ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿ (Bhadravathi) ತಾಲ್ಲೂಕಿನಲ್ಲಿ 11 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 49 ವರ್ಷದ ವ್ಯಕ್ತಿಗೆ ಶಿವಮೊಗ್ಗದ (Shivamogga) ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (FTSC-1) 5 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ₹15 ಸಾವಿರ ದಂಡ ವಿಧಿಸಿದೆ.
2024ರಲ್ಲಿ ಭದ್ರಾವತಿ ತಾಲ್ಲೂಕಿನ ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಪಿಎಸ್‌ಐ ಕವಿತಾ ಅವರು ತನಿಖೆಯನ್ನು ಪೂರ್ಣಗೊಳಿಸಿ, ಲಭ್ಯವಾದ ಸಾಕ್ಷ್ಯಾಧಾರಗಳನ್ನು ಆಧರಿಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
Bhadravathi : ಆರೋಪಗಳು ಸಾಬೀತು
ಪ್ರಕರಣದ ವಿಚಾರಣೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (FTSC-1) ನಲ್ಲಿ ನಡೆಯಿತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶ್ರೀಧರ್ ಅವರು ವಾದ ಮಂಡಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಲಯವು ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿದೆ.
Also read>> ಅಭಿನಯದ ಜೊತೆಗೆ ವ್ಯಕ್ತಿತ್ವದ ಬಹುದೊಡ್ಡ ವ್ಯಕ್ತಿ ಅನಂತನಾಗ್: ಸುರೇಶ್ ಋಗ್ವೇದಿ
ಈ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ನಿಂಗನಗೌಡ ಭ. ಪಾಟೀಲ್ ಅವರು ಆರೋಪಿಗೆ 5 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ₹15,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಇದೇ ವೇಳೆ ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ₹50,000 ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತನಿಖೆ ಪೂರ್ಣಗೊಳಿಸಿ ದೋಷಾರೋಪಣ ಪತ್ರ ಸಲ್ಲಿಸಿದ ತನಿಖಾಧಿಕಾರಿ ಹಾಗೂ ಪ್ರಕರಣವನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ಮಂಡಿಸಿದ ಸರ್ಕಾರಿ ಅಭಿಯೋಜಕರ ವಾದದ ಹಿನ್ನೆಲೆಯಲ್ಲಿ ಆರೋಪ ಸಾಬೀತಾಗಿ ಶಿಕ್ಷೆ ಪ್ರಕಟವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









