ನವದೆಹಲಿ: ಭಾರತೀಯ ಯೋಧರ ಮೇಲೆ ಜೈಷ್ ಉಗ್ರರು ನಡೆಸಿದ ಭೀಕರ ಆತ್ಮಹತ್ಯಾ ದಾಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಎನ್’ಐಎ ವಶಕ್ಕೆ ಪಡೆದುಕೊಂಡಿದ್ದು, ದಾಳಿ ನಡೆಸಿದ ಉಗ್ರ ಕಾರು ಚಲಾಯಿಸಿಕೊಂಡು ಬರುತ್ತಿರುವ ದೃಶ್ಯಗಳು ದಾಖಲಾಗಿವೆ ಎಂದು ವರದಿಯಾಗಿದೆ.
ಈ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕೆಂಪು ಈಕೋ ಕಾರು ಸಂಚರಿಸಿರುವುದು ದಾಖಲಾಗಿದ್ದು, ಇದರಲ್ಲಿ ಜೈಶ್-ಎ-ಮೊಹಮ್ಮದ್ ಆತ್ಮಹತ್ಯೆ ಬಾಂಬ್ದಾಳಿಯ ಆದಿಲ್ ಅಹ್ಮದ್ ದಾರ್ ಸಹ ವಾಹನವನ್ನು ಚಾಲನೆ ಮಾಡಿರುವುದು ಸ್ಪಷ್ಟವಾಗಿದೆ. ವೀಡಿಯೊ ತುಣುಕನ್ನು ಆಧರಿಸಿ, ಎನ್’ಐಎ ಕಾರಿನ ಮಾಲೀಕರನ್ನು ಗುರುತಿಸಿದ್ದು, ದಾಳಿಯ ದಿನದಿಂದ ಮಾಲೀಕರು ಕಾಣೆಯಾಗಿದ್ದಾರೆಂದು ಹೇಳಲಾಗಿದೆ.
ದಾಳಿಯಲ್ಲಿ ಬಳಸಲಾದ ಕಾರು 2010-11ರ ಮಾದರಿಯದ್ದಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.
ಇನ್ನು ಪ್ರಕರಣ ಕುರಿತಂತೆ ಪ್ರತ್ಯಕ್ಷ ಸಾಕ್ಷಿಗಳ ದಾಖಲೆಗಳ ಪ್ರಕಾರ, ಕೆಂಪು ಈಕೋ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ಪದೇ ಪದೇ ಬೆಂಗಾವಲು ಪಡೆಗಳ ಬಳಿ ಸಾಗುತ್ತಿದ್ದ. ಈ ವೇಳೆ ದೂರ ತೆರಳುವಂತೆ ಮೂರು ನಾಲ್ಕು ಬಾರಿ ಆತನಿಗೆ ಎಚ್ಚರ ನೀಡಲಾಗಿತ್ತು. ಆದರೆ, ಇದನ್ನು ಲೆಕ್ಕಿಸದ ಆತ ವೇಗವನ್ನು ಹೆಚ್ಚಿಸಿ, ಅಂತಿಮವಾಗಿ ಸೇನಾ ವಾಹನಕ್ಕೆ ಡಿಕ್ಕಿ ಹೊಡೆಸಿ, 42 ಯೋಧರನ್ನು ಬಲಿ ಪಡೆಯವಲ್ಲಿ ಯಶಸ್ವಿಯಾದ ಎಂದು ವರದಿಯಲ್ಲಿ ಉಲ್ಲೆಖಿಸಲಾಗಿದೆ.

















