ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಶಿವಾಜಿನಗರದ ಬ್ರಾಡ್ ವೇ ರಸ್ತೆಯಲ್ಲಿರುವ ಬಿಬಿಎಂಪಿಗೆ ಸೇರಿದ ಕಟ್ಟಡವನ್ನು ಸುಸಜ್ಜಿತ ಕೋವಿಡ್ ಆಸ್ಪತ್ರೆಯಾಗಿ ಸಜ್ಜುಗೊಳಿಸಲಾಗುತ್ತಿದೆ.
ಇಲ್ಲಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಸುಧಾಕರ್ ಅವರು, ಆಸ್ಪತ್ರೆಗೆ ಅಗತ್ಯವಿರುವ 30 ಕೋಟಿ ವೆಚ್ಚದ ಮೂಲಸೌಕರ್ಯವನ್ನು ಪ್ರತಿಷ್ಠಿತ ಇನ್ಫೋಸಿಸ್ ಫೌಂಡೇಷನ್ನಿನಿಂದ ಒದಗಿಸಲಾಗುತ್ತಿದ್ದು ಶೀಘ್ರದಲ್ಲೇ ಪೂರ್ಣ ಪ್ರಮಾಣದ ಕೋವಿಡ್ ಆಸ್ಪತ್ರೆಯಾಗಿ ರೂಪುಗೊಳ್ಳಲಿದೆ ಎಂದು ತಿಳಿಸಿದರು.
ಆರಂಭದಲ್ಲಿ ಹೈ ಫ್ಲೋ ಆಕ್ಸಿಜೆನ್ ಹೊಂದಿರುವ 180 ಹಾಸಿಗೆಗಳ ಸೌಕರ್ಯ ಒದಗಿಸಲಾಗುತ್ತಿದ್ದು, ಅಗತ್ಯವಿದ್ದಲ್ಲಿ ವೆಂಟಿಲೇಟರ್ ಅಳವಡಿಸುವ ವ್ಯವಸ್ಥೆ ಹೊಂದಿರುತ್ತದೆ ಎಂದು ಸಚಿವರು ಹೇಳಿದರು. ಆಸ್ಪತ್ರೆಗೆ 30 ವೆಂಟಿಲೇಟರ್ ಒದಗಿಸಲಾಗುತ್ತಿದ್ದು, ನ್ಯೂರೋ ಸರ್ಜರಿ ಓಟಿ, ಕಾರ್ಡಿಯೋ ಓಟಿ, ಸಿಟಿ ಸ್ಕ್ಯಾನ್ ಸೌಲಭ್ಯವನ್ನು ಈ ಆಸ್ಪತ್ರೆ ಒಳಗೊಂಡಿರುತ್ತದೆ. ಮುಂದಿನ 10 ದಿನಗಳ ಒಳಗೆ ಸಂಪೂರ್ಣವಾಗಿ ಸಿದ್ಧವಾಗಲಿದೆ ಎಂದು ಸಚಿವರು ತಿಳಿಸಿದರು.
ನಂತರ ಬೌರಿಂಗ್ ಮತ್ತು ಲೇಡಿ ಕರ್ಜ಼ನ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಸುಧಾಕರ್ ಅವರು, ಚಿಕಿತ್ಸಾ ಸೌಲಭ್ಯ ಸೇರಿದಂತೆ ಇಲ್ಲಿ ಪಾಲಿಸಲಾಗುತ್ತಿರುವ ಸುರಕ್ಷತಾಕ್ರಮಗಳ ಪರಾಮರ್ಶೆ ನಡೆಸಿದರು. ಸೋಂಕಿತರೊಂದಿಗೆ ವೀಡಿಯೋ ಸಂವಾದ ನಡೆಸಿ ಯೋಗಕ್ಷೇಮ ವಿಚಾರಿಸಿದರು. ಚಿಕಿತ್ಸಾ ಸೌಲಭ್ಯಗಳ ಕುರಿತು ಇಲ್ಲಿನ ರೋಗಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ. ಇದೇ ಆಸ್ಪತ್ರೆಯಲ್ಲಿ ಕೋವಿಡ್ ಮರಣ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಮರಣ ಮೌಲ್ಯಮಾಪನಾ ವರದಿ (Death Audit Report ) ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get In Touch With Us info@kalpa.news Whatsapp: 9481252093
Discussion about this post