ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
(Shivamogga) ನಗರದಲ್ಲಿ ಸೆಪ್ಟೆಂಬರ್ 25ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಜಿಲ್ಲಾಡಳಿತವು ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಗೆ ನಿರ್ಬಂಧ ವಿಧಿಸಿದೆ. ಇದರೊಂದಿಗೆ ವಿವಿಧ ದಿಕ್ಕುಗಳಿಂದ ಶಿವಮೊಗ್ಗ ನಗರ ಪ್ರವೇಶಿಸುವ ಹಾಗೂ ನಗರದಿಂದ ಹೊರಹೋಗುವ ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನು (Traffic Divert) ನಿಗದಿಪಡಿಸಲಾಗಿದೆ.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಮೋಟಾರು ವಾಹನ ಕಾಯ್ದೆ-1988ರ ಕಲಂ 116 ಮತ್ತು 117ರ ಅನ್ವಯ ತಾತ್ಕಾಲಿಕ ಅಧಿಸೂಚನೆ ಹೊರಡಿಸಿದ್ದು, ಸೆ.25ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಈ ಸಂಚಾರ ನಿರ್ಬಂಧ, ವಾಹನ ನಿಲುಗಡೆ ನಿಷೇಧ ಹಾಗೂ ಮಾರ್ಗ ಬದಲಾವಣೆಗಳು ಜಾರಿಯಲ್ಲಿರಲಿವೆ.
ಮೆರವಣಿಗೆ ಸಾಗುವ ಮಾರ್ಗ
ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯು ಭೀಮೇಶ್ವರ ದೇವಸ್ಥಾನದಿಂದ ಆರಂಭವಾಗಲಿದೆ. ಅಲ್ಲಿಂದ ಎನ್‌ಪಿಎಂ ಮುಖ್ಯ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್ ಮುಖ್ಯ ರಸ್ತೆ, ಎಸ್.ಎನ್. ಸರ್ಕಲ್, ಎ.ಎ. ಸರ್ಕಲ್, ನೆಹರು ರಸ್ತೆ, ಗೋಪಿ ಸರ್ಕಲ್, ದುರ್ಗಿಗುಡಿ ಮಾರ್ಗವಾಗಿ ಮಹಾವೀರ ಸರ್ಕಲ್, ಡಿವಿಎಸ್ ಸರ್ಕಲ್, ಕಾನ್ವೆಂಟ್ ರಸ್ತೆ ಹಾಗೂ ಕೋಟೆ ರಸ್ತೆ ಮೂಲಕ ಸಾಗಿ ಮತ್ತೆ ಭೀಮೇಶ್ವರ ದೇವಸ್ಥಾನದ ಸಮೀಪದ ತುಂಗಾ ನದಿಯಲ್ಲಿ ಗಣಪತಿ ವಿಸರ್ಜನೆ ನಡೆಯಲಿದೆ.
ಮೆರವಣಿಗೆ ಸಾಗುವ ಮಾರ್ಗ ಹಾಗೂ ಅದರ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಎಲ್ಲಾ ವಾಹನಗಳ ಸಂಚಾರ ಮತ್ತು ನಿಲುಗಡೆಯನ್ನು ನಿಷೇಧಿಸಲಾಗಿದೆ.
ಯಾವ ವಾಹನಗಳಿಗೆ ಯಾವ ಮಾರ್ಗ?
ಬೆಂಗಳೂರು, ಭದ್ರಾವತಿ ಹಾಗೂ ಎನ್.ಆರ್.ಪುರ ಕಡೆಯಿಂದ ಬರುವ ವಾಹನಗಳು:
ಬೆಂಗಳೂರು, ಭದ್ರಾವತಿ ಮತ್ತು ಎನ್.ಆರ್.ಪುರ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಭಾರೀ ವಾಹನಗಳು, ಬಸ್‌ಗಳು, ಸಿಟಿ ಬಸ್‌ಗಳು ಹಾಗೂ ಕಾರುಗಳು ಎಂ.ಆರ್.ಎಸ್. ಸರ್ಕಲ್‌ನಿಂದ ಬೈಪಾಸ್ ರಸ್ತೆ ಮೂಲಕ ಸಂಚರಿಸಬೇಕು.
Shivamogga : ಚಿತ್ರದುರ್ಗ, ಹೊಳೆಹೊನ್ನೂರು ಕಡೆಯಿಂದ ಬರುವ ವಾಹನಗಳು:
ಚಿತ್ರದುರ್ಗ ಹಾಗೂ ಹೊಳೆಹೊನ್ನೂರು ಕಡೆಯಿಂದ ಬರುವ ಮತ್ತು ಆ ಮಾರ್ಗವಾಗಿ ತೆರಳುವ ಭಾರೀ ವಾಹನಗಳು ಹಾಗೂ ಬಸ್‌ಗಳು ಎಂ.ಆರ್.ಎಸ್. ಸರ್ಕಲ್ ಮೂಲಕ ಬೈಪಾಸ್ ರಸ್ತೆಯನ್ನು ಬಳಸಬೇಕು.
