
ಕ್ಷೇತ್ರದ ಪುರಾಣ ಪ್ರಸಿದ್ಧ ಹಾಗೂ ಮುಜರಾಯಿ ಇಲಾಖೆಗೆ ಸೇರಿದ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷಇಡಿಯ ಜಿಲ್ಲೆಯಲ್ಲಿಯೇ ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ತಾಲೂಕು ಮಾತ್ರವಲ್ಲದೇ, ಜಿಲ್ಲೆ ಹಾಗೂ ರಾಜ್ಯದ ಹಲವು ಕಡೆಗಳಿಂದ ದರ್ಶನಕ್ಕಾಗಿ ಭಕ್ತರು ಆಗಮಿಸುತ್ತಿದ್ದರು. ಆದರೆ ಈಬಾರಿ ಕೋವಿಡ್19 ಕಾರಣ ವೈಕುಂಠ ಏಕಾದಶಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.
ಬೆಳಗಿನ ಜಾವ ನಾಲ್ಕು ಗಂಟೆಗೆ ದೇವಾಲಯದ ಒಳಗೆ ಮೂಲದೇವರಾದ ಶ್ರೀಲಕ್ಷ್ಮೀನರಸಿಂಹ ಸ್ವಾಮಿ, ಪುರುಷೋತ್ತಮ, ವೇಣುಗೋಪಾಲ ಕೃಷ್ಣನಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ನಂತರ ಒಳಪ್ರಾಕಾರದಲ್ಲಿ ಚಂಡೆ, ಮಂಗಳವಾದ್ಯ ಸಹಿತ ಉತ್ಸವವನ್ನು ನಡೆಸಿ, ಆರು ಗಂಟೆಯಿಂದ ದೇವಾಲಯದೊಳಗೆ ಸಾರ್ವಜನಿಕರನ್ನು ಸರತಿಯ ಸಾಲಿನಲ್ಲಿ ದರ್ಶನಕ್ಕೆ ಬಿಡಲಾಯಿತು. ಭಕ್ತಾದಿಗಳು ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ದೇವಾಲಯದೊಳಗೆ ಪ್ರವೇಶಿಸಿ ದೇವರ ದರ್ಶನ ಪಡೆದರು. ಶಾಸಕ ಬಿ.ಕೆ. ಸಂಗಮೇಶ್ವರ್, ತಹಶೀಲ್ದಾರ್ ಸಂತೋಷ್ ಕುಮಾರ್, ಡಿವೈಎಸ್‌ಪಿ ಕೃಷ್ಣಮೂರ್ತಿ ಸೇರಿದಂತೆ ಹಲವು ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಸಹಾಯಕ ಅರ್ಚಕ ಶ್ರೀನಿವಾಸ್ ಪೂಜಾ ಕೈಂಕರ್ಯ ನೆರವೇರಿಸಿದರು. ಅರ್ಚಕರ ಸಹೋದರರಾದ ನಾರಾಯಣಾಚಾರ್, ನರಸಿಂಹಾಚಾರ್, ಬ್ರಾಹ್ಮಣ ಸಂಘದ ಅಧ್ಯಕ್ಷ ಜನಾರ್ಧನ ಅಯ್ಯಂಗಾರ್, ಉಪಾಧ್ಯಕ್ಷ ರಮಾಕಾಂತ್, ಇಂದ್ರಸೇನಾ ಹಾಗೂ ಕೃಷ್ಣಪ್ಪ, ವೇದಪಾಠ ಶಾಲೆಯ ರವಿ, ಶ್ರೀನಿಧಿ, ಶ್ರೀಹರಿ ಅಭಿರಾಮ ಸೇರಿದಂತೆ ಹಲವು ಭಕ್ತಾದಿಗಳು ಬೆಳಗಿನ ಉತ್ಸವದಲ್ಲಿ ಭಾಗಿಯಾಗಿದ್ದರು.
ತಿರುಮಲ ವೆಂಕಟೇಶ್ವರ ದೇವಾಲಯ, ಹುತ್ತಾ
ಹುತ್ತಾ ಬಸ್ ನಿಲ್ದಾಣದ ಸಮೀಪವಿರುವ ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಪ್ರತಿ ವರ್ಷದಂತೆ ದೇವಾಲಯದ ಒಳಗೆ ಮತ್ತು ಹೊರಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದರ್ಶನಕ್ಕೆ ಬಂದ ಭಕ್ತಾದಿಗಳಿಗೆ ಲಾಡು ಉಂಡೆ ಪ್ರಸಾದ ಉಚಿತವಾಗಿ ವಿತರಿಸಲಾಯಿತು. ದೇವಾಲಯದ ಅರ್ಚಕರು ಪೂಜಾ ಕೈಂಕರ್ಯ ನೆರವೇರಿಸಿದರು. ದೇವಾಲಯದ ಸಮಿತಿಯವರು ಕಾರ್ಯಕ್ರಮದ ಉಸ್ತುವಾರಿ ನಿರ್ವಹಿಸಿದರು.
ಶ್ರೀನಿವಾಸ ದೇವಾಲಯ, ಮಿಲ್ಟ್ರಿ ಕ್ಯಾಂಪ್
ಮಿಲ್ಟ್ರಿಕ್ಯಾಂಪ್’ನಲ್ಲಿರುವ ಶ್ರೀನಿವಾಸ ದೇವಾಲಯದಲ್ಲಿ ಸ್ವಾಮಿಗೆ ಆಕರ್ಷಕವಾಗಿ ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳಿಗೆ ಲಾಡುಪ್ರಸಾದ ವಿತರಿಸಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಡಿವೈಎಸ್’ಪಿ ಸೇರಿದಂತೆ ಹಲವು ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಶ್ರೀನಿವಾಸ ಪದ್ಮಾವತಿ ದೇವಾಲಯ, ಬಾರಂದೂರು
ಬಾರಂದೂರಿನಲ್ಲಿರುವ ಶ್ರೀನಿವಾಸ ಪದ್ಮಾವತಿ ದೇವಾಲಯದಲ್ಲಿ, ತಿಮ್ಲಾಪುರದ ಶ್ರೀನಿವಾಸ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ನಡೆಸಲಾಯಿತು. ಶನಿವಾರ ಮುಕ್ಕೋಟಿ ದ್ವಾದಶಿ ಪ್ರಯಕ್ತ ಈ ಅಲಂಕಾರಗಳು ಇರುತ್ತವೆ ಎಂದು ಆಯಾ ದೇವಾಲಯಗಳ ಅರ್ಚಕರು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post