ಹೊನ್ನಾಳಿ, ಹರಿಹರ, ದಾವಣಗೆರೆ ಕಡೆಯಿಂದ ಬರುವ ವಾಹನಗಳು:
ಈ ಭಾಗಗಳಿಂದ ಬರುವ ಮತ್ತು ಹೋಗುವ ಭಾರೀ ವಾಹನಗಳು ಹಾಗೂ ಬಸ್‌ಗಳು ಸಂಗೊಳ್ಳಿರಾಯಣ್ಣ ಸರ್ಕಲ್, ಶಂಕರಮಠ ಸರ್ಕಲ್, ಹೊಳೆಹೊನ್ನೂರು ಸರ್ಕಲ್ ಹಾಗೂ ವಿದ್ಯಾನಗರದ ಎಂ.ಆರ್.ಎಸ್. ಸರ್ಕಲ್ ಮೂಲಕ ಬೈಪಾಸ್ ರಸ್ತೆಗೆ ತೆರಳಬೇಕು.
Also read>> ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 5 ವರ್ಷ ಜೈಲು, ₹15 ಸಾವಿರ ದಂಡ
ಬಸ್‌ಗಳಿಗೆ ಪರ್ಯಾಯ ಮಾರ್ಗ
ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಗಳಿಂದ ಹೊನ್ನಾಳಿ, ಶಿಕಾರಿಪುರ, ಸೊರಬ, ಹರಿಹರ ಮತ್ತು ದಾವಣಗೆರೆ ಕಡೆಗೆ ತೆರಳುವ ಎಲ್ಲಾ ಬಸ್‌ಗಳು ಹಾಗೂ ಭಾರೀ ಸರಕು ವಾಹನಗಳು ಸಾಗರ ರಸ್ತೆ, ಹೆಲಿಪ್ಯಾಡ್ ಸರ್ಕಲ್, ಆಲ್ಕೋಳ ಸರ್ಕಲ್, ಪೊಲೀಸ್ ಚೌಕಿ, ರಾಜ್‌ಕುಮಾರ್ ಸರ್ಕಲ್, ಬೊಮ್ಮನಕಟ್ಟೆ ಹಾಗೂ ಸವಳಂಗ ರಸ್ತೆ ಮೂಲಕ ಸಂಚರಿಸಬೇಕು.
ಇನ್ನು ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಗಳಿಂದ ಬೆಂಗಳೂರು ಹಾಗೂ ಭದ್ರಾವತಿ ಕಡೆಗೆ ತೆರಳುವ ಎಲ್ಲಾ ವಾಹನಗಳು ಬೈಪಾಸ್ ರಸ್ತೆ ಮೂಲಕ ಎಂ.ಆರ್.ಎಸ್. ಸರ್ಕಲ್ ಮಾರ್ಗವಾಗಿ ಸಾಗಬೇಕು.
ಶಿಕಾರಿಪುರ, ಸೊರಬ ಹಾಗೂ ಆನವಟ್ಟಿ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಮತ್ತು ನಗರದಿಂದ ಹೊರಹೋಗುವ ಬಸ್‌ಗಳು ಹಾಗೂ ಭಾರೀ ವಾಹನಗಳು ಉಷಾ ನರ್ಸಿಂಗ್ ಹೋಂ ಸರ್ಕಲ್, ಲಕ್ಷ್ಮೀ ಟಾಕೀಸ್ ಸರ್ಕಲ್, ಪೊಲೀಸ್ ಚೌಕಿ ಹಾಗೂ ಆಲ್ಕೋಳ ಸರ್ಕಲ್ ಮೂಲಕ ಸಾಗರ ರಸ್ತೆಯನ್ನು ಬಳಸಬೇಕು.
ಕೋಟೆ ರಸ್ತೆ, ಓಲ್ಡ್ ಬಾರ್‌ಲೈನ್ ರಸ್ತೆಯಲ್ಲಿ ಸಂಚಾರ ಬಂದ್
ಮೆರವಣಿಗೆಯ ಹಿನ್ನೆಲೆಯಲ್ಲಿ ಕೋಟೆ ರಸ್ತೆ ಹಾಗೂ ಓಲ್ಡ್ ಬಾರ್‌ಲೈನ್ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮೆರವಣಿಗೆ ಮುಗಿಯುವವರೆಗೆ ಈ ಪ್ರದೇಶಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಗೆ ಅವಕಾಶ ಇರುವುದಿಲ್ಲ.
ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಡಳಿತ ಈ ತಾತ್ಕಾಲಿಕ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ. ಮೆರವಣಿಗೆಯ ಸಂದರ್ಭದಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ವಾಹನ ಸವಾರರು ಪೊಲೀಸ್ ಇಲಾಖೆ ಹಾಗೂ ಸಂಚಾರ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.
ತುರ್ತು ಸೇವಾ ವಾಹನಗಳಿಗೆ ವಿನಾಯಿತಿ
ಈ ಎಲ್ಲಾ ಸಂಚಾರ ನಿರ್ಬಂಧಗಳು ಮತ್ತು ಮಾರ್ಗ ಬದಲಾವಣೆಗಳಿಂದ ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು, ಆಂಬುಲೆನ್ಸ್‌ಗಳು ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳಿಗೆ ಅಗತ್ಯಕ್ಕೆ ಅನುಗುಣವಾಗಿ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







